ಕೋಲ್ಕತ: ತಮ್ಮ ಮನೆ ಹೇಗಿರಬೇಕೆಂಬ ಬಗ್ಗೆ ಪ್ರತಿಯೊಬ್ಬರಿಗೂ ಒಂದು ಕನಸಿರುತ್ತದೆ. ಕೋಲ್ಕತದ ಮಿಂಟು ರಾಯ್ ಅವರು ತಮ್ಮ ಮನೆಯನ್ನು ಒಂದು ಬೃಹತ್ ಹಡಗಿನಾಕಾರದಲ್ಲಿ ತಾವೇ ನಿರ್ಮಿಸುತ್ತಿದ್ದಾರೆ!
2010ರಲ್ಲಿ ನಿರ್ಮಾಣ ಕಾಮಗಾರಿ ಆರಂಭಿಸಿದ ಅವರು ಈಗಲೂ ಕೆಲಸ ಮುಂದುವರಿಸಿದ್ದಾರೆ! ಹಡಗಿನಂತೆ ಮನೆ ನಿರ್ಮಿಸಬೇಕೆಂದು ಎಂಜಿನಿಯರ್ ಬಳಿ ಕೇಳಿಕೊಂಡಾಗ ಅದು ಆಗದ ಕೆಲಸವೆಂದು ಎಲ್ಲರೂ ಕೈಬಿಟ್ಟರು. ಕಡೆಗೆ ತಾವೇ ಕಾರ್ಯರಂಗಕ್ಕಿಳಿದರು.
ಉತ್ತರ 24 ಪರಗಣದಲ್ಲಿ ಬರುವ ಹೆಲೆಂಚ ಜಿಲ್ಲೆಯ ನಿವಾಸಿಯಾಗಿರುವ ಕೃಷಿಕ ಮಿಂಟು ರಾಯ್ ಇದುವರೆಗೆ ಮನೆಗಾಗಿ 15 ಲಕ್ಷ ರೂ. ವ್ಯಯಿಸಿದ್ದಾರೆ. ಹಣವಿಲ್ಲದೇ ಕೆಲವು ಕಾಲ ಮನೆ ನಿರ್ಮಾಣ ನಿಂತೇ ಹೋಗುವ ಪರಿಸ್ಥಿತಿಯಲ್ಲಿತ್ತು. ಗಾರೆ ಕೆಲಸದವರಿಗೆ ಹಣ ಕೊಡುವುದು ಕಷ್ಟವಾದಾಗ ನೇಪಾಳಕ್ಕೆ ಹೋಗಿ ಮೂರು ವರ್ಷ ಆ ಕೆಲಸವನ್ನೂ ಕಲಿತು ಬಂದಿದ್ದಾರೆ.
ಅಂತೂ 2024ಕ್ಕೆ ಈ ಮನೆ ನಿರ್ಮಾಣ ಮಾಡಿ ಮುಗಿಸಿ, ಅದಕ್ಕೆ ತಾಯಿಯ ಹೆಸರಿಡುವ ಉದ್ದೇಶ ಹೊಂದಿದ್ದಾರೆ. ಮನೆ 39 ಅಡಿ ಉದ್ದ, 13 ಅಡಿ ಅಗಲ, 30 ಅಡಿ ಎತ್ತರವಿದೆ. ಮೇಲ್ಮಡಿಯನ್ನು ಒಂದು ರೆಸ್ಟೋರೆಂಟನ್ನಾಗಿ ಪರಿವರ್ತಿಸಿ ಅದರಿಂದ ಆದಾಯ ಹೊಂದುವ ಉದ್ದೇಶ ಹೊಂದಿದ್ದಾರೆ.