Advertisement

ಆಡಳಿತ ಇಷ್ಟವಾಗದ್ದಕ್ಕೆ ಹತ್ಯೆಗೈದೆ: ಶಿಂಜೋ ಅಬೆ ಹಂತಕ ಯಮಗಾಮಿ ಹೇಳಿಕೆ

01:31 AM Jul 09, 2022 | Team Udayavani |

ಟೋಕಿಯೊ: ಜಪಾನ್‌ನ ಮಾಜಿ ಪ್ರಧಾನಿ ಶಿಂಜೋ ಅಬೆ ಅವರನ್ನು ಗುಂಡು ಹಾರಿಸಿ ಹತ್ಯೆ ಮಾಡಿದ್ದು ಏಕೆ? ಇಂಥ ಪ್ರಶ್ನೆ ಜಗತ್ತಿನ ಎಲ್ಲೆಡೆ ಕೇಳಲಾಗುತ್ತಿದೆ. ಹತ್ಯೆ ಮಾಡಿದ ವ್ಯಕ್ತಿಯನ್ನು ನರಾ ಎಂಬ ನಗರದ ನಿವಾಸಿ ಟೆಸ್ಯೋ ಯಮಗಾಮಿ ಎಂದು ಗುರುತಿಸಲಾಗಿದೆ. ಆತನನ್ನು ಬಂಧಿಸಿ, ವಿಚಾರಣೆ ನಡೆಸಲಾಗಿದ್ದು, ಈತ ಜಪಾನ್‌ನಲ್ಲಿರುವ ಸಂಸ್ಥೆಯೊಂದರ ಮೇಲೆ ದ್ವೇಷ ಕಾರುತ್ತಿದ್ದ. ಶಿಂಜೋ ಅಬೆ ಅವರು ಈ ಸಂಸ್ಥೆಯೊಂದರ ಜತೆಗೆ ಗಾಢವಾದ ನಂಟನ್ನು ಇಟ್ಟುಕೊಂಡಿರುವರೆಂದು ಯಮಗಾಮಿಗೆ ದೊಡ್ಡ ನಂಬಿಕೆಯಿದ್ದು ಅದೇ ಕಾರಣಕ್ಕೆ ಅವರನ್ನು ಕೊಂದಿದ್ದಾಗಿ ಆತ ತಿಳಿಸಿದ್ದಾನೆ. ಪ್ರಾಥಮಿಕ ಹಂತದ ವಿಚಾರಣೆಯ ವೇಳೆ ಆತ “ಶಿಂಜೋ ಅಬೆ ಅವರ ಕಾರ್ಯನಿರ್ವಹಣೆ ಬಗ್ಗೆ ಅತೃಪ್ತಿ ಹೊಂದಿದ್ದೆ. ಹೀಗಾಗಿ ಅವರನ್ನು ನಾನು ಕೊಂದೆ’ ಎಂದು ಹೇಳಿದ್ದ.

Advertisement

“ಯಮ’ನಾಗಿಬಿಟ್ಟ ಮಾಜಿ ಯೋಧ!: ಹಂತಕ ಟೆಸ್ಯೋ ಯಮಗಾಮಿ, ಜಪಾನ್‌ನ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿದ್ದ ಮಾಜಿ ಯೋಧ ಎಂಬ ವಿಚಾರ ಎಲ್ಲರನ್ನೂ ಹುಬ್ಬೇರುವಂತೆ ಮಾಡಿದೆ. ಜಪಾನ್‌ನಲ್ಲಿ ಅಲ್ಪಾವಧಿಗಾಗಿ ಭೂಸೇನೆ, ವಾಯುಪಡೆ ಹಾಗೂ ನೌಕಾಪಡೆಗಳಿಗೆ ನೇಮಕಾತಿ ಮಾಡಿಕೊಳ್ಳುವ ವಿಧಾನವೊಂದಿದೆ. ಭೂಸೇನೆ, ವಾಯುಪಡೆಗಳಲ್ಲಿ ಎರಡು ವರ್ಷದ ಸೇವಾವಧಿಯಾಗಿದ್ದರೆ, ನೌಕಾಪಡೆಯಲ್ಲಿ ಮೂರು ವರ್ಷದ ಸೇವಾವಧಿ ಇದೆ. ಟೆಸ್ಯೋ ಯಮಗಾಮಿ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತನಾಗಿದ್ದ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

ಅತ್ತ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು, ದೇಹದಲ್ಲಿ ಎರಡು ಬುಲೆಟ್‌ ಗಾಯಗಳಾಗಿವೆ. ಆದರೆ ದೇಹದಲ್ಲಿ ಯಾವುದೇ ಬುಲೆಟ್‌ಗಳು ಸಿಕ್ಕಿಲ್ಲ.ಒಂದು ಬುಲೆಟ್‌ ಹೃದಯವನ್ನು ಸೀಳಿಕೊಂಡು ಹೋಗಿದೆ ಎಂದಿದ್ದಾರೆ.

ಕೈಯ್ಯಲ್ಲೇ ತಯಾರಿಸಿದ ಗನ್‌: ಹಂತಕ ಬಳಸಿದ್ದ ಸ್ಟೆನ್‌ ಗನ್‌ ಅನ್ನು ಆತ ಖುದ್ದಾಗಿ ಕೈಯಾರೆ ಮನೆ ಯಲ್ಲಿ ತಯಾರಿಸಿದ್ದ ಎಂಬ ಅಚ್ಚರಿಯ ಅಂಶ ಬೆಳಕಿಗೆ ಬಂದಿದೆ. ಎರಡು ಪೈಪ್‌ಗಳನ್ನು ಮರದ ಹಲಗೆಗೆ ಜೋಡಿಸಿ, ಅದಕ್ಕೊಂದು ಗ್ರಿಪ್‌, ಎಲೆಕ್ಟ್ರಾನಿಕ್‌ ಫೈರಿಂಗ್‌ ವ್ಯವಸ್ಥೆಯನ್ನು ಅಳವಡಿಸಿ ಈ ಬಂದೂಕನ್ನು ಆತ ತಯಾರಿಸಿದ್ದ. ಇಷ್ಟು ಕರಾರುವಕ್ಕಾಗಿ ಮಾರಣಾಂತಿಕವಾಗುವಂಥ ಶಸ್ತ್ರಗಳನ್ನು ತಯಾರಿಸಲು ಆತ ನಿಗೆ ಹೇಗೆ ಸಾಧ್ಯವಾಯಿತು? ಇದನ್ನು ಆತ ಎಲ್ಲಿ ಕಲಿತ ಎಂಬುದು ತನಿಖೆಯಿಂದ ಬಹಿರಂಗವಾಗಬೇಕಷ್ಟೆ.

ಇನ್ನು, ಈತನ ಮನೆಯನ್ನು ಜಾಲಾಡಿದ ಪೊಲೀಸರಿಗೆ ಕಚ್ಚಾ ಬಾಂಬ್‌ಗಳು ಸಿಕ್ಕಿವೆ. ಇದರ ಬಗ್ಗೆಯೂ ಈತನನ್ನು ವಿಚಾರಿಸಲಾಗುತ್ತಿದೆ.

Advertisement

ಮಾಜಿ ಪ್ರಧಾನಿ ಸಿಂಗ್‌ ಶೋಕ: ಅಬೆ ನಿಧನಕ್ಕೆ ಮಾಜಿ ಪ್ರಧಾನಿ ಡಾ| ಮನಮೋಹನ್‌ ಸಿಂಗ್‌ ಶೋಕ ವ್ಯಕ್ತ ಪಡಿಸಿದ್ದಾರೆ. ಅಬೆ ಅವರು ತಮ್ಮ ಉತ್ತಮ ಸ್ನೇಹಿತರಾಗಿದ್ದರು. ಜಪಾನ್‌ನ ಪ್ರಧಾನಿಯಾಗಿದ್ದಾಗ ಅವರು ಭಾರತದೊಂದಿಗಿನ ಸ್ನೇಹ ಬಾಂಧವ್ಯದ ವೃದ್ಧಿಗೆ ಹೆಚ್ಚು ಆಸಕ್ತಿ ವಹಿಸಿದ್ದರು ಎಂದು ಅವರು ಬಣ್ಣಿಸಿದ್ದಾರೆ.

ಚೀನದಲ್ಲಿ ಸಂಭ್ರಮ!: ಶಿಂಜೋ ಅಬೆಯವರ ಹತ್ಯೆ ಯನ್ನು ಇಡೀ ಜಗತ್ತು ಖಂಡಿಸಿ ಶೋಕ ವ್ಯಕ್ತಪ ಡಿಸುತ್ತಿದ್ದರೆ, ಚೀನದಲ್ಲಿ ರಾಷ್ಟ್ರೀಯವಾದಿಗಳು ಅಬೆ ಯವರ ಹತ್ಯೆಯ ಬಗ್ಗೆ ಸಂಭ್ರಮಾಚರಣೆ ಮಾಡಿ ತನ್ನ ಹೀನತನ ಮೆರೆದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಅಬೆ ಅವರ ಸಾವಿನಿಂದ ಒಳ್ಳೆಯದಾಗಲಿದೆ ಎಂದಿದ್ದಾರೆ.

ಅಬೆ ಫಾಲೋ ಮಾಡಿದ ಏಕೈಕ ನಾಯಕ ಮೋದಿ
ಶಿಂಜೋ ಅಬೆ ಅವರು ಟ್ವಿಟರ್‌ನಲ್ಲಿ ಕೇವಲ ಮೂವರನ್ನು ಮಾತ್ರ ಫಾಲೋ ಮಾಡುತ್ತಿದ್ದರು. ಅವರಲ್ಲಿ ಮೋದಿ ಕೂಡ ಒಬ್ಬರು ಎಂಬುದು ಹೆಮ್ಮೆ ಪಡುವ ವಿಚಾರ. ಅಬೆ ಅವರು ಫಾಲೋ ಮಾಡುತ್ತಿದ್ದ ಇನ್ನಿಬ್ಬರೆಂದರೆ ಅವರ ಪತ್ನಿ ಅಕೀ ಅಬೆ ಹಾಗೂ ಜಪಾನ್‌ನ ಪತ್ರಕರ್ತ ನವೊಕಿ ಇನೊಸ್‌. ಇಲ್ಲಿ ಗಮನಿಸಬೇಕಾದ ವಿಶೇಷವೇನೆಂದರೆ, ಮೋದಿಯವರು ಪ್ರಧಾನಿಯಾಗುವುದಕ್ಕಿಂತ ಮುನ್ನವೇ ಅಬೆ ಅವರು ಮೋದಿಯವರನ್ನು ಟ್ವಿಟರ್‌ನಲ್ಲಿ ಫಾಲೋ ಮಾಡುತ್ತಿದ್ದರು ಎಂಬುದು. ಇದು ಇವರಿಬ್ಬರ ನಡುವೆ ಆತ್ಮೀಯತೆ ಹಾಗೂ ಭಾರತ- ಜಪಾನ್‌ ನಡುವಿನ ಸ್ನೇಹ, ಬಾಂಧವ್ಯಗಳ ಪ್ರತಿಬಿಂಬವಾಗಿದೆ.

ಅಬೆ ಬಯೋಗ್ರಫಿ
1954ರ ಸೆ. 21: ಟೋಕಿಯೋದಲ್ಲಿ ಶಿಂಜೋ ಅಬೆ ಜನನ. ಅವರ ತಂದೆ ಶಿಂಟಾರೊ ಅಬೆ ಜಪಾನ್‌ನ ಮಾಜಿ ವಿದೇಶಾಂಗ ಸಚಿವ.ಶಿಂಜೋ ಅವರ ತಾತ ನೊಬುಸುಕೆ ಅಬೆ ಅವರು ಜಪಾನ್‌ನ ಪ್ರಧಾನಿಯಾಗಿದ್ದರು.
1977: ಟೋಕಿಯೋದ ಸೆಯ್‌ಕೆಯ್‌ ವಿವಿಯಿಂದ ಪದವಿ. ಕ್ಯಾಲಿಫೋರ್ನಿಯಾ ವಿವಿಯಲ್ಲಿ ಪಬ್ಲಿಕ್‌ ಪಾಲಿಸಿ ವಿಷಯ ಕಲಿಯಲು ಪ್ರಯಾಣ.
1979: ಟೋಕಿಯೋದ ಕೋಬ್‌ ಸ್ಟೀಲ್‌ ಕಂಪೆನಿಯಲ್ಲಿ ಉದ್ಯೋಗ.
1993: ಮೊದಲ ಬಾರಿಗೆ ಸಂಸತ್‌ ಪ್ರವೇಶ.
2005: ಪ್ರಧಾನಿ ಜುನಿಚಿರೊ ಸಂಪುಟದಲ್ಲಿ ಸಂಪುಟ ಸಚಿವರಾಗಿ ಸೇರ್ಪಡೆ.
2006: ಜಪಾನ್‌ನ ಪ್ರಧಾನಿಯಾಗಿ ಪ್ರಮಾಣ.
2012: 2ನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ.
2020: ಆರೋಗ್ಯ ಸಮಸ್ಯೆಯಿಂದ ಅಧಿಕಾರ ತ್ಯಾಗ.
2021: ತೈವಾನ್‌ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸಲು ಮುಂದಾದ ಚೀನ ವಿರುದ್ಧ ತೀವ್ರ ಟೀಕೆ.
2022, ಜು. 8: ಹಂತಕನ ಗುಂಡಿಗೆ ಬಲಿ.

ಹತ್ಯೆಗೊಳಗಾದ ಜಗತ್ತಿನ ಪ್ರಮುಖ ನಾಯಕರು
ಇಂದಿರಾ ಗಾಂಧಿ
ಭಾರತದ ಮೊದಲ ಮಹಿಳಾ ಪ್ರಧಾನಿ, ಗಟ್ಟಿತನಕ್ಕೆ ಹೆಸರು ವಾಸಿಯಾಗಿದ್ದ ಇಂದಿರಾ ಗಾಂಧಿಯವರು 1984, ಅ.31 ರಂದು ತಮ್ಮ ಸಿಖ್‌ ಅಂಗರಕ್ಷಕರಿಂದಲೇ ಕೊಲ್ಲಲ್ಪಟ್ಟರು.

ರಾಜೀವ್‌ ಗಾಂಧಿ
ಭಾರತದ 7ನೇ ಪ್ರಧಾನಿ ರಾಜೀವ್‌ ಗಾಂಧಿ, 1991 ಮೇ 21ರಂದು ಚೆನ್ನೈ ಸಮೀಪದ ಶ್ರೀಪೆರಂಬದೂರಿನಲ್ಲಿ ಎಲ್‌ಟಿಟಿಇ ಆತ್ಮಾಹುತಿ ಬಾಂಬರ್‌ನಿಂದ ಹತ್ಯೆಗೊಳಗಾದರು.

ಬೆನಜೀರ್‌ ಭುಟ್ಟೊ
2007 ಡಿ.27ರಂದು ಪಾಕಿಸ್ಥಾನದ ಮಾಜಿ ಪ್ರಧಾನಿ ಬೆನಜೀರ್‌ ಭುಟ್ಟೊ ರಾವಲ್ಪಿಂಡಿಯಲ್ಲಿ ನಡೆದ ಆತ್ಮಾಹುತಿ ಬಾಂಬ್‌ ಸ್ಫೋಟದಿಂದ ಸಾವನ್ನಪ್ಪಿದರು.

ಜಾನ್‌ ಎಫ್ ಕೆನಡಿ
ಅಮೆರಿಕ ಅಧ್ಯಕ್ಷ ಜಾನ್‌ ಎಫ್ ಕೆನಡಿ 1963ರ ನ.22 ರಂದು ತಮ್ಮ ಬೆಂಗಾವಲು ವಾಹನಗಳೊಂದಿಗೆ ತೆರೆದ ಕಾರಿನಲ್ಲಿ ಮೆರವಣಿಗೆ ಮಾಡುತ್ತಿದ್ದಾಗ ಲೀ ಹಾರ್ವೆ ಓಸ್ವಾಲ್ಡ್‌ ಎಂಬಾತ‌ ಗುಂಡಿಟ್ಟು ಹತ್ಯೆ ಮಾಡಿದ್ದ.

ಅಬ್ರಹಾಂ ಲಿಂಕನ್‌
ಅಮೆರಿಕ ಕಂಡ ಸರ್ವಶ್ರೇಷ್ಠ ನಾಯಕರಲ್ಲೊಬ್ಬರಾದ ಅಬ್ರಹಾಂ ಲಿಂಕನ್‌ ಮೇಲೆ 1865, ಎ.14 ರಂದು ಚಿತ್ರಮಂದಿರದಲ್ಲಿ ಗುಂಡು ಹಾರಿಸಲಾಯಿತು. ಮರುದಿನ ಅವರು ಮೃತಪಟ್ಟರು.

ಮಾರ್ಟಿನ್‌ ಲೂಥರ್‌ ಕಿಂಗ್‌ (ಜೂನಿಯರ್‌)
ಅಮೆರಿಕದಲ್ಲಿ ಮಾನವ ಹಕ್ಕುಗಳಿಗಾಗಿ ಹೋರಾಟ ಮಾಡಿದ ಧೀಮಂತ ನಾಯಕ ಮಾರ್ಟಿನ್‌ ಲೂಥರ್‌ ಕಿಂಗ್‌ (ಜೂನಿಯರ್‌) ಅವರನ್ನು ಮೆಂಫಿಸ್‌ನಲ್ಲಿ 1968, ಎ. 4ರಂದು ಜೇಮ್ಸ್‌ ಅರ್ಲ್ ರಾಯ್‌ ಎಂಬಾತ ಹತ್ಯೆ ಮಾಡಿದ್ದ.

ಖಾಸಿಂ ಸೊಲೆಮನಿ
ಇರಾನಿನ ಅಗ್ರ ಸೇನಾನಾಯಕರಾಗಿದ್ದ ಖಾಸಿಂ ಸೊಲೆಮನಿ, 2020, ಜ.3ರಂದು ಬಾಘಾªದ್‌ನಲ್ಲಿ ಕೊಲ್ಲಲ್ಪಟ್ಟರು. ಅಮೆರಿಕ ಸೇನೆಯ ಡ್ರೋನ್‌ ದಾಳಿಯಲ್ಲಿ ಸೊಲೆಮನಿ ಮೃತಪಟ್ಟರು.

ಮುವಮ್ಮರ್‌ ಗಡಾಫಿ
ಲಿಬಿಯದ ಕ್ರೂರ ಸರ್ವಾಧಿಕಾರಿ ಮುವಮ್ಮರ್‌ ಗಡಾಫಿಯನ್ನು 2011, ಅ.20ರಂದು ಸಿರ್ತೆ ಯಲ್ಲಿ ಗುಂಡು ಹಾರಿಸಿ ಕೊಲ್ಲಲಾಯಿತು.

ಮಾಲ್ಕಮ್‌ ಎಕ್ಸ್‌
ಅಮೆರಿಕದ ಧಾರ್ಮಿಕ ಮತ್ತು ಮಾನವ ಹಕ್ಕುಗಳ ಹೋರಾಟಗಾರ ಮಾಲ್ಕಮ್‌ ಎಕ್ಸ್‌ರನ್ನು ಅವರ 39ನೇ ವರ್ಷದಲ್ಲಿ ಗುಂಡು ಹಾರಿಸಿ ಹತ್ಯೆ ಮಾಡಲಾಯಿತು. ಅವರನ್ನು ನೇಶ‌ನ್‌ ಆಫ್ ಇಸ್ಲಾಮ್‌ ಎಂಬ ತೀವ್ರವಾದಿ ಸಂಘಟನೆಗೆ ಸೇರಿದ ಸದಸ್ಯರು ನ್ಯೂಯಾರ್ಕ್‌ನಲ್ಲಿ ಕೊಂದರು.

Advertisement

Udayavani is now on Telegram. Click here to join our channel and stay updated with the latest news.

Next