Advertisement

Congress ಶಾಸಕರಿಂದಲೇ ಶಿಂಧೆ ಮಾದರಿ: ಬಿಜೆಪಿ

01:04 AM May 21, 2024 | Team Udayavani |

ಬೆಂಗಳೂರು: ಈ ಸರಕಾರವನ್ನು ಕಾಂಗ್ರೆಸ್‌ ಶಾಸಕರೇ ಕೆಡವುತ್ತಾರೆ. ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆಯವರ ಮಾತು ನಿಜವಾಗಲಿದೆ. ಸರಕಾರವನ್ನು ಪತನ ಗೊಳಿಸುವುದಕ್ಕೆ ಕಾಂಗ್ರೆಸಿಗರೇ ಮುಹೂರ್ತ ನಿಗದಿ ಮಾಡಿ ದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಖದಲ್ಲಿ ಅಧಿಕಾರ ತ್ಯಾಗದ ಆತಂಕ ಎದ್ದು ಕಾಣುತ್ತಿದೆ ಎಂದು ವಿಪಕ್ಷ ನಾಯಕ ಆರ್‌. ಅಶೋಕ್‌ ಟೀಕಿಸಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸರಕಾರದ ಅವಧಿ ಮುಗಿಯತೆಂಬ ಕಾರಣಕ್ಕೆ ಜನರಿಗೆ ಧನ್ಯವಾದ ತಿಳಿಸಿದ್ದಾರೆಯೋ ಅಥವಾ ಕಾನೂನು ಸುವ್ಯವಸ್ಥೆ ಹಾಳು ಮಾಡಿರುವ ಕೊಲೆಗಡುಕರಿಗೆ ಧನ್ಯವಾದ ಹೇಳಿದ್ದಾರೆಯೋ ಗೊತ್ತಿಲ್ಲ. ಈ ಸರಕಾರ ಅಧಿಕಾರಕ್ಕೆ ಬಂದ ಅನಂತರ ರಾಜ್ಯದ ಹೆಣ್ಣುಮಕ್ಕಳಿಗೆ ಬದುಕಿನ ಗ್ಯಾರಂಟಿ ಇಲ್ಲವಾಗಿದೆ. ಸರಕಾರ ವೆಂಟಿಲೇಟರ್‌ನಲ್ಲಿದ್ದು, ಲೋಕಸಭಾ ಚುನಾವಣೆ ಮುಗಿದ ಬಳಿಕ ಕಾಂಗ್ರೆಸ್‌ ಶಾಸಕರೇ ವೆಂಟಿಲೇಟರ್‌ ಕಿತ್ತು ಹಾಕುತ್ತಾರೆ ಎಂದರು.

ಅಂಜಲಿ ಕೊಲೆ ಪ್ರಕರಣದಲ್ಲಿ ಪೊಲೀಸರ ಲೋಪವಿದೆ ಎಂದು ಗೃಹ ಸಚಿವ ಡಾ| ಪರಮೇಶ್ವರ್‌ ಅವರೇ ಹೇಳಿದ್ದಾರೆ. ಹಾಗಾದರೆ ಈ ಸರಕಾರ ಯಾಕೆ ಬದುಕಿರಬೇಕು? ಹಿಂದೂಗಳ ಮಾರಣಹೋಮವಾದರೂ ಕೇಳುವವರಿಲ್ಲ. ಬೆಂಗಳೂರಿನಲ್ಲಿ ಮುಸ್ಲಿಮರು ಪೊಲೀಸ್‌ ಠಾಣೆಗೆ ಹೋಗಿ ಸಬ್‌ ಇನ್‌ಸ್ಪೆಕ್ಟರ್‌ಗೆ ಕಪಾಳಮೋಕ್ಷ ಮಾಡುವ ಸ್ಥಿತಿಯಿದೆ. ಕೊಲೆಗಾರರ ಬದಲು ಈ ಸರಕಾರವನ್ನೇ ನೇಣಿಗೇರಿಸಬೇಕು. ಈ ಸರಕಾರ ಬಂದ ಅನಂತರ ವಿಧಾನಸೌಧದಲ್ಲೇ ಪಾಕಿಸ್ಥಾನ ಜಿಂದಾಬಾದ್‌ ಹೇಳಲು ಅನುಮತಿ ಸಿಕ್ಕಿದೆ. ಹನುಮಾನ್‌ ಚಾಲೀಸ ಕೇಳಿದರೆ, ಜೈ ಶ್ರೀರಾಮ್‌ ಎಂದರೆ ಹಲ್ಲೆಯಾಗುತ್ತದೆ. ಕಾನೂನು-ಸುವ್ಯವಸ್ಥೆ ಕುಸಿದು ಬಿದ್ದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಕೊಲೆಗಡುಕರ ಸ್ವರ್ಗವಾಗಿ ಬದಲಾಗಿದ್ದು, ಸರಕಾರದ ಒಂದು ವರ್ಷದ ಸಾಧನೆ ಶೂನ್ಯ. ಒಂದೋ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಇಲ್ಲವಾದರೆ ರಾಜ್ಯಪಾಲರು ಈ ಸರಕಾರವನ್ನು ವಜಾಗೊಳಿಸಬೇಕು ಎಂದು ಆರ್‌. ಅಶೋಕ್‌ ಆಗ್ರಹಿಸಿದರು.

ರಸ್ತೆ, ನೀರಾವರಿ, ಸೇತುವೆ ಸಹಿತ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಶಾಲೆ ಕಟ್ಟಡ ದುರಸ್ತಿಗೂ ಹಣವಿಲ್ಲ. ಬಸ್‌ ಚಾಲಕರಿಗೆ, ಆಂಬ್ಯುಲೆನ್ಸ್‌ ಚಾಲಕರಿಗೆ ಸಂಬಳವಿಲ್ಲ, ರೈತರಿಗೆ ಹಾಲಿನ ಪ್ರೋತ್ಸಾಹಧನ ಸಿಕ್ಕಿಲ್ಲ. ಸಿಎಂ ಸಿದ್ದರಾಮಯ್ಯನವರು 15 ಬಜೆಟ್‌ ಮಂಡಿಸಿ ಒಂದೂವರೆ ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ. ಇತಿಹಾಸದಲ್ಲೇ ಮೊದಲ ಬಾರಿಗೆ ಕೇಂದ್ರ ಸರಕಾರದಿಂದ ದಾಖಲೆಯ ಬರ ಪರಿಹಾರ ಸಿಕ್ಕಿದೆ. ಆದರೆ ಇನ್ನೂ 2 ಲಕ್ಷ ರೈತರಿಗೆ ಪರಿಹಾರ ನೀಡಬೇಕಿದೆ. ರಾಜ್ಯ ಸರಕಾರ ಕೆಲವರಿಗೆ 300, 400 ರೂ. ಪರಿಹಾರ ನೀಡಿದೆ. ಸರಕಾರ ನೀಡುವ ಚೆಕ್‌ಗಾದರೂ ಮರ್ಯಾದೆ ಬೇಡವೇ ಎಂದು ವ್ಯಂಗ್ಯವಾಡಿದರು.

Advertisement

ಕನ್ನಡ ಬಾರದ ಶಿಕ್ಷಣ ಸಚಿವರು
ರಾಜ್ಯಕ್ಕೆ ಕನ್ನಡ ಬಾರದ ಶಿಕ್ಷಣ ಸಚಿವರನ್ನು ಕೊಟ್ಟಿದ್ದಕ್ಕೆ ಸಿದ್ದರಾಮಯ್ಯನವರಿಗೆ ದೊಡ್ಡ ನಮಸ್ಕಾರ ಹೇಳಬೇಕು. ಎಸೆಸೆಲ್ಸಿ ಫ‌ಲಿತಾಂಶಕ್ಕೂ ಬರ ಬಂದಿದೆ. ಕೃಪಾಂಕ ನೀಡಿ ವಿದ್ಯಾರ್ಥಿಗಳನ್ನು ಪಾಸ್‌ ಮಾಡಿದ್ದಾರೆ. ಸಿಇಟಿ ಪರೀಕ್ಷೆಯಲ್ಲಿಯೂ ವಿದ್ಯಾರ್ಥಿಗಳ ಭವಿಷ್ಯದ ಜತೆ ಆಟವಾಡಿದ್ದಾರೆ. ಈ ಸರಕಾರ ಶಿಕ್ಷಣ ಇಲಾಖೆಗೆ ಅನುದಾನ ಕಡಿಮೆ ಮಾಡಿದೆ. ಮಣಿವಣ್ಣನ್‌ ಎಂಬ ಅಧಿಕಾರಿ ಕುವೆಂಪು ವಾಣಿಯನ್ನು ತಿದ್ದುವಂತಹ ಸ್ಥಿತಿ ಇದೆ ಎಂದರು.

ಬ್ರ್ಯಾಂಡ್‌ ಬೆಂಗಳೂರು “ಬ್ಯಾಡ್‌ ಬೆಂಗಳೂರು’
ಡಿಸಿಎಂ ಡಿ.ಕೆ. ಶಿವಕುಮಾರ್‌ ಆಳ್ವಿಕೆಯಲ್ಲಿ “ಬ್ರ್ಯಾಂಡ್‌ ಬೆಂಗಳೂರು’ “ಬ್ಯಾಡ್‌ ಬೆಂಗಳೂರು’ ಆಗಿದೆ. ಡೆವಲಪರ್‌ಗಳಿಂದ ಪ್ರತೀ ಚದರ ಅಡಿಗೆ 100 ರೂ. ಕಾಂಗ್ರೆಸ್‌ ಟ್ಯಾಕ್ಸ್‌ ನಿಗದಿ ಮಾಡಲಾಗಿದ್ದು, ಹೈಕಮಾಂಡ್‌ಗೆ ಸುರಂಗ ಮಾರ್ಗದಲ್ಲಿ ರವಾನೆ ಮಾಡುವ ಯೋಜನೆ ಹೊಂದಿದ್ದಾರೆ ಎಂದು ಅಶೋಕ್‌ ಗಂಭೀರ ಆರೋಪ ಮಾಡಿದ್ದಾರೆ.

ಲೋಕಸಭಾ ಚುನಾವಣೆ ಬಳಿಕ ಅಭಿವೃದ್ಧಿ ಶೂನ್ಯ ಕಾಂಗ್ರೆಸ್‌ ಸರಕಾರದ ಹಣೆಬರಹ ನಿರ್ಧಾರವಾಗುತ್ತದೆ. ಗ್ಯಾರಂಟಿ ಯೋಜನೆಯೇ ಅಭಿವೃದ್ಧಿ ಎಂದು ಬಿಂಬಿಸುವ ವ್ಯರ್ಥ ಪ್ರಯತ್ನವನ್ನು ಸರಕಾರ ನಡೆಸುತ್ತಿದೆ. ಒಂದು ವರ್ಷದಲ್ಲಿ ಒಂದೇ ಒಂದು ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿಲ್ಲ. ಗುದ್ದಲಿ ಪೂಜೆ ನಡೆಸಿದ ಉದಾಹರಣೆಯೂ ಇಲ್ಲ.
-ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next