ನಮ್ಮ ದೇಶದಲ್ಲಿ ಎಷ್ಟು ಹುಲಿಗಳಿವೆ ಎಂದರೆ ಈಗ ಎಲ್ಲರ ಹತ್ತಿರವೂ ಉತ್ತರವಿದೆ. ಹಾಗೆಯೇ, ಯಾವ ರಾಜ್ಯದಲ್ಲಿ ಎಷ್ಟಿವೆ, ನಮ್ಮ ರಾಜ್ಯದಲ್ಲಿ ಎಷ್ಟು ಹುಲಿಗಳಿವೆ, ಇನ್ನಿತರ ಉತ್ತರಗಳನ್ನು ವಿಜ್ಞಾನ ಆಗಲೇ ದೊರಕಿಸಿಕೊಟ್ಟಿದೆ. ಆದರೆ ಕರ್ನಾಟಕದಲ್ಲಿ ಎಷ್ಟು ಚಿರತೆಗಳಿವೆ ಎಂದರೆ ನಮ್ಮಲ್ಲಿ ಉತ್ತರವಿಲ್ಲ. ಹಾಗೆಯೇ ಅವುಗಳ ಸಂಖ್ಯೆ ಯಾವ ಯಾವ ಪ್ರದೇಶದಲ್ಲಿ ಎಷ್ಟಿದೆ, ಸಂಖ್ಯೆಯಲ್ಲಿನ ಏರುಪೇರಿಗೆ ಕಾರಣಗಳೇನು? ಅವುಗಳ ನೆಲಹರವಿನಲ್ಲಿ ವ್ಯತ್ಯಾಸವಿದೆಯೇ? ಹೀಗೆ ಹಲವು ಪ್ರಶ್ನೆಗಳಿಗೆ ನಮ್ಮಲ್ಲಿ ಉತ್ತರವಿಲ್ಲ. ಅವುಗಳ ಇರುವಿಕೆ ದೊಡ್ಡ ಕಾಡುಗಳಿಂದ ಹಿಡಿದು, ಗುಡ್ಡಗಾಡು ಪ್ರದೇಶ, ಒಣ ಕುರುಚಲು ಕಾಡುಗಳು, ನಿತ್ಯಹರಿದ್ವರ್ಣದ ಕಾಡುಗಳು ಹೀಗೆ ಹಲವು ವಿಧವಾದ ಆವಾಸ ಸ್ಥಾನಗಳ ವ್ಯಾಪ್ತಿಯಲ್ಲಿ ಹರಡಿದೆ. ಹಾಗಾಗಿ ಚಿರತೆಯನ್ನು ನನ್ನ ವೈಜ್ಞಾನಿಕ ಅಧ್ಯಯನದ ಕೇಂದ್ರಬಿಂದುವಾಗಿಟ್ಟುಕೊಂಡೆ. ರಾಜ್ಯದ ಹಲವು ಪ್ರದೇಶಗಳಲ್ಲಿ ಚಿರತೆಗಳಿಗೆ ಸಂಬಂಧಪಟ್ಟ ವಿಷಯವಾಗಿ ಅಧ್ಯಯನವನ್ನು ಪ್ರಾರಂಭಿಸಿದೆ. ಇದರಲ್ಲಿ ಪ್ರಮುಖವಾಗಿ ನಮಗೆ ತಿಳಿಯಬೇಕಾಗಿದ್ದ ಅಂಶವೆಂದರೆ ನಮ್ಮಲ್ಲಿ ಎಷ್ಟು ಚಿರತೆಗಳಿವೆ ಮತ್ತು ಅವುಗಳ ಸಂಖ್ಯೆಯಲ್ಲಿನ ವ್ಯತ್ಯಾಸಗಳಿಗೆ ಸಾಧ್ಯವಾದ ಕಾರಣಗಳನ್ನು ಪ್ರಾಥಮಿಕವಾಗಿ ಪರಿಶೀಲಿಸಬೇಕಾಗಿತ್ತು.
ಈ ನಿಟ್ಟಿನಲ್ಲಿ ಚಿರತೆಗಳ ವಿಚಾರದಲ್ಲಿ ನಮಗಿರುವ ಒಂದು ಅನುಕೂಲವೆಂದರೆ ಅವುಗಳ ಮೈಮೇಲಿರುವ ಗುಲಾಬಿ ಹೂವಿನ ದಳಗಳ ಆಕಾರದ ಚುಕ್ಕೆಗಳು. ಈ ಚುಕ್ಕೆಗಳ ಆಧಾರದ ಮೇಲೆ ವೈಯಕ್ತಿಕ ಚಿರತೆಗಳನ್ನು ಗುರುತಿಸಬಹುದು. ಹೀಗೆ ಮೈಮೇಲಿನ ಗುರುತುಗಳನ್ನು ಆಧರಿಸಿ ಜಿರಾಫೆ, ಕತ್ತೆ ಕಿರುಬ, ತಿಮಿಂಗಿಲ, ಹಂದಿ ಮೀನು (ಡಾಲ್ಫಿನ್), ಹುಲಿ, ಕೆಲ ಜಾತಿಯ ಹಲ್ಲಿಗಳು, ಹೀಗೆ ಮೈಮೇಲೆ ನೈಸರ್ಗಿಕವಾಗಿ ಗುರುತುಗಳುಳ್ಳ ಹಲವಾರು ಪ್ರಭೇದದ ವನ್ಯಜೀವಿಗಳಲ್ಲಿ ವೈಯಕ್ತಿಕ ಪ್ರಾಣಿಗಳನ್ನು ಗುರುತಿಸ ಬಹುದು. ಈ ವಿಧಾನದಿಂದ ಪ್ರಾಣಿಗಳ ಸಂಖ್ಯೆಯನ್ನರಿಯಲು ಪ್ರಚಲಿತವಾಗಿ ಉಪಯೋಗಿಸುವ ಸಾಧನವೆಂದರೆ ಕ್ಯಾಮೆರಾ ಟ್ರಾಪ್‌ಗ್ಳು. ಇವುಗಳನ್ನು ಪ್ರಾಣಿಗಳು ಹಾದುಹೋಗುವ ದಾರಿಗಳಲ್ಲಿ ಅಳವಡಿಸಿ, ಈ ಸ್ವಯಂಚಾಲಿತ ಕ್ಯಾಮೆರಾಗಳು ಪ್ರಾಣಿಗಳ ಚಿತ್ರಗಳನ್ನು ತೆಗೆದ ನಂತರ, ಆ ಚಿತ್ರಗಳನ್ನು ಹೋಲಿಸಿ ಅವುಗಳನ್ನು ವೈಯಕ್ತಿಕವಾಗಿ ಗುರುತಿಸಬಹುದು. ಇದೇ ವೈಜ್ಞಾನಿಕ ತಂತ್ರವನ್ನು ನಾನು ಚಿರತೆಗಳ ಸಂಖ್ಯೆಯ ಅಧ್ಯಯನಕ್ಕಾಗಿ ಬಳಸಲು ನಿರ್ಧರಿಸಿದೆ. ಈ ಅಧ್ಯಯನದಿಂದ ಈಗಾಗಲೇ ಚಿರತೆಗಳ ಬಗ್ಗೆ ಹಲವಾರು ಕುತೂಹಲಕಾರಿ ಅಂಶಗಳು ತಿಳಿದುಬರುತ್ತಿವೆ.
Advertisement
ಕಾವೇರಿ ವನ್ಯಜೀವಿಧಾಮದ ಭೀಮೇಶ್ವರಿ ಪ್ರದೇಶದಲ್ಲಿ 2014ರ ಜನವರಿಯ ಒಂದು ಮಧ್ಯರಾತ್ರಿ ನಮ್ಮ ಕ್ಯಾಮೆರಾಟ್ರಾಪ್‌ನಲ್ಲಿ ಒಂದು ತಾಯಿ ಚಿರತೆಯೊಟ್ಟಿಗೆ ಮೂರು ಮರಿಗಳು ಸಿಕ್ಕಿದ್ದವು. ಯಥೇತ್ಛವಾಗಿರುವ ಸುಂದರವಾದ ಕಾರಚ್ಚಿ ಮರ ಮತ್ತು ಅವುಗಳ ಮಧ್ಯೆ ಹುಲುಸಾಗಿ ಬೆಳೆದ ಹುಲ್ಲು, ಇದರ ಮಧ್ಯೆ ಹಾದು ಹೋಗುವ ಕಾಡಿನ ಮಧ್ಯೆಯಿರುವ ರಸ್ತೆಯಲ್ಲಿ ಈ ಕುಟುಂಬ ನಮಗೆ ತಮ್ಮ ಇರುವಿಕೆಯನ್ನು ತಿಳಿಸಿಕೊಟ್ಟವು. ಬಹು ಸಂತೋಷವಾಯಿತು. ಸುಮಾರು ಆರು ತಿಂಗಳ ಮರಿಗಳು ಕ್ಯಾಮೆರಾಟ್ರಾಪ್ ಮುಂದೆ ನೆಗೆದಾಡಿದ್ದವು. ಅವುಗಳಿಗೆ ಸ್ವಲ್ಪ ಗಾಬರಿ ಕೂಡ ಆಗಿರಬಹುದು.
Related Articles
Advertisement
ಎರಡನೆಯ ಹೆಣ್ಣು ಮರಿ ತನ್ನ ಒಡಹುಟ್ಟಿದ ಶಿಂಷಾದ ಅಭಿಮುಖವಾಗಿ, ತನ್ನ ಹುಟ್ಟು ನೆಲೆಯಿಂದ ಪೂರ್ವ ದಿಕ್ಕಿನಲ್ಲಿ ಸಂಚರಿಸಿ ಹೈರಾ, ಗಾಳಿಬೊರೆ ಪ್ರದೇಶದಲ್ಲಿ ತನ್ನ ನೆಲೆ ಮಾಡಿ ಕೊಂಡಿತ್ತು. ಇದು ಕಾವೇರಿ ನದಿ ತಟದಲ್ಲಿಯೇ ಕೆಲ ಬಾರಿ ನಮಗೆ ಸಿಕ್ಕಿದ ಪ್ರಯುಕ್ತ ಇದಕ್ಕೆ ಕಾವೇರಿ ಎಂದು ನಾಮಕರಣ ಮಾಡಿದರೂ ನಮ್ಮ ದಾಖಲೆಗಳಲ್ಲಿ ಅದು ಸಿಯು-68 ಆಯಿತು. ನಮ್ಮ ಸಂತೋಷಕ್ಕೆ ಮೂರನೇ ಮರಿ ಕೂಡ ಬದುಕಿತ್ತು. ಮುಂಚೆ ಅದರ ಲಿಂಗವನ್ನು ಪತ್ತೆ ಮಾಡಲು ಆಗಿರಲಿಲ್ಲ, ಆದರೆ 2016ರ ಚಿತ್ರಗಳಿಂದ ಅದು ಗಂಡೆಂದು ತಿಳಿಯಿತು. ಈ ಚಿರತೆ ಇನ್ನೂ ಹೆಚ್ಚಿನ ಸಾಹಸ ಮಾಡಿ ತಾನು ಹುಟ್ಟಿದ್ದ ಜಾಗದಿಂದ ದಕ್ಷಿಣಕ್ಕೆ ಸಂಚರಿಸಿ, ಕಾವೇರಿ ನದಿಯನ್ನೇ ದಾಟಿ, ಕೊಳ್ಳೇಗಾಲ ತಾಲೂಕಿನ ಮತ್ತಿಪುರದ ಹತ್ತಿರವಿದ್ದ ಕಾಡು ಸೇರಿಬಿಟ್ಟಿತ್ತು. 2014ರಲ್ಲಿ ಚಿಕ್ಕ ಮುದ್ದಾದ ಮರಿಯಾಗಿದ್ದ ಈ ಚಿರತೆ ಇಂದು ದೊಡ್ಡ, ಬಲಿಷ್ಠ ಪ್ರಾಣಿಯಾಗಿತ್ತು. ಮಿರ ಮಿರ ಮಿಂಚುವ ಅದರ ತುಪ್ಪಳ, ಅದಕ್ಕೆ ಇನ್ನೂ ಹೆಚ್ಚು ಶೋಭೆಯನ್ನು ತಂದುಕೊಟ್ಟಿತ್ತು. ಬೇಸಿಗೆ ಸಮಯದಲ್ಲಿ ಕಾವೇರಿ ನದಿಯಲ್ಲಿ ನೀರು ಕಡಿಮೆಯಾಗಿದ್ದ ಸಮಯದಲ್ಲಿ, ನದಿಯಲ್ಲಿನ ಬಂಡೆಗಳಿಂದ ಬಂಡೆಗೆ ಮೇಲೆ ಹಾರಿ, ನದಿ ದಾಟಿರುವ ಸಾಧ್ಯತೆಯಿದೆ. ಕಾವೇರಿ ವನ್ಯಜೀವಿಧಾಮದ ದಕ್ಷಿಣ ಭಾಗದಲ್ಲಿ ತನ್ನ ಹುಟ್ಟು ಪ್ರದೇಶದಿಂದ ಸುಮಾರು 20 ಕಿಲೋಮೀಟರು ದೂರದಲ್ಲಿ ತನ್ನ ಕಾರ್ಯ ವ್ಯಾಪ್ತಿಯನ್ನು ಈಗ ಸ್ಥಾಪಿಸಿಕೊಂಡಿತ್ತು. ಇದನ್ನು ನಾವು ಮುತ್ತತ್ತಿ ಎಂದು ಕರೆದೆವು.
ಚಿರತೆ ಮರಿಗಳು ಒಂದರಿಂದ ಒಂದೂವರೆ ವರ್ಷಗಳಲ್ಲಿ ತಮ್ಮ ತಾಯಿಯನ್ನು ತೊರೆದು ತಮ್ಮದೇ ಸ್ವಂತ ಪ್ರಪಂಚವನ್ನು ಕಟ್ಟಿಕೊಳ್ಳುತ್ತವೆ. ಕೆಲವೊಮ್ಮೆ ಗಂಡು ಚಿರತೆ ಮರಿಗಳು ತಾಯಿಯ ಮೇಲೆ ಸ್ವಲ್ಪ$ಹೆಚ್ಚು ದಿನಗಳು ಅವಲಂಬಿತವಾಗಿರಬಹುದು. ಬಹುಶಃ ಮನುಷ್ಯ ಪ್ರಪಂಚದ ಹಾಗಿರಬೇಕು. ಎರಡು ವರ್ಷದಲ್ಲಿ ಮರಿಗಳೆಲ್ಲ ದೊಡ್ಡವಾಗಿ ತಮ್ಮ ತಾಯಿಯ ಕಾರ್ಯವ್ಯಾಪ್ತಿಯ ಪ್ರದೇಶದಿಂದ ಮನುಷ್ಯರಂತೆ ದೂರ ಹೋಗಿ, ತಮ್ಮದೇ ಬದುಕನ್ನು ಕಟ್ಟಿಕೊಂಡಿದ್ದವು. ಹೀಗೆ ಈ ಮರಿಗಳು ತಮ್ಮ ಒಡ ಹುಟ್ಟಿದವರಿಂದ ದೂರ ಹೋಗುವುದು ಸಹ ವಿಜ್ಞಾನದ ದೃಷ್ಟಿಯಿಂದ ಮುಖ್ಯ. ತಮ್ಮ ತಾಯಿ, ಮತ್ತು ಒಡ ಹುಟ್ಟಿದವರಿರುವ ಪ್ರದೇಶದಲ್ಲೇ ಇವುಗಳು ಕೂಡ ತಮ್ಮ ನೆಲಹರುವನ್ನು ಸ್ಥಾಪಿಸಿಕೊಂಡರೆ ಹತ್ತಿರದ ಸಂಬಂಧಿಗಳಲ್ಲೇ ಸಂತಾನಾಭಿವೃದ್ಧಿಯಾಗುವ ಸಾಧ್ಯತೆಗಳು ಹೆಚ್ಚಾಗಿ ಅನುವಂಶಿಕ ತೊಂದರೆಗಳಾಗುವ ಸಂಭವವಿರುತ್ತದೆ.
ಇವುಗಳ ತಾಯಿಯಾದ ಸಿಯು-12 ಇಂದು ಬದುಕಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಕಾವೇರಿ ವನ್ಯಜೀವಿ ಧಾಮದ ಚಿರತೆಗಳ ಸಂರಕ್ಷಣೆಯಲ್ಲಿ ತನ್ನ ಪಾತ್ರವನ್ನು ಚೊಕ್ಕಟವಾಗಿ ನಿರ್ವಹಿಸಿ ತನ್ನ ಸಂತತಿಯನ್ನು ಮುಂದೆ ತರಲು ತನಗಿದ್ದ ಮೂರು ಮರಿಗಳನ್ನು ಜೋಪಾನ ಮಾಡಿ, ಕಾಡಿನಲ್ಲಿರುವ ಎಲ್ಲಾ ಅಡೆತಡೆಗಳನ್ನು ಮೆಟ್ಟಿ, ಮರಿಗಳಿಗೆ ಬೇಕಾಗುವ ಆಹಾರವನ್ನು ಒದಗಿಸಿ, ಸಲುಹಿ, ಬೀಳ್ಕೊಟ್ಟಿದೆ. ಚಿರತೆಗಳು ಮೂರು ಮರಿಗಳನ್ನು ದೊಡ್ಡದು ಮಾಡುವುದು ಸುಲಭದ ಕೆಲಸವಲ್ಲ. ಅವುಗಳಿಗೆ ಬೇಕಾದ ಆಹಾರವನ್ನು ಅವುಗಳ ಬೆಳವಣಿಗೆಗೆ ಅನುಗುಣವಾಗಿ ಬೇಟೆಯಾಡಿ ತರಬೇಕು, ಮರಿಗಳು ಸಣ್ಣವಿರುವಾಗ ಕಾಡ್ಗಿಚ್ಚು, ಹೆಬ್ಟಾವು ಇನ್ನಿತರ ಅಪಾಯಗಳಿಂದ ಸುರಕ್ಷಿತಗೊಳಿಸಬೇಕು, ಮರಿಗಳು ಸ್ವಾವಲಂಬಿಗಳಾಗುವ ತನಕ ತನ್ನದಲ್ಲದ ಮರಿಗಳನ್ನು ಕೊಲ್ಲುವ ಬೇರೆ ಗಂಡು ಚಿರತೆಗಳಿಂದ ಕಾಪಾಡಬೇಕು. ಹೀಗೆ ಹಲವಾರು ಕುತ್ತುಗಳು. ಇವೆಲ್ಲವನ್ನೂ ಮೆಟ್ಟಿ ಮರಿಗಳನ್ನು ಬೆಳಸಿದ ಈ ಚಿರತೆ ತಾಯಿ ಬಹು ಕಷ್ಟಪಟ್ಟಿರಬೇಕು. ಇಂತಹ ಹೆಣ್ಣು ಚಿರತೆಗಳೇ ಇವುಗಳ ಸಂತತಿ ಬೆಳೆಯಲು ಬಹು ಮಹತ್ವದ ಪಾತ್ರ ನಿರ್ವಹಿಸಿವೆ.
ಪ್ರಾಣಿ ಪ್ರಪಂಚದಲ್ಲಿ ಅವುಗಳ ಸಂತತಿ ಉಳಿದು ಬೆಳೆಯಲು ಹೆಣ್ಣು ಪ್ರಾಣಿಗಳ ಪಾತ್ರ ಬಹುಮುಖ್ಯ. ಅವುಗಳು ಮರಿ ಮಾಡಿ, ಹೆಚ್ಚು ಹೆಚ್ಚು ಮರಿಗಳು ಪ್ರೌಢಾವಸ್ಥೆಗೆ ತಲುಪುತ್ತಿವೆಯೆಂದರೆ ಆ ಕಾಡಿನಲ್ಲಿ ಅವುಗಳಿಗೆ ಬೇಕಾದ ಆಹಾರ, ರಕ್ಷಣೆ ಸಿಗುತ್ತಿದೆ ಎಂದು ಅರ್ಥ.
ಲೇಖನ ಕುರಿತ ವಿಡಿಯೋ ನೋಡಲು ಈ ಲಿಂಕ್ ಟೈಪ್ ಮಾಡಿ: bit.ly/2qdZwt4