Advertisement

ಜೋಗದಲ್ಲಿ ಜಿಪ್‌ಲೈನ್‌ ಕಾಮಗಾರಿ ಆರಂಭ

05:50 PM May 17, 2020 | Naveen |

ಶಿವಮೊಗ್ಗ: ಸಾರ್ವಜನಿಕರು ಜೋಗ ಜಲಪಾತ ಮತ್ತು ಅಲ್ಲಿನ ಪ್ರೇಕ್ಷಣೀಯ ತಾಣವನ್ನು ವರ್ಷದ ಎಲ್ಲ ಋತುಮಾನಗಳಲ್ಲಿ ವೀಕ್ಷಿಸಲು ಅನುಕೂಲವಾಗುವಂತೆ ಕೋಟ್ಯಂತರ ರೂ. ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

Advertisement

ಸಾಗರ ತಾಲೂಕಿನ ಜೋಗ ಜಲಪಾತದಲ್ಲಿ ಶನಿವಾರ ಕೆಪಿಸಿ ಪ್ರವಾಸಿ ಮಂದಿರದಿಂದ ರಾಣಿ ಫಾಲ್ಸ್‌ವರೆಗೆ ನಿರ್ಮಿಸಲು ಉದ್ದೇಶಿಸಿರುವ 80 ಲಕ್ಷ ರೂ. ವೆಚ್ಚದ ಜಿಪ್‌ಲೈನ್‌ ಕಾಮಗಾರಿಗೆ ಸಂಸದ ಬಿ.ವೈ. ರಾಘವೇಂದ್ರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಧುಮ್ಮಿಕ್ಕುವ ಜೋಗದ ಜಲಪಾತ ಹಾಗೂ ಸುತ್ತಮುತ್ತಲಿನ ಪ್ರಾಕೃತಿಕ ಪರಿಸರವನ್ನು ವೀಕ್ಷಿಸಿ ಸಂಭ್ರಮಿಸಲು ಸುಮಾರು 80ಲಕ್ಷ ರೂ.ಗಳ ಅಂದಾಜು ವೆಚ್ಚದಲ್ಲಿ ವಿಶೇಷ ವಿನ್ಯಾಸದ ಜಿಪ್‌ಲೈನ್‌ ಅಳವಡಿಸಲು ಉದ್ದೇಶಿಸಲಾಗಿದೆ ಎಂದರು.

ಕಾಮಗಾರಿಗೆ ಸರ್ಕಾರವು ಈಗಾಗಲೇ 40 ಲಕ್ಷ ರೂ.ಗಳನ್ನು ಮಂಜೂರು ಮಾಡಿದೆ. ಸಾಹಸ ಮತ್ತು ಕ್ರೀಡಾ ಪ್ರಿಯರಿಗೆ ಮೆಚ್ಚುಗೆಯಾಗಬಹುದಾದ ದೇಶದ ಮಾದರಿ ಜಿಪ್‌ಲೈನ್‌ ಇದಾಗಿದ್ದು, ಇಂತಹ ಭೌಗೋಳಿಕ ಪ್ರದೇಶದಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಜ್ಯದ ಮೊದಲ ಪ್ರವಾಸಿ ತಾಣ ಇದಾಗಿರಲಿದೆ ಎಂದರು.

ಜಿಪ್‌ಲೈನ್‌ ನಲ್ಲಿ ಸುರಕ್ಷತೆಯ ದೃಷ್ಟಿಯಿಂದ 2 ಕೇಬಲ್‌ಗ‌ಳನ್ನು ಅಳವಡಿಸುತ್ತಿದ್ದು, ಗುರುತ್ವಾಕರ್ಷಣೆ ಬಲದ ಮೇಲೆ ಇಬ್ಬರು ವ್ಯಕ್ತಿಗಳು ಏಕಕಾಲದಲ್ಲಿ ಒಂದು ಬದಿಯಿಂದ ಇನ್ನೊಂದು ಬದಿಗೆ ಸುಮಾರು 450 ಮೀ ದೂರದವರೆಗೆ ಸಾಗಬಹುದಾಗಿದೆ. ಜಿಪ್‌ ಲೈನ್‌ನ ಒಂದು ಕಡೆಗೆ 48 ಅಡಿ ಹಾಗೂ ಇನ್ನೊಂದು ಕಡೆಗೆ 16 ಅಡಿ ಎತ್ತರದ ಎರಡು ಸ್ಥಾವರಗಳನ್ನು ನಿರ್ಮಿಸಲಾಗುವುದು ಎಂದು ಹೇಳಿದರು.

ಅಲ್ಲದೆ ಜೋಗದಲ್ಲಿ ಕೈಗೊಳ್ಳಬಹುದಾದ ಇತರೆ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರ ಈಗಾಗಲೇ 10ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಈ ಸಂಬಂಧ ಟೆಂಡರ್‌ ಪ್ರಕ್ರಿಯೆ ನಡೆದು ಶೀಘ್ರದಲ್ಲಿ ಈ ಎಲ್ಲಾ ಕಾಮಗಾರಿಗಳು ತಯಾರಿಸಲಾಗಿರುವ ಕ್ರಿಯಾಯೋಜನೆಯಂತೆ ತ್ವರಿತವಾಗಿ ನಡೆಯಲಿವೆ. ನಡೆಯುವ ಈ ಎಲ್ಲಾ ಕಾಮಗಾರಿಗಳು ಸ್ಥಳೀಯ ಶಾಸಕರು ಹಾಗೂ ಜಿಲ್ಲಾಧಿಕಾರಿಗಳ ಒತ್ತಾಸೆಯ ಫಲ ಎಂದರು.

Advertisement

ಅರಣ್ಯ ಇಲಾಖೆಯ ಸಹಯೋಗದಲ್ಲಿ ಮೈಸೂರಿನ ಬಟರ್‌ ಫ್ಲೈ ಪಾರ್ಕ್‌ ಮಾದರಿಯಲ್ಲಿ ಜೈವಿಕ ಉದ್ಯಾನವನ ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಗಾಜನೂರಿನಲ್ಲಿ ಅರಣ್ಯ ಇಲಾಖೆಯ ಮೂರು ಎಕರೆ ಜಾಗದಲ್ಲಿ ಸಹ್ಯಾದ್ರಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ 10 ಕೋಟಿ ಅನುದಾನ ಬಳಸಿಕೊಂಡು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ ಎಂದರು.

ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಉತ್ತರ ಕನ್ನಡ ಜಿಲ್ಲೆಯ ವ್ಯಾಪ್ತಿಯನ್ನೊಳಗೊಂಡಂತೆ ರಚಿತವಾಗಿರುವ ಸಹ್ಯಾದ್ರಿ ಪಾರಂಪರಿಕ ಅಭಿವೃದ್ಧಿ ಪ್ರಾಧಿ ಕಾರದಲ್ಲಿ ಬಹುದಿನಗಳಿಂದ ಖಾಲಿ ಇದ್ದ ಹುದ್ದೆಗಳ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಶಾಸಕ ಎಚ್‌.ಹಾಲಪ್ಪ ಹರತಾಳು, ಜಿಲ್ಲಾಧಿಕಾರಿ ಶಿವಕುಮಾರ್‌, ಸಹಾಯಕ ಆಯುಕ್ತ ಡಾ| ನಾಗರಾಜ್‌ ಎಲ್‌., ತಹಶೀಲ್ದಾರ್‌ ಚಂದ್ರಶೇಖರ್‌ ನಾಯ್ಕ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್‌, ಎಸ್‌.ದತ್ತಾತ್ರಿ, ಜ್ಯೋತಿ ಪ್ರಕಾಶ್‌, ಲೋಕನಾಥ್‌ ಬಿಳಿಸಿರಿ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next