Advertisement
ಮತ್ತೊಂದೆಡೆ ಶಂಕಿತ ವ್ಯಕ್ತಿ ನಕಲಿ ಆಧಾರ್ ಕಾರ್ಡ್, ಚಾಲನಾ ಪರವಾನಿಗೆ ನೀಡಿ ಚೆನ್ನೈಯಲ್ಲಿ ವಾಸವಾಗಿದ್ದ ಎಂಬ ಮಾಹಿತಿಯೂ ತನಿಖಾ ಸಂಸ್ಥೆಗೆ ಲಭ್ಯವಾಗಿದೆ.ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಮುಸಾವೀರ್ ಹುಸೇನ್ ಶಾಜೀಬ್ ಎಂಬಾತನೇ ಕೃತ್ಯ ಎಸಗಿದ್ದಾನೆ ಎಂಬ ಶಂಕೆ ವ್ಯಕ್ತಪಡಿಸಿರುವ ತನಿಖಾ ಸಂಸ್ಥೆಗಳು, ಆತನಿಗಾಗಿ ಶೋಧ ನಡೆಸುತ್ತಿವೆ. ಶಿವಮೊಗ್ಗ ಪ್ರಾಯೋಗಿಕ ಸ್ಫೋಟ ಪ್ರಕರಣದಲ್ಲಿ ಸುಮಾರು ವರ್ಷಗಳಿಂದ ಮುಸಾವೀರ್ ಹುಸೇನ್ ಶಾಜೀಬ್ ತಲೆಮರೆಸಿಕೊಂಡಿದ್ದಾನೆ. ಆತ ತಮಿಳುನಾಡಿನಲ್ಲಿ ಇದ್ದುಕೊಂಡೇ ಬೆಂಗಳೂರಿಗೆ ಬಂದು ಕೃತ್ಯವೆಸಗಿ ಪರಾರಿಯಾಗಿರುವ ಸಾಧ್ಯತೆಗಳಿವೆ.
ಮಾ.1ರಂದು ಕೆಫೆಗೆ ಬಂದಿದ್ದ ಶಂಕಿತ, ಬಾಂಬ್ ಇರಿಸಿ ಸ್ಥಳದಿಂದ ಹೊರಟು ಹೋಗಿದ್ದ. ಕೆಫೆ ಹಾಗೂ ಅಕ್ಕ ಪಕ್ಕದಲ್ಲಿರುವ ಸಿಸಿ ಕೆಮರಾದಲ್ಲಿ ಶಂಕಿತನ ಚಹರೆ ಸೆರೆಯಾಗಿತ್ತು. ಶಂಕಿತ ಬೇಸ್‌ಬಾಲ್ ಕ್ಯಾಪ್ ಧರಿಸಿರುವುದು ಗೊತ್ತಾಗಿತ್ತು. ಶಂಕಿತನ ಬಗ್ಗೆ ಮಾಹಿತಿ ಕಲೆಹಾಕಿ, ಆತ ಸಂಚರಿಸಿದ್ದ ಕಡೆಗಳಲ್ಲಿ ಸಾವಿರಕ್ಕೂ ಹೆಚ್ಚು ಸಿಸಿಕೆಮರಾ ದೃಶ್ಯಗಳನ್ನು ಶೋಧಿಸಲಾಗಿತ್ತು. ಆಗ ಶೌಚಾಲಯದಲ್ಲಿ ಕ್ಯಾಪ್ ಹಾಗೂ ಬಟ್ಟೆಗಳು ಪತ್ತೆಯಾಗಿದ್ದವು. ಕ್ಯಾಪ್‌ನಲ್ಲಿ ತಲೆ ಕೂದಲುಗಳಿದ್ದವು. ಅವುಗಳನ್ನು ಡಿಎನ್‌ಎ ಪರೀಕ್ಷೆಗೆ ಒಳಪಡಿಸಲಾಗಿತ್ತು. ಜತೆಗೆ ಯಾವುದೇ ಭಯೋತ್ಪಾದನೆ ಪ್ರಕರಣದಲ್ಲಿ ಬಂಧಿತ ಅಥವಾ ತಲೆಮರೆಸಿಕೊಂಡಿರುವ ಕುಟುಂಬದವರ ಡಿಎನ್‌ಎ ಪರೀಕ್ಷೆಗೆ ತಲೆ ಕೂದಲು ಪಡೆಯಲಾಗುತ್ತದೆ. ಅದೇ ರೀತಿ ಕ್ಯಾಪ್‌ನಲ್ಲಿ ದೊರೆತ ಮುಸಾವೀರ್ ಹುಸೇನ್ ಶಾಜೀಬ್ ಕೂದಲು ಹಾಗೂ ಆತನ ಕುಟುಂಬ ಸದಸ್ಯರ ಡಿಎನ್‌ಎ ಪರೀಕ್ಷಿಸಿದಾಗ ಹೋಲಿಕೆ ಬಂದಿದೆ ಎಂದು ಹೇಳಲಾಗಿದೆ. ಹೀಗಾಗಿ, ಆತನೇ ಕ್ಯಾಪ್ ಧರಿಸಿ ರಾಮೇಶ್ವರಂ ಕೆಫೆಗೆ ಬಂದು ಬಾಂಬ್ ಇರಿಸಿ ಹೋಗಿರುವ ಅನುಮಾನ ಹೆಚ್ಚಾಗಿದೆ. ಅಲ್ಲದೆ, ಮಾ.1ರಂದು ಶಂಕಿತ ಮಡಿವಾಳದ ಸಿಲ್ಕ್ ಬೋರ್ಡ್ ಜಂಕ್ಷನ್ ಸಮೀಪದ ಓಡಾಡಿರುವ ಸಿಸಿ ಕೆಮರಾ ದೃಶ್ಯಗಳು ಸಿಕ್ಕಿವೆ ಎಂದು ಮೂಲಗಳು ತಿಳಿಸಿವೆ. ನಾಲ್ವರ ವಿಚಾರಣೆ
ಐಸಿಸ್ ಜತೆ ನಂಟು ಹೊಂದಿದ್ದ ಆರೋಪದಡಿ ಅರೇಬಿಕ್ ಭಾಷಾ ಶಿಕ್ಷಕ ಚೆನ್ನೈಯ ಜಮೀಲ್ ಬಾಷಾ ಉಮರಿ (55), ಕೊಯಮತ್ತೂರು ಮೌಲ್ವಿ ಎಂ. ಮೊಹಮ್ಮದ್ ಹುಸೇನ್ ಅಲಿಯಾಸ್ ಹುಸೇನ್ ಫೈಜಿ (38), ಐ. ಇರ್ಸಾತ್ (32) ಹಾಗೂ ಸಯ್ಯದ್ ಅಬ್ದುರ್ ರಹಮಾನ್ ಉಮರಿಯನ್ನು(52) ಅವರನ್ನು ಬಂಧಿಸಲಾಗಿತ್ತು. ಇವರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಕೆಲವು ದಿನಗಳ ಹಿಂದೆ ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಪ್ರಕರಣದ ಆರೋಪಿ ಮಾಜ್ ಮುನೀರ್ ಅಹ್ಮದ್‌ನನ್ನು ವಿಚಾರಣೆ ನಡೆಸಲಾಗಿತ್ತು.