Advertisement

ಜಿಲ್ಲೆಯ ರೈಲ್ವೇ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ

03:50 PM Nov 11, 2019 | Naveen |

ಶಿವಮೊಗ್ಗ: ತಿರುಪತಿ- ಚೆನ್ನೈ ಹಾಗೂ ಮೈಸೂರಿಗೆ ವಾರಕೊಮ್ಮೆ ವಿಶೇಷ ರೈಲುಗಳು ಸಂಚರಿಸಲಿದ್ದು, ಇದನ್ನು ವಾರಕ್ಕೆರಡು ದಿನ ವಿಸ್ತರಿಸಲು ಈಗಾಗಲೇ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಶೀಘ್ರದಲ್ಲೇ ಈ ಭರವಸೆಯೂ ಈಡೇರಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.

Advertisement

ನಗರ ರೈಲು ನಿಲ್ದಾಣದಲ್ಲಿ ಭಾನುವಾರ ಶಿವಮೊಗ್ಗ-ಚೆನ್ನೈ, ಶಿವಮೊಗ್ಗ- ತಿರುಪತಿ, ಮೈಸೂರು- ಶಿವಮೊಗ್ಗ ರೈಲುಗಳಿಗೆ ಹಸಿರು ನಿಶಾನೆ ತೋರಿಸಿ ನಂತರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತಿರುಪತಿ, ಚೆನ್ನೈಗೆ ಶಿವಮೊಗ್ಗದಿಂದ ತಲುಪುವ ರೈಲು ಅಂದೇ ವಾಪಾಸ್‌ ಹೊರಡಲಿದೆ.

ಇದರಿಂದ ದೇವರ ದರ್ಶನ ಇತರೆ ಕೆಲಸಗಳಿಗೆ ಅಡ್ಡಿಯಾಗಲಿದೆ. ಇದನ್ನು ತಪ್ಪಿಸಲು ವಾರಕ್ಕೆರಡು ದಿನ ರೈಲು ಓಡಿಸಲು ಈಗಾಗಲೇ ಅಧಿಕಾರಿಗಳ ಜತೆ ಮಾತನಾಡಲಾಗಿದೆ. ಶೀಘ್ರದಲ್ಲೇ ಅದು ಕೂಡ ಅನುಷ್ಠಾನಗೊಳ್ಳಲಿದೆ ಎಂದರು.

10 ವರ್ಷಗಳಿಂದ ಜಿಲ್ಲೆಯ ರೈಲ್ವೆ ಕ್ಷೇತ್ರಗಳಲ್ಲಿ ಅನೇಕ ಅಭಿವೃದ್ಧಿಗಳಾಗಿವೆ. ರೈಲ್ವೆ ಅಭಿವೃದ್ಧಿಗಳು ಬೆಂಗಳೂರು- ಮೈಸೂರು ಭಾಗದಲ್ಲಿ ಇತ್ತು. ಶಿವಮೊಗ್ಗದಿಂದ ಈಗ ದೇಶದ ಪ್ರಮುಖ ನಗರಗಳಿಗೆ ರೈಲ್ವೆ ಸಂಪರ್ಕ ಸಾಧ್ಯವಾಗುತ್ತಿದೆ. ಶಿವಮೊಗ್ಗ – ಶಿಕಾರಿಪುರ- ರಾಣೇಬೆನ್ನೂರು ರೈಲ್ವೆ ಯೋಜನೆಗೆ ರಾಜ್ಯದ 750 ಕೋಟಿ, ಕೇಂದ್ರದ 1200 ಕೋಟಿ ಪಾಲು ದೊರೆತಿದೆ.

ಭೂಸ್ವಾ ಧೀನಕ್ಕೆ ವಿಶೇಷ ಅಧಿಕಾರಿ ಕೂಡ ನೇಮಕ ಆಗಿದೆ. ರೈತರ ಬೆಳೆ ಕಟಾವು ಆದ ತಕ್ಷಣ ಸರ್ವೆ ಕಾರ್ಯ ಆರಂಭಗೊಳ್ಳಲಿದೆ. ಈ ಯೋಜನೆ ಪೂರ್ಣಗೊಂಡರೆ, ಉತ್ತರ ಭಾರತ, ಈಶಾನ್ಯ ರಾಜ್ಯಗಳಿಗೂ ಸಂಪರ್ಕ ಸಾಧಿಸಬಹುದು. ಆದಷ್ಟು ಬೇಗ ಈ ಯೋಜನೆಯೂ ಪೂರ್ಣಗೊಳ್ಳಲಿದೆ ಎಂದು ಭರವಸೆ ನೀಡಿದರು.

Advertisement

ರೈಲ್ವೆ ಟರ್ಮಿನಲ್‌ ನಿರ್ಮಾಣ ಮಾಡಲು ಕೋಟೆಗಂಗೂರು ಹಾಗೂ ತಾಳಗುಪ್ಪ ಬಳಿ ಜಮೀನು ಗುರುತಿಸಲಾಗಿದೆ. ಟರ್ಮಿನಲ್‌ಗೆ 50 ಎಕರೆ ಭೂಮಿ ಅಗತ್ಯವಿದೆ. ಅಗತ್ಯ ಭೂಮಿ ಬಗ್ಗೆ ಜಿಲ್ಲಾಧಿಕಾರಿಗಳ ಜತೆ ಚರ್ಚೆ ನಡೆಸಿ ಬಾಕಿ ಭೂಮಿ ಹಸ್ತಾಂತರ ಮಾಡಲಾಗುವುದು. ಟರ್ಮಿನಲ್‌ ನಿರ್ಮಾಣವಾದರೆ ಸರ್ವಿಸ್‌ಗೆ ಅನೇಕ ರೈಲುಗಳು ಇಲ್ಲಿಗೆ ಬರುತ್ತವೆ. ಇದರ ಜತೆಗೆ ಹಳಿಗಳು ಸಹ ಮೇಲ್ದರ್ಜೆಗೆ ಏರಲಿವೆ. ಎಲ್ಲ ರೀತಿಯಲ್ಲೂ ಅನುಕೂಲವಾಗಲಿದೆ ಎಂದರು.

ಇದರ ಜತೆಗೆ ವಿದ್ಯಾನಗರ, ಭದ್ರಾವತಿಯ ಕಡದಕಟ್ಟೆ, ಸವಳಂಗ ರಸ್ತೆ, ಕುಂಸಿ ಬಳಿ ರೈಲ್ವೆ ಓವರ್‌ ಬ್ರಿಡ್ಜ್ ನಿರ್ಮಾಣಕ್ಕೆ ರಾಜ್ಯ ಸರಕಾರದ ಅನುದಾನ ಲಭ್ಯವಿದೆ. ಕೇಂದ್ರ ಸರಕಾರದ ಅನುದಾನ ಸೇರಿಸಿ ಆದಷ್ಟು ಬೇಗ ಇವುಗಳನ್ನೂ ಪೂರ್ಣಗೊಳಿಸಲಾಗುವುದು. ತಾಳಗುಪ್ಪದಿಂದ ಸಿದ್ದಾಪುರಕ್ಕೆ ರೈಲ್ವೆ ಹಳಿ ವಿಸ್ತರಣೆ, ಶಿವಮೊಗ್ಗದಿಂದ ಮಂಗಳೂರಿಗೂ ಹೊಸ ಮಾರ್ಗ ಅನುಷ್ಠಾನಕ್ಕೆ ಪ್ರಯತ್ನಿಸಲಾಗುವುದು ಎಂದರು.

ರಾಜ್ಯ ಸರಕಾರಕ್ಕೆ 1 ವರ್ಷ ತುಂಬುವುದರೊಳಗೆ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಮುಕ್ತಾಯಗೊಳ್ಳಲಿದೆ. ತುಮಕೂರು- ಶಿವಮೊಗ್ಗ ಚತುಷ್ಪಥ ರಸ್ತೆ ಕಾಮಗಾರಿಯ 5 ಸಾವಿರ ಕೋಟಿ ಹಣ ವಾಪಸ್‌ ಹೋಗುತ್ತಿತ್ತು. ತಕ್ಷಣ ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಿ ಹಣ ವಾಪಸ್‌ ಹೋಗದಂತೆ ತಡೆ ಹಿಡಿಯಲಾಗಿದೆ. ಅದು ಕೂಡ ಶೀಘ್ರ ಪೂರ್ಣಗೊಳ್ಳಲಿದೆ ಎಂದರು.

ಎಂಎಲ್‌ಸಿ ಎಸ್‌. ರುದ್ರೇಗೌಡ ಮಾತನಾಡಿ, ಕಟ್ಟಕಡೆಯ ವ್ಯಕ್ತಿಗೂ ಎಲ್ಲ ಸವಲತ್ತುಗಳು ದೊರಕಬೇಕು ಎಂಬ ನಿಟ್ಟಿನಲ್ಲಿ ಯೋಜನೆಗಳು ಜಾರಿಯಾಗುತ್ತಿವೆ. ರೈಲ್ವೆ ಸಂಪರ್ಕದಿಂದ ಕಡಿಮೆ ವೆಚ್ಚದಲ್ಲಿ ಪ್ರಯಾಣ ಮಾಡಬಹುದು. ಆರು ವರ್ಷದ ಹಿಂದೆ 2 ರೈಲುಗಳು ಮಾತ್ರ ಇತ್ತು. ಬಿ.ಎಸ್‌.ಯಡಿಯೂರಪ್ಪನವರು ಪ್ರಯಾಣಿಕರ ಸಂಕಷ್ಟ ನೋಡಿ ಇನ್ನಷ್ಟು ಬೋಗಿ, ಟ್ರೈನುಗಳು ಬೇಕು ಎಂದು ಅಂದುಕೊಂಡಿದ್ದರು.

ಹಂತಹಂತವಾಗಿ ಎಲ್ಲವೂ ನೆರವೇರುತ್ತಿವೆ ಎಂದರು. ಎಂಎಲ್‌ಸಿ ಆಯನೂರು ಮಂಜುನಾಥ್‌ ಮಾತನಾಡಿ, ರೈಲ್ವೆ ನಿಲ್ದಾಣದಲ್ಲಿ ಆಟೋಗಳಿಂದ ತೊಂದರೆಯಾಗುತ್ತಿದೆ. ರೈಲು ಇಳಿದು ಹೊರಬರುವವರು ಆಟೋದಲ್ಲೇ ಕಾಲಿಡಬೇಕು. ಅಂತಹ ಪರಿಸ್ಥಿತಿ ಇದೆ. ಕಾರು, ಬೈಕ್‌ ತೆಗೆಯಲು ಗೊಂದಲದ ವಾತಾವರಣ ಇದೆ. ಪೊಲೀಸರು ಈ ಬಗ್ಗೆ ಗಮನಹರಿಸಬೇಕು. ಖಾಸಗಿ ಬಸ್‌ಗಳು ಸಹ ಶಿಸ್ತುಬದ್ಧವಾಗಿ ನಿಲ್ಲಬೇಕು. ನಾನು ಆಟೋದವರ ವಿರೋಧಿಯಲ್ಲ.

ಆಟೋ ಮಿತ್ರ ಎಂದು ಸಮಜಾಯಿಷಿ ನೀಡಿದರು. ಹಿಂದೆ ರೈಲ್ವೆ ಇಲಾಖೆ ಜಿಎಂಗಳು ಆಕಾಶದಲ್ಲೇ ಇರುತ್ತಿದ್ದರು. ಅವರನ್ನೆಲ್ಲ ಮಾತನಾಡಿಸುವುದೇ ಕಷ್ಟವಿತ್ತು. ಈಗ ನೆಲಕ್ಕೆ ಬಂದಿದ್ದಾರೆ. ಬ್ರಿಟಿಷ್‌ ದರ್ಬಾರ್‌ನಿಂದ ಭಾರತದ ದರ್ಬಾರ್‌ಗೆ ಬಂದಿದ್ದಾರೆ ಎಂದು ಸೂಚ್ಯವಾಗಿ ಹೇಳಿದರು.

ಎಂಎಲ್‌ಸಿ ಆರ್‌. ಪ್ರಸನ್ನಕುಮಾರ್‌ ಮಾತನಾಡಿ, ರೈಲ್ವೆ ನಿಲ್ದಾಣದಲ್ಲಿ ಎಲಿವೇಟರ್‌ ಅಗತ್ಯವಿದೆ. ತಕ್ಷಣ ಅದನ್ನು ಮಾಡಿಸಬೇಕು ಎಂದು ಮನವಿ ಮಾಡಿದರು.

ಎಜಿಎಂ ಅಜಯ್‌ಕುಮಾರ್‌ ಸಿಂಗ್‌, ಶಾಸಕ ಕೆ.ಬಿ. ಅಶೋಕ್‌ ನಾಯ್ಕ, ಮೇಯರ್‌ ಲತಾ ಗಣೇಶ್‌, ಉಪ ಮೇಯರ್‌ ಚನ್ನಬಸಪ್ಪ, ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್‌, ಕೆ.ಎಂ. ಶಾಂತರಾಜು, ಪಾಲಿಕೆ ಸದಸ್ಯೆ ಸುನಿತಾ ಅಣ್ಣಪ್ಪ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next