ಶಿವಮೊಗ್ಗ: ವರ್ಷದ ಕೊನೆಯಲ್ಲಿ, ಅದೂ 9 ವರ್ಷಗಳ ಬಳಿಕ, ಸಂಭವಿಸುತ್ತಿರುವ ಅಪರೂಪದ, ಬಾನಂಗಣದ ಚಮತ್ಕಾರದ ನೆರಳು, ಬೆಳಕಿನ ಕಂಕಣ ಸೂರ್ಯಗ್ರಹಣವನ್ನು ಜಿಲ್ಲೆಯ ಜನರು ಕಣ್ತುಂಬಿಕೊಂಡರು.
ಗ್ರಹಣಕ್ಕೆ ಶಿವಮೊಗ್ಗದಲ್ಲಿ ಜನರ ಓಡಾಟ, ಅಂಗಡಿ ಮುಂಗಟ್ಟುಗಳ ವಹಿವಾಟು, ಶಾಲೆಗಳಿಗೆ ರಜೆ ಘೋಷಣೆ, ಹೀಗೆ ಎಲ್ಲಾ ವ್ಯವಹಾರಗಳಿಗೆ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿತ್ತು. ಗ್ರಹಣಕ್ಕಾಗಿ ದೇಗುಲಗಳು ಸಹ ಮುಚ್ಚಿತ್ತು. ಗ್ರಹಣ ಬಿಟ್ಟ ನಂತರ ದೇವಸ್ಥಾನಗಳು ತೆರೆದು ಶುದ್ಧಗೊಳಿಸಿ ನಂತರ ಪೂಜೆ ಪುನಸ್ಕಾರಗಳು ನಡೆದವು.
ಸೂರ್ಯ ಗ್ರಹಣದ ವೀಕ್ಷಣೆಗಾಗಿ ನಗರದ ಎನ್ ಇಎಸ್ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಸನ್ ಗ್ಲಾಸಸ್ ಧರಿಸಿ ಕಂಕಣ ಗ್ರಹಣವನ್ನು ನಗರದ ನಾಗರಿಕರು ಕಣ್ಣು ತುಂಬಿಸಿಕೊಂಡರು.
ಶಾಲೆ ಬಂದ್: ಜಿಲ್ಲೆಯ ಬಹುತೇಕ ಶಾಲೆಗಳು ಮಧ್ಯಾಹ್ನದ ನಂತರ ಆರಂಭಗೊಂಡವು. ಕೆಲವು ಶಾಲೆಗಳು ಮೊದಲೇ ರಜೆ ಘೋಷಣೆ ಮಾಡಿದ್ದರು. ಬಹುತೇಕ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿರಲಿಲ್ಲ. ಹೀಗಾಗಿ ಶಾಲೆಗಳು ಬಿಕೋ ಎನ್ನುತ್ತಿದ್ದವು. ಪ್ರತಿಷ್ಠಿತ ಕಾಲೇಜುಗಳು ಗ್ರಹಣ ವೀಕ್ಷಣೆಗೆ ಅವಕಾಶ ಮಾಡಿದ್ದವು. ಎಕ್ಸರೇ, ಸನ್ ಗ್ಲಾಸ್, ವಿಶೇಷ ಕನ್ನಡಕ ಧರಿಸಿ ವಿದ್ಯಾರ್ಥಿಗಳು ಗ್ರಹಣ ವೀಕ್ಷಣೆ ಮಾಡಿದರು.