ಶಿವಮೊಗ್ಗ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಉಲ್ಬಣಗೊಳ್ಳುತ್ತಿರುವ ಮಂಗನ ಕಾಯಿಲೆ ನಿಯಂತ್ರಣಕ್ಕೆ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದ್ದು ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಸಂಸದ ಬಿ.ವೈ. ರಾಘವೇಂದ್ರ ಅವರು ಹೇಳಿದರು. ಈ ಸಂಬಂಧ ಅವರು ಜಿಲ್ಲಾಧಿಕಾರಿ, ಅರಣ್ಯ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.
ಕೆಎಫ್‌ಡಿ ನಿಯಂತ್ರಣಕ್ಕೆ ಅಗತ್ಯ ಮುಂಜಾಗೃತಾ ಕ್ರಮ ಕೈಗೊಂಡಿದ್ದು ಸಾರ್ವಜನಿಕರು ಸಹಕರಿಸಬೇಕು. ಗ್ರಾಮೀಣ ಭಾಗದಲ್ಲಿ ರೈತರು ಅರಣ್ಯದಿಂದ ದರಗಲನ್ನು (ನೆಲಕ್ಕೆ ಬಿದ್ದ ಮರದ ಎಲೆಗಳು) ಮನೆಗೆ ಕೊಂಡೊಯ್ಯಬಾರದು. ದರಗಲುಗಳೊಂದಿಗೆ ಇರುವ ಉಣ್ಣೆಯೂ (ಉಣುಗು) ಮನೆ ಸೇರಿ ಕಾಯಿಲೆ ಹರಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ರೈತರು ಎಚ್ಚರಿಕೆ ವಹಿಸಬೇಕು ಎಂದರು.
ಈ ಸೋಂಕಿನ ತೀವ್ರತೆಯಿಂದಾಗಿ ಜಿಲ್ಲೆಯಲ್ಲಿ ಇತ್ತೀಚೆಗೆ 5 ಮಂದಿ ಮೃತಪಟ್ಟಿದ್ದಾರೆ. ಮಾತ್ರವಲ್ಲ ಐದು ವರ್ಷದ ಮಗುವಿಗೂ ಈ ಸೋಂಕು ತಗುಲಿರುವುದು ಆತಂಕಕಾರಿ. ಆದ್ದರಿಂದ ಮಲೆನಾಡು ಭಾಗದಲ್ಲಿ ಸಾಮಾನ್ಯ ಜ್ವರ ಕಂಡು ಬಂದರೂ ನಿರ್ಲಕ್ಷಿಸಬೇಡಿ. ತಕ್ಷಣ ತಪಾಸಣೆ ಮಾಡಿಸಿಕೊಳ್ಳಿ. ಎಲ್ಲ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಸ್ಥಳದಲ್ಲಿಯೇ ರಕ್ತ ಪಡೆದು ಹೆಚ್ಚಿನ ತಪಾಸಣೆಗಾಗಿ ಕಳುಹಿಸಲಾಗುವುದು. ಹೆಚ್ಚಿನ ಚಿಕಿತ್ಸೆ ಅಗತ್ಯವೆಂದು ಕಂಡುಬಂದಲ್ಲಿ ಅಂತಹ ರೋಗಿಯನ್ನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ಕಳುಹಿಸಿ ಸರ್ಕಾರಿ ವೆಚ್ಚದಲ್ಲಿ ಚಿಕಿತ್ಸೆ ನೀಡಲಾಗುವುದು ಎಂದರು.
ತಕ್ಷಣದ ಕ್ರಮವಾಗಿ ತೀರ್ಥಹಳ್ಳಿಯ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಹಾಗೂ ಸಿಬ್ಬಂದಿ ನಿರಂತರವಾಗಿ ಕಾರ್ಯನಿರ್ವಹಿಸಲು ಸನ್ನದ್ಧರಾಗಿರುವಂತೆ ಸೂಚಿಸಲಾಗಿದೆ. ಅಲ್ಲದೆ ಪ್ರತ್ಯೇಕ ವಾರ್ಡ್‌ನ್ನು ಕಾಯ್ದಿರಿಸಲಾಗಿದೆ ಎಂದವರು ತಿಳಿಸಿದರು. ಸಭೆಯಲ್ಲಿ ಡಿಸಿ ಕೆ.ಬಿ .ಶಿವಕುಮಾರ್ ಜಿಲ್ಲಾ ಆರೋಗ್ಯ ಅಧಿಕಾರಿ ಡಾ|ರಾಜೇಶ್ ಸುರಗಿಹಳ್ಳಿ, ವಿಡಿಎಲ್ ಉಪನಿರ್ದೇಶಕ ಡಾ| ಕಿರಣ್ ಮತ್ತಿತರರಿದ್ದರು.