ಶಿವಮೊಗ್ಗ: ಇಂದು ಬೆಳಿಗ್ಗೆ ಎನ್ಎಸ್‍ಯುಐ ವಿದ್ಯಾರ್ಥಿಗಳು 144 ಸೆಕ್ಷನ್ ಜಾರಿ ಇದ್ದರೂ, ಕಾಲೇಜು ಆವರಣದಲ್ಲಿ ಸೇರಿ ರಾಷ್ಟ್ರಧ್ವಜ ಹಾರಿಸಿದ್ದು, ಕಾನೂನು ಉಲ್ಲಂಘಿಸಿದ್ದಕ್ಕೆ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ ಎಂದು ಎಸ್‍ಪಿ ಬಿ.ಎಂ. ಲಕ್ಷ್ಮಿಪ್ರಸಾದ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಾದ್ಯಾಂತ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಈಗಾಗಲೇ ನಿನ್ನೆ ಗಲಭೆ ಸಂಬಂಧ ಐವರನ್ನು ಬಂಧಿಸಲಾಗಿದೆ. ಬಂಧಿಸಿ ಕರೆದೊಯ್ಯುವ ವೇಳೆ, ಕೆಲವು ವಿದ್ಯಾರ್ಥಿಗಳು, ಪರಾರಿಯಾಗಿದ್ದು, ಅವರನ್ನು ಕೂಡ ವಶಕ್ಕೆ ಪಡೆಯಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
ಹಿಜಾಬ್-ಕೇಸರಿ ಶಾಲು ಗಲಾಟೆ ಹೆಚ್ಚಾದ ಹಿನ್ನೆಲೆ- ಶಿವಮೊಗ್ಗದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಇದೀಗ ಯಾವುದೇ, ಆತಂಕವಿಲ್ಲದೇ ದಿನಚರಿ ನಡೆಯುತ್ತಿದೆ. ಅಂಗಡಿ ಮುಂಗಟ್ಟು ತೆರೆದು ವ್ಯಾಪಾರ ನಡೆಸಬಹುದಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಹೈಕೋರ್ಟ್ ನಲ್ಲಿ ಹಿಜಾಬ್ ವಿವಾದ ವಿಚಾರಣೆ: ಬೆಂಗಳೂರು ಸೇರಿ ವಿವಿಧೆಡೆ ನಿಷೇಧಾಜ್ಞೆ ಜಾರಿ
ನಗರದಲ್ಲಿ ವರ್ತಕರು ವ್ಯಾಪಾರ ನಡೆಸಬಹುದು. ಯುವಕರು ಹೆಚ್ಚಾಗಿ ಸೇರುವ ಬೀಡ ಅಂಗಡಿ, ಟೀ ಶಾಪ್ ಗಳನ್ನು ಮುಚ್ಚಿಸಲಾಗಿದ್ದು, ಗುಂಪು ಗೂಡುವುದನ್ನು ತಡೆಯಲಾಗಿದೆ ಎಂದರು.
ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದ್ದು, 150 ಜನ ಪೊಲೀಸ್ ಸಿಬ್ಬಂಧಿ, 4 ಜನ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದರು.