Advertisement

ಮೆಗ್ಗಾನ್‌ ಸುಧಾರಣೆಗೆ 15 ರಂದು ಬೆಂಗಳೂರಲ್ಲಿ ಸಭೆ: ಈಶ್ವರಪ್ಪ

01:19 PM Apr 13, 2020 | Naveen |

ಶಿವಮೊಗ್ಗ: ಮೆಗ್ಗಾನ್‌ ಆಸ್ಪತ್ರೆಯಲ್ಲಿ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿ, ಅತ್ಯುತ್ತಮ ಗುಣಮಟ್ಟದ ಸೇವೆ ಲಭ್ಯವಾಗುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಎಪ್ರಿಲ್‌ 15ರಂದು ಬೆಂಗಳೂರಿನಲ್ಲಿ ಜಿಲ್ಲೆಯ ಎಲ್ಲಾ ಜನಪ್ರತಿನಿಧಿ ಗಳ, ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಹಾಗೂ ತಜ್ಞರ ಉನ್ನತ ಮಟ್ಟದ ಸಭೆ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರು ತಿಳಿಸಿದರು.

Advertisement

ಅವರು ಮೆಗ್ಗಾನ್‌ ಮೆಡಿಕಲ್‌ ಕಾಲೇಜು ಸಭಾಂಗಣದಲ್ಲಿ ಕೊರೊನಾ ವೈರಸ್‌ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಆಯೋಜಿಸಲಾಗಿದ್ದ ಸಭೆಯಲ್ಲಿ ಮಾತನಾಡಿದರು. ಆಡಳಿತಾತ್ಮಕ ಕಾರಣಗಳಿಂದಾಗಿ ಮೆಗ್ಗಾನ್‌ ವೈದ್ಯಕೀಯ ಕಾಲೇಜಿನಲ್ಲಿ ನಿರೀಕ್ಷಿತ ಮಟ್ಟದಲ್ಲಿ ವೈದ್ಯಕೀಯ ಸೇವೆ ಒದಗಿಸಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಎಲ್ಲಾ ನ್ಯೂನತೆಗಳನ್ನು ಸರಿಪಡಿಸಿಕೊಂಡು ಉತ್ತಮ ಸೇವೆ ಸಲ್ಲಿಸಲು ವ್ಯವಸ್ಥೆ ಕಲ್ಪಿಸಬೇಕಾಗಿದೆ. ಇದೇ ವೇಳೆ ಜಿಲ್ಲೆಯ ಜನತೆಯನ್ನು ಕಾಡುತ್ತಿರುವ ಕೆಎಫ್‌ಡಿ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಹ ಬೆಂಗಳೂರಿನಲ್ಲಿ ನಡೆಯಲಿರುವ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಅವರು ಹೇಳಿದರು.

ಕೊರೊನಾ ಪರೀಕ್ಷೆ ಪ್ರಮಾಣ ಹೆಚ್ಚಿಸಿ: ಮೆಗ್ಗಾನ್‌ನಲ್ಲಿ ಪ್ರಸ್ತುತ ಒಟ್ಟು ಮೂರು ಜಿಲ್ಲೆಗಳಿಗೆ ಸಂಬಂಧಿಸಿದಂತೆ ಕೊರೊನಾ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್‌ ಪ್ರಕರಣಗಳನ್ನು ಪತ್ತೆ ಹಚ್ಚಲು ಪರೀಕ್ಷೆಯನ್ನು ಹೆಚ್ಚಿಸಬೇಕು. ಪ್ರತಿದಿನ ಕನಿಷ್ಟ 40 ಪರೀಕ್ಷೆಯನ್ನು ನಡೆಸಬೇಕು ಜಿಲ್ಲಾ ನೋಡಲ್‌ ಕಾರ್ಯದರ್ಶಿ ಮಣಿವಣ್ಣನ್‌ ಅವರು ಈ ಸಂದರ್ಭದಲ್ಲಿ ಸೂಚನೆ ನೀಡಿದರು.

ಸರ್ಕಾರದಿಂದ ಪ್ರಶಂಸನಾ ಪತ್ರ: ಇತ್ತೀಚೆಗೆ ಮೆಗ್ಗಾನ್‌ ಆಸ್ಪತ್ರೆಯ ಮಕ್ಕಳ ತೀವ್ರ ನಿಗಾ ಘಟಕದಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದ ಸಂದರ್ಭದಲ್ಲಿ ತಕ್ಷಣ ಕಾರ್ಯಪ್ರವೃತ್ತರಾಗಿ, ಅಲ್ಲಿದ್ದ ಎಲ್ಲಾ ನವಜಾತ ಶಿಶುಗಳನ್ನು ಸುರಕ್ಷಿತವಾಗಿ ಖಾಸಗಿ ಆಸ್ಪತ್ರೆಗೆ ತಲುಪಿಸಲು ಕಾರಣರಾದವರಿ ಗೆ ಸರ್ಕಾರದಿಂದ ಪ್ರಶಂಸನಾ ಪತ್ರ ನೀಡಲಾಗುವುದು ಎಂದು ಕಾರ್ಯದರ್ಶಿ ಅವರು ತಿಳಿಸಿದರು.

ಬಾಕಿ ವೇತನ ಪಾವತಿಸಿ: ವಿಧಾನ ಪರಿಷತ್‌ ಸದಸ್ಯ ಆಯನೂರು ಮಂಜುನಾಥ ಅವರು ಮಾತನಾಡಿ, ಮೆಗ್ಗಾನ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ 300ಕ್ಕೂ ಅಧಿಕ ಎಎನ್‌ಎಂ ಸಿಬ್ಬಂದಿಗೆ ಕಳೆದ ಮೂರು ತಿಂಗಳಿನಿಂದ ವೇತನ ನೀಡಲಾಗಿಲ್ಲ. ಅವರಿಗೆ ವೇತನ ನೀಡಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಪ್ರಸ್ತಾಪಿಸಿದರು.

Advertisement

ಒಪಿಡಿ ಆರಂಭ: ಸೋಮವಾರದಿಂದ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಪೂರ್ಣ ಪ್ರಮಾಣದ ಒಪಿಡಿ ಸೇವೆಯನ್ನು ಪುನರಾರಂಭಿಸಲಾಗುವುದು. ಜನರಲ್‌ ಸರ್ಜರಿ ಈಗಾಗಲೇ ಮೆಗ್ಗಾನ್‌ನಲ್ಲಿ ಪುನರಾರಂಭಿಸಲಾಗಿದೆ. 7 ಕಡೆಗಳಲ್ಲಿ ಫೀವರ್‌ ಕಾರ್ನರ್‌ ಆರಂಭಿಸಲಾಗಿದ್ದು, ಒಟ್ಟು 11 ಕಡೆಗಳಲ್ಲಿ ಫೀವರ್‌ ಕ್ಲಿನಿಕ್‌ ಪ್ರಾರಂಭಿಸಲಿದ್ದೇವೆ ಎಂದು ವೈದ್ಯಾಧಿ ಕಾರಿಗಳು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಎಚ್ಚರಿಕೆ: ಜಿಲ್ಲೆಯ ಯಾವುದೇ ಖಾಸಗಿ ಆಸ್ಪತ್ರೆಗಳಲ್ಲಿ ಜ್ವರ, ನೆಗಡಿ, ಇತ್ಯಾದಿ ರೋಗಗಳಿಗೆ ಚಿಕಿತ್ಸೆ ನೀಡಿರುವುದರ ಬಗ್ಗೆ ಪ್ರತಿದಿನ ಮಾಹಿತಿ ಒದಗಿಸಲು ಈಗಾಗಲೆ ಸೂಚಿಸಲಾಗಿದೆ. ಇದಕ್ಕಾಗಿ ಗೂಗಲ್‌ ಸ್ಪ್ರೆಡ್‌ಶೀಟ್‌ ತೆರೆಯಲಾಗಿದ್ದು, ಅದರಲ್ಲಿ ಕಡ್ಡಾಯವಾಗಿ ಮಾಹಿತಿ ನಮೂದಿಸಬೇಕು. ಒಂದು ವೇಳೆ ನಮೂದಿಸದೆ, ಮುಂದೇನಾದರೂ ಅನಾಹುತ ಉಂಟಾದಲ್ಲಿ, ಅಂತಹ ವೈದ್ಯರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ, ಆಸ್ಪತ್ರೆಯ ಪರವಾನಿಗೆ ರದ್ದುಪಡಿಸಲಾಗುವುದು ಎಂದು ಡಿಸಿ ಎಚ್ಚರಿಕೆ ನೀಡಿದರು.

ಪಿಎಚ್‌ಸಿಗಳ ಮೇಲ್ದರ್ಜೆ ಪ್ರಸ್ತಾವನೆ: ಕೆಎಫ್‌ಡಿ ಬಾಧಿತ ಪ್ರದೇಶಗಳ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಡಾ|ರಾಜೇಶ ಸುರಗಿಹಳ್ಳಿ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next