Advertisement

ಕಮಲಕೋಟೆಯಲ್ಲಿ ಕಂಪನ ತಂದ ದೋಸ್ತಿ 

10:33 AM Nov 01, 2018 | Team Udayavani |

ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಉಪ ಚುನಾವಣೆಯ ಚಿತ್ರಣ ದಿನದಿಂದ ದಿನಕ್ಕೆ ಬದಲಾಗುತ್ತಿದೆ. ಬಿಜೆಪಿ ಅನಾಯಾಸವಾಗಿ ಗೆಲ್ಲುತ್ತದೆಂಬ ಲೆಕ್ಕಾಚಾರ ದಿನೇದಿನೆ ಕ್ಷೀಣವಾಗುತ್ತಿದ್ದು, ಜೆಡಿಎಸ್‌ ಅಭ್ಯರ್ಥಿ ಮಧು ಬಂಗಾರಪ್ಪಗೆ ಜೆಡಿಎಸ್‌ -ಕಾಂಗ್ರೆಸ್‌ ನಾಯಕರು ಶಕ್ತಿ ತುಂಬುತ್ತಿದ್ದಾರೆ. ಖುದ್ದು ಸಿಎಂ ಕುಮಾರಸ್ವಾಮಿ ಎಂಟ್ರಿ ಮೂಲಕ ಕ್ಷೇತ್ರದ ಲೆಕ್ಕಾಚಾರ ಬದಲಾಗುತ್ತಿದ್ದು, ಬಿಜೆಪಿಗೆ ಜಯವೀಗ ಸುಲಭದ ತುತ್ತಾಗುತ್ತಿಲ್ಲ. ಮೈತ್ರಿಕೂಟದ ಪ್ರಚಾರ ತಳಮಟ್ಟಕ್ಕೆ ಇಳಿದರೆ ಬಿಜೆಪಿ ಕೋಟೆ ಭೇದಿಸಬಹುದು. ನಾಲ್ವರು ಅಭ್ಯರ್ಥಿಗಳಿದ್ದರೂ ಜೆಡಿಎಸ್‌ ಅಭ್ಯರ್ಥಿ ಮಧು ಬಂಗಾರಪ್ಪ ಹಾಗೂ ಬಿಜೆಪಿಯ ಬಿ.ವೈ.ರಾಘವೇಂದ್ರ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಇನ್ನು, ಜೆಡಿಯುನಿಂದ ಕಣಕ್ಕಿಳಿದ ಅವಿಭಜಿತ ಜಿಲ್ಲೆಯ ಮತ್ತೂಬ್ಬ ಸಿಎಂ ಜೆ.ಎಚ್‌.ಪಟೇಲ್‌ ಪುತ್ರ ಮಹಿಮಾ ಪಟೇಲ್‌, ಸಾತ್ವಿಕ ರಾಜಕಾರಣದ ಶಪಥ ತೊಟ್ಟಿದ್ದಾರೆ. ನಾ.ಡಿಸೋಜಾ, ಕಡಿದಾಳು ಶಾಮಣ್ಣ, ಕೆ.ವಿ.ಅಕ್ಷರ ಮುಂತಾದ ಸಾಹಿತಿಗಳು ಅವರಿಗೆ ಬೆಂಬಲ ಕೊಟ್ಟಿದ್ದಾರೆ.

Advertisement

ಸ್ಥಳೀಯ ವಿಷಯಗಳೇ ಅಸ್ತ್ರ: ದೋಸ್ತಿಗಳು ಕುಮಾರಸ್ವಾಮಿ ಸರ್ಕಾರದ ಸಾಲಮನ್ನಾ ಇನ್ನಿತರ ಯೋಜನೆಗಳನ್ನೇ ಪ್ರಚಾರಕ್ಕೆ ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ. ಜತೆಗೆ, ವಿಐಎಸ್‌ಎಲ್‌ -ಎಂಪಿಎಂ ಕಾರ್ಖಾನೆ ಪುನಶ್ಚೇತನಕ್ಕೆ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಬಿಜೆಪಿ ಕ್ರಮ ಕೈಗೊಂಡಿಲ್ಲ. ಯಡಿಯೂರಪ್ಪ ಸಂಸದರಾಗಿ ಜಿಲ್ಲೆಗೆ ಏನೂ ತಂದಿಲ್ಲ. ಬಗರ್‌ಹುಕುಂ ಸಮಸ್ಯೆ, ಸಿಲಿಂಡರ್‌, ಇಂಧನ ದರ ಏರಿಕೆ, ಕಸ್ತೂರಿ ರಂಗನ್‌ ವರದಿ ಜಾರಿ ಆತಂಕ ವಿಷಯ ಪ್ರಸ್ತಾಪಿಸಿ ಕುರಿತು ಮತದಾರರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ. ಇತ್ತ ಬಿಜೆಪಿಯವರು ಯಡಿಯೂರಪ್ಪ ಸಿಎಂ ಆದ ಕಾಲದಲ್ಲಿ ಶಿವಮೊಗ್ಗಕ್ಕೆ ಕೊಟ್ಟ ಕೊಡುಗೆಗಳನ್ನು ಪ್ರಸ್ತಾಪ ಮಾಡುತ್ತಿದ್ದಾರೆ. ರೈಲ್ವೆ,
ಹೆದ್ದಾರಿ ಯೋಜನೆಗಳನ್ನು ಪ್ರಸ್ತಾಪ ಮಾಡುತ್ತಿದ್ದಾರೆ. ಮೋದಿ ಕೈ ಬಲಪಡಿಸಲು ಮತ ನೀಡಿ ಎನ್ನುತ್ತಿದ್ದಾರೆ. ಕೆಲ ಮುಖಂಡರು ಹಿಂದುತ್ವ ಎಂಬ ಕಾರ್ಡ್‌ ಮತ್ತೆ ಮುಂದೆ ಬಿಟ್ಟಿದ್ದಾರೆ. ಇದೆಲ್ಲದರ ಹೊರತಾಗಿ ಜಾತಿವಾರು ಮತ ಬೇಟೆಗೆ ಖುದ್ದು ಯಡಿಯೂರಪ್ಪ
ಆದಿಯಾಗಿ ಎಲ್ಲ ಪಕ್ಷಗಳ ಮುಖಂಡರು ಮುಂದಾಗಿದ್ದಾರೆ.

ವಿಶೇಷವೆಂದರೆ, ಶಿವಮೊಗ್ಗದಲ್ಲಿ ಇದುವರೆಗೂ ಮೈತ್ರಿಕೂಟದಲ್ಲಿ ಅಪಸ್ವರ ಕೇಳಿ ಬಂದಿಲ್ಲ. ಬಿಜೆಪಿ, ಸ್ಟಾರ್‌ ನಾಯಕರ ಪ್ರಚಾರಕ್ಕಿಂತಲೂ ಗ್ರಾಮಮಟ್ಟದ ಪ್ರಚಾರಕ್ಕೆ ಹೆಚ್ಚು ಆದ್ಯತೆ ನೀಡಿ ಕೆಲಸ ಮಾಡುತ್ತಿದೆ. ಜಿಲ್ಲೆಯ 7 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳ ಶಾಸಕರು ಕ್ಷೇತ್ರ ಬಿಟ್ಟು ಕದಲದೆ ಹೋಬಳಿ ಮತ್ತು ಗ್ರಾಮಮಟ್ಟದಲ್ಲಿ ಜನರ ಮನೆ, ಮನ ತಲುಪುತ್ತಿದ್ದಾರೆ. 

ಜಾತಿವಾರು ಮತ ಬೇಟೆ: ಜೆಡಿಎಸ್‌-ಕಾಂಗ್ರೆಸ್‌ ಒಂದಾದ ಮೇಲೆ ಇದು ಸುಲಭದ ವಿಷಯವಲ್ಲ ಎಂದರಿತ ಬಿಜೆಪಿ, ಸಾಂಪ್ರದಾಯಿಕ ಮತಗಳ ಜತೆಗೆ ಇನ್ನೂ ಹೆಚ್ಚಿನ ಮತಗಳ ಕ್ರೋಢೀಕರಣಕ್ಕೆ ಮುಂದಾಗಿದೆ. ಇದಕ್ಕಾಗಿ ಸಾಲು, ಸಾಲು ಜಾತಿವಾರು ಸಭೆಗಳನ್ನು ನಡೆಸುತ್ತಿದೆ. ಶಿವಮೊಗ್ಗ ನಗರದಲ್ಲಿ 20ಕ್ಕೂ ಸಮುದಾಯಗಳ ಸಭೆ ನಡೆಸಿದೆ. ತಾಲೂಕುಗಳಲ್ಲೂ ಜಾತಿವಾರು ಸಭೆಗಳನ್ನು ಆಯೋಜಿಸಿದೆ. ಮೈತ್ರಿ ಪಕ್ಷಗಳು ಈಡಿಗ, ಮುಸ್ಲಿಂ, ಒಕ್ಕಲಿಗ, ಕುರುಬ ಇತರ ಹಿಂದುಳಿದ ವರ್ಗಗಳ ಮತಗಳು ನಮಗೆ ಬರಬಹುದೆಂದು ಅಂದಾಜಿಸಿ, ಅದಕ್ಕೆ ಪೂರಕವಾಗಿ ಸಭೆ, ಪ್ರಚಾರ ನಡೆಸುತ್ತಿವೆ. ಭದ್ರಾವತಿಯಲ್ಲಿ ಹಾಲಿ, ಮಾಜಿ ಶಾಸಕರಿಬ್ಬರೂ ಮೈತ್ರಿಕೂಟದಲ್ಲಿದ್ದು, ವೀರಶೈವ ಮತ್ತು ಒಕ್ಕಲಿಗ ಸಮಾಜವನ್ನು ಪ್ರತಿನಿಧಿಸುವುದರಿಂದ ಜೆಡಿಎಸ್‌ಗೆ ಹೆಚ್ಚಿನ ಮತಗಳನ್ನು
ನಿರೀಕ್ಷಿಸಲಾಗಿದೆ. ಒಕ್ಕಲಿಗರು ಮತ್ತು ಈಡಿಗರು ಬಹುಸಂಖ್ಯಾತರಾದ ತೀರ್ಥಹಳ್ಳಿ, ಅದೇ ರೀತಿ ಮಧು ಅವರ ಸ್ವ-ಕ್ಷೇತ್ರ ಸೊರಬ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಸಾಗರದಿಂದಲೂ ಮೈತ್ರಿಕೂಟಕ್ಕೆ ಅಧಿ ಕ ಮತಗಳು ಬರಬಹುದೆಂದು ಹೇಳಲಾಗುತ್ತಿದೆ. ಹೀಗಾಗಿ, ಒಕ್ಕಲಿಗರು, ಈಡಿಗರು, ಅಲ್ಪಸಂಖ್ಯಾತರ ಮತಗಳನ್ನುಮೈತ್ರಿಕೂಟ ನಂಬಿ ಕೊಂಡಿದೆ. ವೀರಶೈವ ಮತಗಳು ಕೆಲ ತಾಲೂಕುಗಳಲ್ಲಿ ವಿಭಜನೆ ಆಗಬಹುದು ಎನ್ನಲಾಗಿದೆ.

ಮೈತ್ರಿ ಸಮೀಕರಣ ಬದಲು
ಜಿಲ್ಲೆಯಲ್ಲಿ ಕಾಂಗ್ರೆಸ್‌ ಅಬ್ಬರದ ನಡುವೆಯೂ 60-70ರ ದಶಕದಲ್ಲಿ ಸಮಾಜವಾದಿ ಪಕ್ಷ, 80-90ರ ದಶಕದಲ್ಲಿ ಜನತಾ ಪರಿವಾರ, ರಾಜ್ಯದ ಗಮನ ಸೆಳೆಯುವ ಸಾಧನೆ ಮಾಡಿದರೆ, 2000ದಿಂದ ಬಿಜೆಪಿಯ ಶಕ್ತಿ ಕೇಂದ್ರ ಎನಿಸಿಕೊಂಡಿದೆ. ಕಾಲಕ್ಕೆ ಅನುಗುಣವಾಗಿ ಜಿಲ್ಲೆಯ ಮೈತ್ರಿ ಸಮೀಕರಣ ಬದಲಾಗಿದೆ. 70ರಿಂದ 90ರ ದಶಕದ ನಡುವೆ ಕಾಂಗ್ರೆಸ್‌ನ್ನು ಮಣಿಸಲು ಜನ ಸಂಘ, ನಂತರದಲ್ಲಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದ ಜನತಾ ಪರಿವಾರ, ಈಗ ಅದೇ ಬಿಜೆಪಿ ಕೋಟೆ ಕೆಡವಲು ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದೆ.

Advertisement

ಕಣ ಕಲಿಗಳು
ಬಿ.ವೈ. ರಾಘವೇಂದ್ರ (ಬಿಜೆಪಿ),
ಮಧು ಬಂಗಾರಪ್ಪ (ಜೆಡಿಎಸ್‌)
ಮಹಿಮಾ ಪಟೇಲ್‌ (ಜೆಡಿಯು)

ಕ್ಷೇತ್ರ ವ್ಯಾಪ್ತಿ
ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ನಗರ, ಗ್ರಾಮಾಂತರ, ಭದ್ರಾವತಿ, ತೀರ್ಥಹಳ್ಳಿ, ಸಾಗರ, ಸೊರಬ, ಶಿಕಾರಿಪುರ ಮತ್ತು ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭೆ ಕ್ಷೇತ್ರ.

ಉಪ ಚುನಾವಣೆಯಲ್ಲಿ ನಾನು ಗೆಲ್ಲುವುದರಿಂದ ಸಮ್ಮಿಶ್ರ ಸರಕಾರಕ್ಕೆ ಶಕ್ತಿ ಬರುತ್ತದೆ. ಜಿಲ್ಲೆಯ ಸಮಸ್ಯೆಗಳ ಬಗ್ಗೆ ಸಂಸತ್‌ನಲ್ಲಿ
ಪ್ರಶ್ನಿಸುವೆ. ನಾಲ್ಕು ತಿಂಗಳಲ್ಲಿ ಶಕ್ತಿ ಮೀರಿ ಕೆಲಸ ಮಾಡುವೆ. 

● ಮಧು ಬಂಗಾರಪ್ಪ, ಜೆಡಿಎಸ್‌ ಅಭ್ಯರ್ಥಿ

ಅಭ್ಯರ್ಥಿ ಕಣಕ್ಕಿಳಿಸದೆ ಜೆಡಿಎಸ್‌ ಜತೆಗೆ ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಮಾಡುವ ದುಃಸ್ಥಿತಿ ಕಾಂಗ್ರೆಸ್‌ಗೆ ಬಂದಿದೆ.
ಉಪ ಚುನಾವಣೆ ಫಲಿತಾಂಶ ಬಿಜೆಪಿ ಪರ ಬರುವ ಎಲ್ಲ ಸಾಧ್ಯತೆ ನಿಚ್ಚಳವಾಗಿದೆ.

● ಬಿ.ವೈ. ರಾಘವೇಂದ್ರ, ಬಿಜೆಪಿ ಅಭ್ಯರ್ಥಿ

ಶರತ್ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next