Advertisement

ಮಲೆನಾಡಿನಲ್ಲಿ ಮತ್ತೆ ಅರಳಿದ ಕಮಲ

06:05 AM Nov 08, 2018 | Team Udayavani |

ಶಿವಮೊಗ್ಗ: ಉಪ ಚುನಾವಣೆಯಲ್ಲೂ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕಮಲ ಅರಳಿದ್ದು, ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿಗೆ ಹಿನ್ನಡೆಯಾಗಿದೆ. ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ  ವಿರುದ್ಧ 52,148 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

Advertisement

ಬಿ.ವೈ.ರಾಘವೇಂದ್ರ ಅವರನ್ನು ಸೋಲಿಸಿ ತವರು ಕ್ಷೇತ್ರದಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರಿಗೆ ರಾಜಕೀಯ ಹೊಡೆತ ಕೊಡಬೇಕೆಂಬ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದ ಪ್ರಯತ್ನ ಕೊನೆಗೂ ಫಲಿಸಲಿಲ್ಲ. ಮಲೆನಾಡಿನ ಮತದಾರರು ಮತ್ತೂಮ್ಮೆ ಬಿಜೆಪಿಗೆ ಆಶೀರ್ವಾದ  ಮಾಡಿದ್ದಾರೆ.

ಇಲ್ಲಿನ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ 2002 ಮತಗಟ್ಟೆಗಳ ಮತ ಎಣಿಕೆಯು 18 ಸುತ್ತುಗಳಲ್ಲಿ ನಡೆಯಿತು.  ಮತ ಎಣಿಕೆಯ ಆರಂಭದಿಂದಲೂ 11ನೇ ಸುತ್ತಿನವರೆಗೂ ಕನಿಷ್ಠ ಅಂತರದ ಮುನ್ನಡೆ ಕಾಯ್ದುಕೊಂಡ ರಾಘವೇಂದ್ರ, ನಂತರದಲ್ಲಿ 40 ಸಾವಿರ ಮತಗಳ ಅಂತರಕ್ಕೆ ಜಿಗಿದರು. ಪ್ರತಿ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡ  ರಾಘವೇಂದ್ರ ಅಂತಿಮವಾಗಿ 5,43,306 ಮತಗಳನ್ನು ಪಡೆದರೆ, ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ 4,91,158 ಮತಗಳನ್ನು ಪಡೆದು ಸೋಲುಂಡಿದ್ದಾರೆ.

ಕುಸಿದ ಮತಗಳ ಅಂತರ: 2009ರ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಮಾಜಿ ಮುಖ್ಯಮಂತ್ರಿ ಎಸ್‌. ಬಂಗಾರಪ್ಪ ವಿರುದ್ಧ  52,893 ಮತಗಳಿಂದ ಜಯಗಳಿಸಿದ್ದ ರಾಘವೇಂದ್ರ ಅವರು ಈ ಉಪಚುನಾವಣೆಯಲ್ಲಿ ಮಧು ಬಂಗಾರಪ್ಪ ಅವರ ವಿರುದ್ಧ ಬಹುತೇಕ ಅದೇ ಪ್ರಮಾಣದ ಅಂದರೆ 52,148 ಮತಗಳಿಂದ ಗೆಲುವು ಸಾಧಿ ಸಿದ್ದಾರೆ. 2014ರ ಚುನಾವಣೆಯಲ್ಲಿ ಯಡಿಯೂರಪ್ಪ ಅವರು 3.62 ಲಕ್ಷ ಮತಗಳ ಭಾರೀ ಅಂತರದಲ್ಲಿ ಗೆಲುವು ಸಾಧಿಸಿದ್ದು, ಈ ಅಂತರ ಈಗ 52 ಸಾವಿರಕ್ಕೆ ಕುಸಿದಿದೆ.

ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ 25,573 ಮತಗಳ ಲೀಡ್‌ ಬಿಜೆಪಿಗೆ ಸಿಕ್ಕಿದ್ದರೆ ಯಡಿಯೂರಪ್ಪ ಅವರ ತವರು ಕ್ಷೇತ್ರ ಶಿಕಾರಿಪುರದಲ್ಲಿ 18,783 ಮತಗಳ ಮುನ್ನಡೆ ದೊರಕಿದೆ. ಬೈಂದೂರಿನಲ್ಲಿ ಬಿಜೆಪಿಗೆ 14,470 ಮತಗಳ ಲೀಡ್‌ ಸಿಕ್ಕಿದ್ದರೆ, ಚುನಾವಣೆಯ ಹೊಣೆ ಹೊತ್ತಿದ್ದ ಕಾಂಗ್ರೆಸ್‌ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ಅವರು ತಮ್ಮ ಸಾಗರ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿಗೆ 8737 ಮತಗಳ ಮುನ್ನಡೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಭದ್ರಾವತಿಯಲ್ಲಿ ಶಾಸಕ ಬಿ.ಕೆ.ಸಂಗಮೇಶ್‌, ಮಾಜಿ ಶಾಸಕ ಅಪ್ಪಾಜಿ ಅವರು ಜೆಡಿಎಸ್‌ಗೆ 10,965 ಮತಗಳ ಲೀಡ್‌ ನೀಡುವ ಮೂಲಕ ತಮ್ಮ ಸಾಮರ್ಥ್ಯವನ್ನು ತೋರಿದ್ದಾರೆ. ಉಳಿದಂತೆ ತೀರ್ಥಹಳ್ಳಿ (7214), ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ (7282) ಮತದಾರರು ಬಿಜೆಪಿ ಬೆಂಬಲಿಸಿದ್ದಾರೆ. ಬೆಂಬಲ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next