ಶಿವಮೊಗ್ಗ: ನಮ್ಮಲ್ಲಿ ಹೈಕಮಾಂಡ್ ಇದೆ. ರಾಜ್ಯಧ್ಯಕ್ಷ ಬದಲಾವಣೆ ವಿಚಾರವನ್ನು ಅದು ನೋಡಿಕೊಳ್ಳುತ್ತದೆ. ಸದ್ಯಕ್ಕೆ ವಿಜಯೇಂದ್ರ ಅಧ್ಯಕ್ಷರಾಗಿದ್ದಾರೆ. ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿ ದಕ್ಷ ನಾಯಕರಾಗಿ ಸಂಘಟನೆ ಮಾಡುತ್ತಿದ್ದಾರೆ ಎಂದು ಶಿವಮೊಗ್ಗದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಸೋಮವಾರ (ಡಿ.16) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನವರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬದಲಾಗುತ್ತಾರೆಂಬ ಕುಮಾರ್ ಬಂಗಾರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಬರುವಂತಹ ದಿನಗಳಲ್ಲಿ ಕಾರ್ಯಕರ್ತರ ಚುನಾವಣೆಗಳು ಜಿಲ್ಲಾ ಪಂಚಾಯತ್ ಚುನಾವಣೆಗಳು ಬರುತ್ತಿದೆ. ಈ ಸಂದರ್ಭದಲ್ಲಿ ನಾಲ್ಕು ಗೋಡೆ ಮಧ್ಯೆ ಮಾತಾಡಬೇಕು. ಈ ದಿಕ್ಕಿನಲ್ಲಿ ನಮ್ಮ ನಾಯಕರು ಗಮನ ಹರಿಸಬೇಕು ಎಂದರು.
70 ವರ್ಷಗಳ ಶರಾವತಿ ಯೋಜನೆಯ ಸಂತ್ರಸ್ತರಿಗೆ ಭೂಮಿಯನ್ನು ಡಿ ರೀಸರ್ವ್ ಮಾಡಲು 50-60 ವರ್ಷದಿಂದ ಚರ್ಚೆಯಲ್ಲಿದೆ. ನ್ಯಾಯಯುತವಾಗಿ ಯಾರು ಪ್ರಯತ್ನ ಮಾಡಿರಲಿಲ್ಲ. ಯಡಿಯೂರಪ್ಪನವರ ನೇತೃತ್ವದಲ್ಲಿ ನಮ್ಮ ನಾಯಕರ ನಿಯೋಗ ಅರಣ್ಯ ಸಚಿವರನ್ನು ಭೇಟಿ ಮಾಡಿ ಮನವಿ ಕೊಟ್ಟಿದ್ದೆವು. ಅದಾದ ನಂತರ ಬಿಜೆಪಿ ಸರ್ಕಾರದ ಅಧಿಕಾರಾವಧಿ ಮುಗಿದು ಹೋಗಿತ್ತು. ವಿಶ್ವಾಸಗಳೇ ಕಳೆದುಕೊಳ್ಳುವ ದಿನಗಳು ಸಂದರ್ಭದಲ್ಲಿ ಸಂತಸದ ದಿನಗಳು ಬರುತ್ತಿದೆ. ಸರ್ವೋಚ್ಚ ನ್ಯಾಯಲಯ ಕೂಲ ರೈತರ ಪರ ನಿಲುವು ತೋರಿದೆ ಸಂಸತ್ತಿನಲ್ಲಿ ಸಹ ಶರಾವತಿ ಸಂತ್ರಸ್ತರ ಪರವಾಗಿ ಮಾತಾಡಿದ್ದೇನೆ. ರೈತರಿಗೆ ಆದಷ್ಟು ಬೇಗ ನ್ಯಾಯ ಒದಗಿಸಲು ನಮ್ಮ ನಿಯೋಗ ಸಚಿವರನ್ನು ಭೇಟಿ ಮಾಡಿ ಬಂದಿದ್ದೇವೆ ಎಂದರು.
ಕೇಂದ್ರದ ಸೂಚನೆ ಮೆರೆಗೆ ರಾಜ್ಯ ಸರ್ಕಾರ ಐಎ ಹಾಕಿದೆ. ರಾಜ್ಯ ಸರ್ಕಾರ ನಮ್ಮ ಕರ್ತವ್ಯ ಮುಗಿಯಿತೆಂದು ಸುಮ್ಮನೆ ಕೂರಬಾರದು. ಶರಾವತಿ ಸಂತ್ರಸ್ತರಿಗೆ ಭೂಮಿ ಕೊಡುವ ಕೆಲಸ ಐತಿಹಾಸಿಕವಾಗಲಿದೆ. ಕೇಂದ್ರ ಅರಣ್ಯ ಸಚಿವರಿಗೆ ನಾವು ಅಭಿನಂಧನೆ ಸಲ್ಲಿಸುತ್ತೇನೆ. ಶರಾವತಿ ಸಂತ್ರಸ್ತರ ಸಮಸ್ಯೆ ಬಗ್ಗೆ ನಮಗೆ ಸಮಯ ಕೊಟ್ಟು ಸಮಸ್ಯೆ ಆಲಿಸಿದ್ದಾರೆ. ಕೇಂದ್ರ ಸರಕಾರ ಸಂತ್ರಸ್ಥರ ಪರವಾಗಿದೆ ಎಂದು ರಾಘವೇಂದ್ರ ಹೇಳಿದರು.
ಒಂದು ದೇಶ ಒಂದು ಚುನಾವಣೆ ಒಳ್ಳೆಯ ವಿಚಾರ. ಕೆಲವು ವಿಪಕ್ಷಗಳು ಇದನ್ನು ವಿರೋಧ ಮಾಡಬೇಕೆಂದು ವಿರೋಧ ಮಾಡುತ್ತಿದ್ದಾರೆ. ಪಂಚಮಸಾಲಿ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡ್ತಿದ್ದಾರೆ ಎಂದರು.
ವಕ್ಪ್ ವಿಚಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ 150 ಕೋಟಿ ಆಫರ್ ವಿಚಾರಕ್ಕೆ ಮಾತನಾಡಿ, ಕಾಂಗ್ರೆಸ್ ನಾಯಕರು ನನ್ನನ್ನು ಬುಕ್ ಮಾಡಲು ಬಂದಿದ್ದರೆಂದು ಮಾಣಿಪ್ಪಾಡಿ ಅವರೇ ಹೇಳಿದ್ದಾರೆ. ಕಾಂಗ್ರೆಸ್ ನವರು ಅವರ ತಪ್ಪನ್ನು ಮುಚ್ಚಿಕೊಳ್ಳಲು ಈ ರೀತಿ ಪ್ರಯತ್ನ ಮಾಡ್ತಿದ್ದಾರೆ. ವಿಷಯವನ್ನು ಬದಲಾಯಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ರಾಘವೇಂದ್ರ ಹೇಳಿದರು.