ಶಿವಮೊಗ್ಗ: ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ ಸೌಲಭ್ಯ ಹಾಗೂ ಸ್ವಯಂ ಉದ್ಯೋಗ ಕೈಗೊಳ್ಳಲು ನೇರ ಸಾಲ ಯೋಜನೆಗಳನ್ನು ಇದೇ ಮೊದಲ ಬಾರಿಗೆ ಆರಂಭಿಸಲಾಗಿದೆ ಎಂದು ನಿಗಮದ ಅಧ್ಯಕ್ಷ .ಎಸ್. ಅರುಣ್ ಅವರು ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ಯವೈಶ್ಯ ಸಮುದಾಯದ ಅರ್ಹ ವಿದ್ಯಾರ್ಥಿಗಳಿಗೆ ಅರಿವು ಶೈಕ್ಷಣಿಕ ಸಾಲ ಯೋಜನೆ ಆರಂಭಿಸಲಾಗಿದೆ. ಈ ಯೋಜನೆಯಡಿ ಇಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ ಇತ್ಯಾದಿ ವೃತ್ತಿಪರ ಪದವಿ ಹಾಗೂ ಸ್ನಾತಕೋತ್ತರ ಪದವಿಗಳಲ್ಲಿ ಸಿಇಟಿ ಮೂಲಕ ಆಯ್ಕೆಯಾದ ವಿದ್ಯಾರ್ಥಿಗಳಿಗೆ ವಾರ್ಷಿಕ ಶೇ.2ರ ಬಡ್ಡಿದರದಲ್ಲಿ ಗರಿಷ್ಟ ಒಂದು ಲಕ್ಷ ರೂ. ಶೈಕ್ಷಣಿಕ ಸಾಲ ಮಂಜೂರು ಮಾಡಲಾಗುವುದು ಎಂದು ಹೇಳಿದರು.
ವಿದ್ಯಾರ್ಥಿ ಕುಟುಂಬದ ವಾರ್ಷಿಕ ವರಮಾನ 6 ಲಕ್ಷ ರೂ. ಒಳಗಿರಬೇಕು. ಫಲಾನುಭವಿಗಳ ಆಯ್ಕೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡಲಾಗುವುದು. ಈ ಯೋಜನೆ ಅಡಿಯಲ್ಲಿ ಪಡೆದ ಸಾಲವನ್ನು ವ್ಯಾಸಂಗ ಪೂರ್ಣಗೊಂಡ 4ನೇ ತಿಂಗಳಿನಿಂದ 3 ವರ್ಷಗಳ ಅವಧಿಯಲ್ಲಿ ಪಾವತಿಸಬೇಕು ಎಂದು ಹೇಳಿದರು. ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಡಿ ವೈಶ್ಯ ಸಮುದಾಯಕ್ಕೆ ಸೇರಿದ ಅರ್ಜಿದಾರರು ಸ್ವಯಂ ಉದ್ಯೋಗ ಕೈಗೊಳ್ಳಲು ಗರಿಷ್ಟ 1ಲಕ್ಷ ರೂ. ಆರ್ಥಿಕ ನೆರವು ಒದಗಿಸಲಾಗುವುದು. ಸಾಂಪ್ರದಾಯಿಕ ವೃತ್ತಿಗಳಲ್ಲದೆ ಹಸು ಸಾಕಣೆ, ಸೇವಾ ಚಟುವಟಿಕೆಗಳಿಗೆ ಸಹ ಈ ನೆರವು ಬಳಸಿಕೊಳ್ಳಬಹುದು. ಈ ಯೋಜನೆಯಡಿ ಕನಿಷ್ಟ 50 ಸಾವಿರ ರೂ. ನೆರವು ಒದಗಿಸಲಾಗುವುದು. ಈ ಮೊತ್ತದಲ್ಲಿ ಶೇ.20ರಷ್ಟು ಸಹಾಯಧನವಾಗಿ ಉಳಿದ ಮೊತ್ತವನ್ನು ಸಾಲದ ರೂಪದಲ್ಲಿ ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ನೀಡಲಾಗುವುದು. ಅರ್ಜಿದಾರರ ವಾರ್ಷಿಕ ವರಮಾನ 3 ಲಕ್ಷ ರೂ.ಗಿಂತ ಹೆಚ್ಚಿರಬಾರದು. ಅರ್ಜಿದಾರರು 18 ವರ್ಷದಿಂದ 45 ವರ್ಷ ಒಳಗಿನವರಾಗಿರಬೇಕು ಎಂದು ಅವರು ಹೇಳಿದರು.
ಆರ್ಯವೈಶ್ಯ ಸಮುದಾಯದವರಿಗೆ ಈಗಾಗಲೇ ಆದಾಯ ಮತ್ತು ಜಾತಿ ಪ್ರಮಾಣ ಪತ್ರವನ್ನು ನೀಡಲು ಕ್ರಮ ಕೈಗೊಳ್ಳಲಾಗಿದೆ. ಪ್ರಸ್ತುತ ನಿಗಮಕ್ಕೆ 10 ಕೋಟಿ ರೂ. ಅನುದಾನ ಸರ್ಕಾರ ಒದಗಿಸಿದ್ದು, ಹೊಸ ಬಜೆಟ್‌ನಲ್ಲಿ ಹೆಚ್ಚು ಅನುದಾನದ ಮೊತ್ತವನ್ನು ನಿರೀಕ್ಷಿಸಲಾಗಿದೆ ಎಂದರು.