ಶಿವಮೊಗ್ಗ: ಕೋವಿಡ್ ಲಾಕ್‌ಡೌನ್ ಮಧ್ಯೆಯೂ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಹೆಚ್ಚಿಸಲು ಕೇಂದ್ರ ಸರಕಾರ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಮೊತ್ತವನ್ನು ರೂ.249ರಿಂದ 275ಕ್ಕೆ ಹೆಚ್ಚಳ ಮಾಡಿದೆ. ಯೋಜನೆಯಡಿ ಬಾಕಿ ಉಳಿದಿರುವ ಎಲ್ಲಾ ಮೊತ್ತವನ್ನು ವಾರದೊಳಗಾಗಿ ಪಾವತಿ ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು.
ಶನಿವಾರ ಎಸಿ ಕಚೇರಿ ಸಭಾಂಗಣದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ನದಿ ಪುನಶ್ಚೇತನ ಕಾರ್ಯಕ್ರಮ ಅನುಷ್ಠಾನ ಕುರಿತು ಪಿಡಿಒ, ಗ್ರಾಮ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಪ್ರತಿನಿಧಿಗಳಿಗೆ ಆಯೋಜಿಸಲಾಗಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಕೇಂದ್ರ ಸರ್ಕಾರ ಬಾಕಿ ಅನುದಾನ ಬಿಡುಗಡೆ ಮಾಡಿದ್ದಲ್ಲದೆ ಹೊಸ ಕಾಮಗಾರಿ ಕೈಗೊಳ್ಳಲು ಇನ್ನೂ 1ಸಾವಿರ ಕೋಟಿ ರೂ. ಮುಂಗಡವಾಗಿ ಜಿಲ್ಲೆಗೆ ಬಿಡುಗಡೆ ಮಾಡಿದೆ. ಹೀಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಈ ಯೋಜನೆಯಡಿ ಹೆಚ್ಚೆಚ್ಚು ಉದ್ಯೋಗ ಸೃಷ್ಟಿ ಮಾಡಬೇಕು. ವಾರದೊಳಗಾಗಿ ಕೂಲಿ ಹಣ ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.
ಉದ್ಯೋಗ ಖಾತ್ರಿ ಯೋಜನೆಯಡಿ 5 ಜನರ ತಂಡಗಳನ್ನು ರಚಿಸಿ ಕಾಮಗಾರಿ ಅನುಷ್ಠಾನಗೊಳಿಸಬೇಕು. ಗುಂಪಾಗಿ ಕೆಲಸ ಮಾಡದೆ, ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ಮಾಡಬೇಕು. ನದಿ ಪುನಶ್ಚೇತನ ಯೋಜನೆಯಡಿ, ಮಳೆ ನೀರು ಹರಿದು ಪೋಲಾಗಿ ಹೋಗದೆ ಪ್ರತಿ ಹನಿ ನೆಲದ ಒಳಗೆ ಇಂಗುವಂತಹ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಇದಕ್ಕಾಗಿ ಇಂಗು ಗುಂಡಿಗಳ ರಚನೆ, ಮಣ್ಣಿನ ಸವಕಳಿ ತಡೆಯುವುದು, ಗಿಡ ಮರ ಬೆಳೆಸುವುದು ಸೇರಿದಂತೆ ಎಲ್ಲಾ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮ ಮಟ್ಟದಲ್ಲಿ ಶಾಶ್ವತ ಆಸ್ತಿ ನಿರ್ಮಾಣ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು. ಶಾಸಕ ಅಶೋಕ ನಾಯ್ಕ ಮಾತನಾಡಿ, ತಾಲೂಕಿನಲ್ಲಿ 300ಕ್ಕೂ ಹೆಚ್ಚು ಕೆರೆಗಳಿವೆ. ನದಿ ಪುನಶ್ಚೇತನ ಯೋಜನೆಯಡಿ ಎಲ್ಲಾ ಕೆರೆಗಳ ಹೂಳೆತ್ತಿದರೆ ರೈತರ ಬೆಳೆಗಳಿಗೆ ಸಾಕಷ್ಟು ನೀರು ಒದಗಿಸಲು ಸಾಧ್ಯವಿದೆ. ಏತನೀರಾವರಿ ಮೂಲಕ ತಾಲೂಕಿನ 70ಕೆರೆಗಳನ್ನು ತುಂಬಿಸುವ ಕಾಮಗಾರಿಗಳಿಗೆ ಈಗಾಗಲೇ ಚಾಲನೆ ನೀಡಲಾಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್. ವೈಶಾಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಯೋಜನಾ ನಿರ್ದೇಶಕ ವೀರಾಪುರ ಕಾರ್ಯಕ್ರಮ ನಿರೂಪಿಸಿದರು. ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ನಿರ್ದೇಶಕರಾದ ನಾಗರಾಜ ಗಂಗೊಳ್ಳಿ ಮತ್ತು ರವೀಂದ್ರ ದೇಸಾಯಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ರುದ್ರೇಗೌಡ, ಪ್ರಸನ್ನ ಕುಮಾರ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಸದಸ್ಯರಾದ ಸೌಮ್ಯ ಬೋಜ ನಾಯ್ಕ, ಕಾಂತೇಶ್, ಹೇಮಾ ಶಿವನಂಜಪ್ಪ, ನಾಗರಾಜ ತಮ್ಮಡಿಹಳ್ಳಿ, ತಾಲೂಕು ಪಂಚಾಯತ್ ಅಧ್ಯಕ್ಷೆ ಗೀತಾ ಜಯಶಂಕರ್ ಮತ್ತಿತರರು ಉಪಸ್ಥಿತರಿದ್ದರು.