ಶಿವಮೊಗ್ಗ: 24 ಗಂಟೆ ನೀರು ಪೂರೈಕೆ ಮಾಡುವ ಮಹತ್ವಾಕಾಂಕ್ಷೆ ಯೋಜನೆಯ ನಲ್ಲಿಗಳ ಕಳ್ಳತನ ಪ್ರಕರಣಗಳು ಹಚ್ಚಾಗಿದೆ. ನೆಹರೂ ರಸ್ತೆಯಲ್ಲಿ ಅಂಗಡಿಗಳ ಮುಂದೆ ಅಳವಡಿಸಿದ್ದ ನಲ್ಲಿಗಳು ನಿತ್ಯ ಕಳವಾಗುತ್ತಿವೆ. ಬಹುತೇಕ ನಲ್ಲಿಗಳು ಕುಡುಕರ ಪಾಲಾಗುತ್ತಿವೆ.
ಶಿವಮೊಗ್ಗದಲ್ಲಿ 24 * 7 ಕುಡಿಯುವ ನೀರು ಪೂರೈಕೆ ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ. ಮನೆಗಳು, ಅಂಗಡಿಗಳಿಗೆ ಪ್ರತ್ಯೇಕ ನೀರಿನ ಪೈಪ್, ಮೀಟರ್ ಅಳವಡಿಸಲಾಗುತ್ತಿದೆ. ಶಿವಮೊಗ್ಗದ ನೆಹರೂ ರಸ್ತೆಯಲ್ಲೂ ನೀರಿನ ಪೈಪ್ ಅಳವಡಿಸಲಾಗಿದೆ. ಆದರೆ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ನಲ್ಲಿಗಳು ಕಣ್ಮರೆಯಾಗುತ್ತಿವೆ. ಈ ಬಗ್ಗೆ ಅಂಗಡಿ ಮಾಲೀಕರು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ.
ಒಂದು ತಿಂಗಳಿಂದ ಈಚೆಗೆ ಶಿವಮೊಗ್ಗದ ನೆಹರೂ ರಸ್ತೆಯಲ್ಲಿ ನಲ್ಲಿಗಳನ್ನು ಅಳವಡಿಸಲಾಗಿದೆ. ಆದರೆ ನಿತ್ಯ ಒಂದೊಂದು ಅಂಗಡಿ ಮುಂದಿನ ನಲ್ಲಿ ಕಳ್ಳತನವಾಗುತ್ತಿದೆ. ಬಹುತೇಕ ನಲ್ಲಿಗಳನ್ನು ಕುಡುಕರು ಕದಿಯುತ್ತಿದ್ದಾರೆ ಎಂಬ ಅಪಾದನೆ ಇತ್ತು. ಈಗ ವಿಡಿಯೋ ಸಾಕ್ಷಿಯು ಲಭ್ಯವಾಗಿದೆ.
ಅಂಗಡಿಗಳ ಬಾಗಿಲು ತೆಗೆಯುವ ಮೊದಲೆ ನಲ್ಲಿಗಳ ಕಳ್ಳತನವಾಗುತ್ತಿದೆ. ನಲ್ಲಿ ಕಳ್ಳತನ ಮಾಡುತ್ತಿರುವುದನ್ನು ಸ್ಥಳೀಯರೊಬ್ಬರು ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಅಂಗಡಿಯೊಂದರ ಮುಂದೆ ಅಳವಡಿಸಿದ್ದ ನಲ್ಲಿಯನ್ನು ವ್ಯಕ್ತಿಯೊಬ್ಬ ಕಳಚಿಕೊಂಡು ಹೋಗುವ ದೃಶ್ಯ ಸೆರೆಯಾಗಿದೆ. ಸ್ವಲ್ಪ ಹೊತ್ತಿನಲ್ಲಿ ಸಂಪೂರ್ಣ ಪಾನಮತ್ತನಾಗಿ ಬರುವ ಆ ವ್ಯಕ್ತಿ, ನೆಹರೂ ರಸ್ತೆಯ ಡಿವೈಡರ್ ಮೇಲೆ ಬಂದು ಮಲಗುವುದು ದೃಶ್ಯದಲ್ಲಿ ಸೆರೆಯಾಗಿದೆ.
ನೆಹರೂ ರಸ್ತೆಯಲ್ಲಿ ನಿತ್ಯ ಇಂತಹ ಪ್ರಕರಣಗಳು ವರದಿಯಾಗುತ್ತಿವೆ ಎಂದು ಇಲ್ಲಿಯ ಅಂಗಡಿ ಮಾಲೀಕರು ಆರೋಪಿಸುತ್ತಾರೆ. ಇದು ಹೀಗೆ ಮುಂದುವರೆದರೆ ನೀರಿನ ಪೈಪ್‌ಗಳು ಕೂಡ ಕಳ್ಳತನವಾಗುವ ಸಾಧ್ಯತೆ ಇದೆ. ಈ ಬಗ್ಗೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕಿದೆ. ನಲ್ಲಿ ಕಳ್ಳತನದ ಬಗ್ಗೆ ಯಾರೊಬ್ಬರೂ ಪೊಲೀಸರಿಗೆ ದೂರು ನೀಡುವುದಿಲ್ಲ. ಇದೆ ಕಾರಣಕ್ಕೆ ನಲ್ಲಿ ಕಳ್ಳತನಕ್ಕೆ ತಡೆಯಿಲ್ಲದಂತೆ ಆಗಿದೆ.