Advertisement

ಕೋವಿಡ್ ವಾರಿಯರ್ಸ್ ಗೌರವಿಸೋದು ಶ್ಲಾಘನೀಯ ಕಾರ್ಯ

04:09 PM May 27, 2020 | Naveen |

ಶಿವಮೊಗ್ಗ: ಕೋವಿಡ್  ನಿಂದ ಜನರನ್ನು ರಕ್ಷಿಸಲು ಕಳೆದೆರಡು ತಿಂಗಳಿನಿಂದ ರಾತ್ರಿ- ಹಗಲು ಎನ್ನದೆ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತರು, ಆರಕ್ಷಕರು, ವೈದ್ಯರು, ಪೌರಕಾರ್ಮಿಕರು ಹಾಗೂ ಸೈನಿಕರನ್ನು ಗೌರವಿಸುವುದು ನಿಜಕ್ಕೂ ಶ್ಲಾಘನೀಯ ಕಾರ್ಯ ಎಂದು ಮಹಾನಗರ ಪಾಲಿಕೆ ಸದಸ್ಯ ಎಚ್‌.ಎಂ. ಯೋಗೀಶ್‌ ತಿಳಿಸಿದರು.

Advertisement

ವಿನೋಬನಗರ 18ನೇ ವಾರ್ಡ್‌ನ ಸ್ನೇಹಜೀವಿ ಬಳಗದಿಂದ ಕೋವಿಡ್ ವಾರಿಯರ್ಸ್‌ಗಳಿಗೆ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಇಡೀ ವಿಶ್ವವೇ ಆಪತ್ತಿನಲ್ಲಿ ಸಿಲುಕುವಂತೆ ಮಾಡಿದ ಕಣ್ಣಿಗೆ ಕಾಣದ ಕೋವಿಡ್ ವೈರಸ್‌ ಎಲ್ಲರಲ್ಲೂ ಆತಂಕ ಸೃಷ್ಟಿಸಿದೆ. ಈ ವೈರಸ್‌ ವಿರುದ್ಧ ಎಲ್ಲರೂ ಒಟ್ಟಾಗಿ ಹೋರಾಡುವಂತಹ ಸ್ಥಿತಿ ಎದುರಾಗಿದೆ ಎಂದರು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಸಾಕಷ್ಟು ಶ್ರಮ ವಹಿಸುತ್ತಿವೆ. ಅದರಲ್ಲೂ ಪೌರ ಕಾರ್ಮಿಕರು ದಿನನಿತ್ಯ ಸ್ವತ್ಛತೆ ಕಾಪಾಡುವ ನಿಟ್ಟಿನಲ್ಲಿ ಬದುಕಿನ ಆತಂಕದ ನಡುವೆಯೂ ಕೆಲಸದಲ್ಲಿ ತೊಡಗುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ಮಾಜಿ ಸೂಡ ಅಧ್ಯಕ್ಷ ದತ್ತಾತ್ರಿ ಮಾತನಾಡಿ, ಜನರು ಆದಷ್ಟು ಒಳ್ಳೆಯ ಜೀವನ, ಒಳ್ಳೆಯ ನಡತೆ, ಆಹಾರ ಕ್ರಮ, ಯೋಗ, ಧ್ಯಾನ, ನಡಿಗೆಯನ್ನು ಪ್ರತಿ ದಿನ ಅಳವಡಿಸಿಕೊಂಡು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು ಎಂದು ತಿಳಿಸಿದರು. ವಾರ್ಡ್‌ ಸದಸ್ಯ ರಾಹುಲ್‌ ಬಿದರೆ ಮಾತನಾಡಿ, ನನ್ನ ವಾರ್ಡ್‌ನಲ್ಲಿ ಸ್ನೇಹಜೀವಿ ಬಳಗ ಇರುವುದು ನಿಜಕ್ಕೂ ಹೆಮ್ಮೆಯ ವಿಷಯ ಎಂದು ಹೇಳಿದರು.

ಪಾಲಿಕೆ ಮಾಜಿ ಸದಸ್ಯ ಪಾಲಾಕ್ಷಿ ಮಾತನಾಡಿ, ವಾರ್ಡ್‌ನಲ್ಲಿ ರಾಹುಲ್‌ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಎಲ್ಲರೂ ಒಂದೇ. ಸ್ನೇಹ ಜೀವಿ ಬಳಗದಂತಹ ಸಾಮಾಜಿಕ ಕಳಕಳಿ ಇರುವ ಸಂಸ್ಥೆಗಳೊಂದಿಗೆ ಕೈಜೋಡಿಸಿದರೆ ಜನರು ಸಹಕರಿಸುತ್ತಾರೆ ಎಂದರು. ವೈದ್ಯರಾದ ಡಾ| ಶ್ರೀಧರ್‌, ಬಳಗದ ಶರತ್‌ಚಂದ್ರ, ಮಾಜಿ ಸೈನಿಕರಾದ ಸತೀಶ್‌, ಜಗದೀಶ್‌, ಆರಕ್ಷಕರಾದ ಚಂದ್ರಪ್ಪ, ರಾಮಪ್ಪ, ಕಂಠಪ್ಪ ಇನ್ನಿತರರು ಭಾಗವಹಿಸಿದ್ದರು. ಬಳಗದ ಶಿವಮೂರ್ತಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next