ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಅಧಿಕಾರಾವಧಿಯಲ್ಲಿ ದೇಶ ಅಭಿವೃದ್ಧಿ ಪಥದಲ್ಲಿ ಮುನ್ನಡೆದಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು. ಪತ್ರಿಕಾ ಭವನದಲ್ಲಿ ಗುರುವಾರ ಪ್ರೆಸ್ ಟ್ರಸ್ಟ್ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೇಂದ್ರದಲ್ಲಿ ಬಿಜೆಪಿ ಎರಡನೇ ಬಾರಿ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರ್ಣಗೊಂಡಿದೆ. ದೇಶದ ಎಲ್ಲೆಡೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದೆ ಎಂದು ಹೇಳಿದರು.
ಜಗತ್ತಿನೆಲ್ಲೆಡೆ ಕೋವಿಡ್ ವೈರಸ್ ಸಾಕಷ್ಟು ಸಂಕಷ್ಟವನ್ನು ತಂದೊಡ್ಡಿದೆ. ಆದರೆ ಪ್ರಧಾನಿ ಮೋದಿ ಕೈಗೊಂಡ ತೀರ್ಮಾನದಿಂದಾಗಿ ದೇಶದಲ್ಲಿ ಕೋವಿಡ್ ವೈರಸ್ ಹರಡುವಿಕೆ ತಡೆಗಟ್ಟುವಲ್ಲಿ ಸಫಲರಾಗಿದ್ದೇವೆ. ಅವರ ನಿರ್ಧಾರ ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದರು. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಕ್ಕೂ ಮೊದಲು ದೇಶದಲ್ಲಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಭರವಸೆ ನೀಡಲಾಗಿತ್ತು. ಉದ್ಯೋಗ ಸೃಷ್ಟಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ನಾಲ್ಕು ಬಾರಿ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ಎದುರಿಸಿದ್ದೇನೆ. ಯಾವ ಸಂದರ್ಭದಲ್ಲಿಯೂ ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಸರ್ಕಾರ ಅಧಿಕಾರಕ್ಕೆ ಬಂದಿರಲಿಲ್ಲ. ಆದರೆ ಈ ಬಾರಿ ಕೇಂದ್ರ ಹಾಗೂ ರಾಜ್ಯದಲ್ಲಿ ಎರಡೂ ಕಡೆ ಒಂದೇ ಸರ್ಕಾರ ಅ ಧಿಕಾರಕ್ಕೆ ಬಂದಿದೆ. ಇದರಿಂದ ರಾಜ್ಯದ ಅಭಿವೃದ್ಧಿಗೆ ಇನ್ನಷ್ಟು ಅನುಕೂಲ ಆಗಲಿದೆ ಎಂದರು.
ತಾಳಗುಪ್ಪದಿಂದ ಸಿದ್ದಾಪುರ, ಹರಿಹರ-ಶಿವಮೊಗ್ಗ ಮಾರ್ಗ, ರೈಲ್ವೆ ಟರ್ಮಿನಲ್ ಹೀಗೆ ಜಿಲ್ಲೆಯಲ್ಲಿ ಸಾಕಷ್ಟು ರೈಲ್ವೆ ಅಭಿವೃದ್ಧಿ ಕಾರ್ಯ ನಡೆಯುತ್ತಿವೆ. ರಸ್ತೆ ಅಭಿವೃದ್ಧಿಯಲ್ಲಿ ಹೊರ ವರ್ತುಲ ರಸ್ತೆ, ತುಮರಿ ಸೇತುವೆ ನಿರ್ಮಾಣ, ಕೊಲ್ಲೂರು ರಾಣೇಬೆನ್ನೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಶಿವಮೊಗ್ಗ ತುಮಕೂರು ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಮೊಬೈಲ್ ಟವರ್ ಸ್ಥಾಪನೆಯ ಗುರಿ ಹೊಂದಲಾಗಿದೆ. ಮಲೆನಾಡ ಭಾಗದ ಗ್ರಾಮದ ಯುವಕರಿಗೆ ಇದು ಅನುಕೂಲವಾಗಲಿದೆ. ಇಎಸ್‌ಐ ಆಸ್ಪತ್ರೆ ಕಾಮಗಾರಿ ನಡೆಯಲಿದೆ ಎಂದು ಹೇಳಿದರು.
ಸಂಸದರು ತಮ್ಮ ಎಂಪಿ ಅನುದಾನವನ್ನು ಬಳಸಿಕೊಂಡಿಲ್ಲವೆಂದು ಹೇಳಲಾಗಿದೆ. ನನ್ನ ನೇತೃತ್ವದಲ್ಲಿಯೇ ಸಂಸದರ ಹಣವನ್ನು ಕೇಂದ್ರದಿಂದ ತರುವ ಪ್ರಯತ್ನ ಮಾಡಲಾಗುತ್ತಿದೆ. 2 ಕೋಟಿ ರೂ. ಬಸ್ ತಂಗುದಾಣ ನಿರ್ಮಾಣಕ್ಕೆ ಖರ್ಚಾಗಿದೆ. ಶಾಲಾ ಅಭಿವೃದ್ಧಿಗೆ 70 ಲಕ್ಷ ರೂ. ಖರ್ಚು ಮಾಡಲಾಗಿದೆ. ಇವೆಲ್ಲಾ ಕಾಮಗಾರಿ ಪ್ರಗತಿಯಲ್ಲಿವೆ. ಮುಂದಿನ ವರ್ಷದಲ್ಲಿ ಎಂಪಿ ಅನುದಾನ ಬಿಡುಗಡೆ ಆಗುವ ಸಾಧ್ಯತೆ ಕಡಿಮೆ. ಹಾಗಾಗಿ, ಇರುವ ಹಣದಲ್ಲಿಯೇ ಅಭಿವೃದ್ಧಿ ಕಾಮಗಾರಿ ನಡೆಯಬೇಕಿದೆ ಎಂದರು.
ಮಂಕಿ ಪಾರ್ಕ್ ನಿರ್ಮಾಣಕ್ಕೆ ಈಗಾಗಲೇ ಹಣ ಬಿಡುಗಡೆ ಮಾಡಲಾಗಿದೆ. ಜೋಗ್ ಫಾಲ್ಸ್ ನಲ್ಲಿ ಅಭಿವೃದ್ಧಿ ಕಾಮಗಾರಿ, ಕೊಡಚಾದ್ರಿ ಮತ್ತು ಕೊಲ್ಲೂರಿನಲ್ಲಿ ಕೇಬಲ್ ಕಾರ್ ನಿರ್ಮಾಣದ ಕಾಮಗಾರಿ ನಡೆಯಲಿದೆ. ಜಿಲ್ಲೆಯಲ್ಲಿ ಅಭಿವೃದ್ಧಿ ಕಾಮಗಾರಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು. ಪ್ರಾದೇಶಿಕ ವಿಜ್ಞಾನ ಕೇಂದ್ರ, ಸ್ಕಿಲ್ ಪಾರ್ಕ್, ಏಕಲವ್ಯ ವಸತಿ ಶಾಲೆ ಹಿಂದುಳಿದ ವರ್ಗ ಹೆಚ್ಚಿ ಇರುವ ಪ್ರದೇಶದಲ್ಲಿ ನಿರ್ಮಾಣವಾಗಲಿದೆ. ವಿಐಎಸ್ ಎಲ್ ಕಾರ್ಖಾನೆ ಖಾಸಗೀಕರಣಕ್ಕೆ ಟೆಂಡರ್ ಬಂದಿದೆ. ಬೈಂದೂರಿನಲ್ಲಿ ನದಿ ಹಾಗೂ ಸಮುದ್ರದ ನೀರು ಇದ್ದರೂ ಕುಡಿಯುವ ನೀರಿನ ಸಮಸ್ಯೆ ಇದೆ. ಅಲ್ಲಿ ಕುಡಿಯುವ ಪ್ರತಿ ಮನೆಗೆ ಕುಡಿಯುವ ನೀರು ಕೊಡುವ ಪ್ರಯತ್ನ ನಡೆಯುತ್ತಿದೆ. ಇದಕ್ಕೆ 200 ಕೋಟಿ ರೂ.ಅಂದಾಜು ಮಾಡಲಾಗಿದೆ ಎಂದರು.
ಎಫ್‌ಎಂ ರೇಡಿಯೋ ಸ್ಥಾಪನೆಗೆ ಪ್ರಯತ್ನ ನಡೆಯುತ್ತಿದೆ. ಸಕ್ರೇಬೈಲಿನಲ್ಲಿ 100 ಎಕರೆಯಲ್ಲಿ ನಮೋ ಗಾರ್ಡನ್ ವೈದ್ಯಕೀಯ ಸಸ್ಯ ಸಂರಕ್ಷಣೆ, ಜಿಲ್ಲಾಡಳಿತ ಭವನ ನಿರ್ಮಾಣ ಗುರಿ ಹೊಂದಲಾಗಿದ್ದು, ಜಾಗ ಪರಿಶೀಲನೆ ನಡೆಯುತ್ತಿದೆ. ಮಾದರಿ ಜಿಲ್ಲೆ ನಿರ್ಮಾಣಕ್ಕೆ ಗುರಿ ಹೊಂದಲಾಗಿದೆ. ಡಿಜಿಟಲ್ ಮೀಡಿಯಾ ಮೂಲಕ ಪಕ್ಷದ ಕಾರ್ಯಕರ್ತರು, ಸದಸ್ಯರಿಂದ ಜನರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆ ತಿಳಿಸುವ ಪ್ರಯತ್ನ ನಡೆಯಲಾಗುವುದು ಎಂದು ಹೇಳಿದರು. ಪ್ರಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಸ್ಲಿಂ ಮಹಿಳೆಯರಿಗೆ ಕಂಟಕವಾಗಿದ್ದ ತ್ರಿವಳಿ ತಲಾಖ್ ರದ್ದತಿ, ಸಿಟಿಜನ್ ಅಮೆಂಡ್‌ಮೆಂಟ್ ಬಿಲ್ ತಿದ್ದುಪಡಿ, ಗಡಿ ಭಾಗದಲ್ಲಿ ನೆರೆ-ಹೊರೆ ದೇಶಗಳು ಒಡ್ಡುವ ಸವಾಲುಗಳನ್ನು ಸಮರ್ಪಕವಾಗಿ ತಡೆಯುವಲ್ಲಿ ಕೇಂದ್ರ ಸಫಲವಾಗಿದೆ. ಶತ್ರು ದೇಶಗಳಿಗೆ ತಕ್ಕ ಉತ್ತರವನ್ನು ಭಾರತ ನೀಡುತ್ತಿದೆ. ಈ ಮೂಲಕ ದೇಶದ ಶಕ್ತಿ ಏನೆಂಬುದನ್ನು ಪ್ರಧಾನಿ ಮೋದಿ ತೋರಿಸಿಕೊಟ್ಟಿದ್ದಾರೆ.
ಬಿ.ವೈ.ರಾಘವೇಂದ್ರ,
ಸಂಸದರ