Advertisement

ಇನ್ನು ಮುಂದೆ ಮನೆ ಬಾಗಿಲಲ್ಲೇ ರಕ್ತದಾನ!

11:22 AM Jan 30, 2020 | Naveen |

ಶಿವಮೊಗ್ಗ: ರಕ್ತದಾನ ಮಾಡಲು ಇಷ್ಟು ದಿನ ನಾವು ರಕ್ತನಿಧಿ ಕೇಂದ್ರಗಳಿಗೆ ಹೋಗಬೇಕಿತ್ತು. ಇನ್ಮುಂದೆ ನಮ್ಮ ಮನೆ ಬಾಗಿಲಲ್ಲೇ ರಕ್ತದಾನ ಮಾಡಬಹುದು. ಸರ್ಕಾರಿ ಬ್ಲಿಡ್‌ ಬ್ಯಾಂಕ್‌ ವತಿಯಿಂದ ಮೊಬೈಲ್‌ ರಕ್ತ ಸಂಗ್ರಹಣೆ ವಾಹನಗಳು ರಾಜ್ಯಾದ್ಯಂತ ಕಾರ್ಯಾರಂಭ ಮಾಡಿದ್ದು ಜನರಿಗೆ ಲಭ್ಯವಿದೆ.

Advertisement

ಖಾಸಗಿ ಹಾಗೂ ಸರ್ಕಾರಿ ರಕ್ತನಿಧಿ ಗಳಲ್ಲಿ ಬೇಡಿಕೆಯಷ್ಟು ರಕ್ತ ಸಂಗ್ರಹವಾಗುತ್ತಿಲ್ಲ. ಬಹಳಷ್ಟು ಮಂದಿಗೆ ರಕ್ತದಾನ ಮಾಡಬೇಕೆಂಬ ಆಸೆ ಇದ್ದರೂ ಸಮಯ, ಮಾಹಿತಿ ಕೊರತೆಯಿಂದ ಸಾಧ್ಯವಾಗುತ್ತಿಲ್ಲ. ಸಂಘ-ಸಂಸ್ಥೆಗಳು ಅನೇಕ ಕಾರ್ಯಕ್ರಮಗಳ ಮೂಲಕ ರಕ್ತ ಸಂಗ್ರಹ ಮಾಡುತ್ತಿವೆ. ಇಂತಹ ಕಾರ್ಯಕ್ರಮಗಳಿಗೆ ಜನರು ಭೇಟಿ ಕೊಡುವುದು ಅಷ್ಟಕಷ್ಟೇ. ಇದಕ್ಕೆ ಪರಿಹಾರ ರೂಪವಾಗಿ ಸಂಚಾರಿ ರಕ್ತ ಸಂಗ್ರಹಣೆ ಮತ್ತು ವಿತರಣಾ ವಾಹನಗಳು ದಾನಿಗಳ ಮನೆ ಬಾಗಿಲಿಗೇ ಬರಲಿವೆ. ತುರ್ತು ಪರಿಸ್ಥಿತಿಯಲ್ಲಿ ಅಗತ್ಯ ರಕ್ತ ಪೂರೈಸಲು ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿ (ಎನ್‌ ಎಚ್‌ಎಂ) ಆರೋಗ್ಯ ಇಲಾಖೆಯು ವಾಹನಗಳನ್ನು ಖರೀದಿಸಿದೆ. ರಾಜ್ಯದಲ್ಲಿ 42 ಸರ್ಕಾರಿ ಹಾಗೂ 60 ನ್ಯಾಕೋ ರಕ್ತನಿ ಧಿಗಳೂ ಸೇರಿದಂತೆ 200ಕ್ಕೂ ಹೆಚ್ಚು ರಕ್ತನಿಧಿ ಘಟಕ ಗಳು ಕಾರ್ಯ ನಿರ್ವಹಿಸುತ್ತಿವೆ.

ಹೇಗಿದೆ ವಾಹನ?: ಒಂದು ವಾಹನದ ವೆಚ್ಚ 42 ಲಕ್ಷ ರೂ. ಆಗಿದ್ದು, ಇದರಲ್ಲಿ ರಕ್ತದಾನಿಗಳಿಗೆ ರಕ್ತದಾನ ಮಾಡಲು ಹಾಗೂ ವಿಶ್ರಾಂತಿಗಾಗಿ ಎರಡು ಹಾಸಿಗೆ, ರಕ್ತ ಸಂಗ್ರಹಿಸಿಡಲು ರೆಫ್ರೀಜಿರೇಟರ್‌, ಕವರ್‌ ಸೀಲ್‌ ಮಾಡಲು ಯಂತ್ರ, ರಕ್ತ ಪರೀಕ್ಷೆ ಕಿಟ್‌ ಸೇರಿದಂತೆ ಅಗತ್ಯ ವೈದ್ಯ ಉಪಕರಣ ಹಾಗೂ ಹವಾನಿಯಂತ್ರಿತ ವ್ಯವಸ್ಥೆ ಹೊಂದಿದ್ದು, ಈ ಸಾಧನಗಳ ಕಾರ್ಯ ನಿರ್ವಹಣೆಗೆ ಜನರೇಟರ್‌ ಸಹ ಅಳವಡಿಸಲಾಗಿದೆ. ಒಂದು ವಾಹನದಲ್ಲಿ ಒಬ್ಬ ವೈದ್ಯ, ಒಬ್ಬ ಸಲಹೆಗಾರ, ಇಬ್ಬರು ಶುಶ್ರೂಷಕರು, ಇಬ್ಬರು ಗ್ರೂಪ್‌ ಡಿ ದರ್ಜೆಯ ಸಿಬ್ಬಂದಿ ಹಾಗೂ ಚಾಲಕರು ಕಾರ್ಯ ನಿರ್ವಹಿಸಲಿದ್ದಾರೆ. ಶಾಲಾ- ಕಾಲೇಜುಗಳು, ಸಭೆ, ಸಮಾರಂಭಗಳು ನಡೆಯುವ ಕಡೆ ತೆರಳಿ ರಕ್ತದಾನದ ಮಹತ್ವ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ.

ಸಂಪರ್ಕ ಹೇಗೆ?: ಜಾತ್ರೆ, ಹಬ್ಬ ಹರಿದಿನ, ಸರ್ಕಾರಿ ಕಾರ್ಯಕ್ರಮ ಅಷ್ಟೇ ಅಲ್ಲದೇ ಖಾಸಗಿ ಕಾರ್ಯಕ್ರಮ, ಬರ್ತ್‌ಡೇಗಳಲ್ಲೂ ಈ ವಾಹನವನ್ನು ಬಳಸಿಕೊಳ್ಳಬಹುದು. ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿರುವ ರಕ್ತನಿಧಿ  ಕೇಂದ್ರವನ್ನು ಸಂಪರ್ಕಿಸಿದರೆ ವಾಹನ ಲಭ್ಯವಾಗಲಿದೆ. ಭಾನುವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ಸೇವೆ ಬಳಸಿಕೊಳ್ಳಬಹುದು.

ಎಲ್ಲೆಲ್ಲೆ ಲಭ್ಯ?: ರಾಜ್ಯದ 30 ಜಿಲ್ಲೆಗಳಲ್ಲಿ ಈ ಸೇವೆ ಲಭ್ಯವಿದ್ದು, 10 ವಾಹನಗಳನ್ನು ಖರೀದಿಸಿ ಎರಡ್ಮೂರು ಜಿಲ್ಲೆಗಳಿಗೆ ಒಂದರಂತೆ ವಾಹನ ನೀಡಲಾಗಿದೆ. ಜಿಲ್ಲಾ ರಕ್ತನಿಧಿಕೇಂದ್ರ ಮೂಲಕ ವಾಹನದ ಸೇವೆ ಬಳಸಿಕೊಳ್ಳಬಹುದು. ಬೆಳಗಾವಿ ಜಿಲ್ಲೆಯ ವಾಹನ ಬಾಗಲಕೋಟೆಗೆ, ಬೀದರ್‌ ಜಿಲ್ಲೆ ವಾಹನ ಕಲಬುರ್ಗಿ, ಯಾದಗಿರಿಗೆ, ತುಮಕೂರು ಜಿಲ್ಲೆ ವಾಹನ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ, ದಾವಣಗೆರೆ ಜಿಲ್ಲೆ ವಾಹನ ಚಿತ್ರದುರ್ಗ ಮತ್ತು ಹಾವೇರಿ ಜಿಲ್ಲೆಗಳಿಗೆ, ಬಳ್ಳಾರಿ ಜಿಲ್ಲೆ ವಾಹನ ಕೊಪ್ಪಳ ಮತ್ತು ಗದಗ ಜಿಲ್ಲೆಗೆ, ಶಿವಮೊಗ್ಗ ಜಿಲ್ಲೆ ವಾಹನ ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗೆ, ವಿಜಯಪುರ ಜಿಲ್ಲೆ ವಾಹನ ರಾಯಚೂರು ಜಿಲ್ಲೆಗೂ ಸೇವೆ ನೀಡಲಿದೆ.

Advertisement

ರಕ್ತ ಸಂಗ್ರಹಣೆ ಹಾಗೂ ರಕ್ತ ಸಾಗಣೆಗೆ ಸರ್ಕಾರದಿಂದ ವಿಶೇಷ ಬಸ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಮದುವೆ, ಗೃಹಪ್ರವೇಶ ಯಾವುದೇ ಸಮಾರಂಭಗಳಲ್ಲಿ ಈ ವಾಹನವನ್ನು ಸಾರ್ವಜನಿಕರು ಬಳಸಿಕೊಳ್ಳಬಹುದು. ಸಂಪೂರ್ಣವಾಗಿ ಉಚಿತವಿರುತ್ತದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದು ರಕ್ತದಾನಕ್ಕೆ ಮುಂದಾಗಬೇಕು.
ಡಾ| ರಘುನಂದನ್‌,
ಜಿಲ್ಲಾ ಸರ್ಜನ್‌

„ಶರತ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next