Advertisement

ಈಶ್ವರಪ್ಪ ನಡೆ ಆದರ್ಶಪ್ರಾಯ

01:20 PM Feb 17, 2020 | Naveen |

ಶಿವಮೊಗ್ಗ: ಗ್ರಾಮೀಣಾಭಿವೃದ್ಧಿ ಮತ್ತು ಕ್ರೀಡಾ ಇಲಾಖೆ ಸಚಿವ ಕೆ.ಎಸ್‌. ಈಶ್ವರಪ್ಪ ಅವರಿಗೆ 70 ವರ್ಷ ತುಂಬಿದ ಸಂಭ್ರಮ. ಈ ಹಿನ್ನೆಲೆಯಲ್ಲಿ ಕಳೆದೆರೆಡು ದಿನಗಳಿಂದ ಸಚಿವ ಈಶ್ವರಪ್ಪ ಅವರ ನಿವಾಸದಲ್ಲಿ ವಿವಿಧ ಹೋಮ-ಹವನಗಳನ್ನ ನಡೆಸಲಾಗಿದ್ದು, ಭಾನುವಾರ ಭೀಮರಥ ಶಾಂತಿ ಪೂಜೆ ನೆರವೇರಿಸಲಾಯಿತು.

Advertisement

ಇಷ್ಟೇ ಅಲ್ಲದೆ, ಧಾರ್ಮಿಕ ಸಮಾರಂಭದಲ್ಲಿ ಸ್ವಾಮೀಜಿಗಳಿಂದ ಈಶ್ವರಪ್ಪರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆಯ ಮಾತುಗಳ ಸುರಿಮಳೆ ಸುರಿಸಲಾಯಿತು. ಈ ವೇಳೆ ಮಾತನಾಡಿದ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಸಂತೋಷ್‌ ಜೀ, ಈಶ್ವರಪ್ಪನವರು ಆದರ್ಶಪ್ರಾಯವಾಗಿದ್ದು, ಅವರ ನಡೆ-ನುಡಿ ಅನುಸರಿಸೋಣ. ಆದರೆ, ಅವರ ನುಡಿ ಅನುಸರಿಸಬೇಕಾದರೆ, ಸ್ವಲ್ಪ ಎಚ್ಚರ ವಹಿಸೋಣ ಎಂದು ನಗಹನಿ ಬೀರಿದರು. ಅದರಲ್ಲೂ, ರಾಜಕೀಯ ಮತ್ತು ಸ್ವಂತ ಜೀವನದಲ್ಲಿ ಬದಲಾವಣೆ ಸಾಮಾನ್ಯವಾಗಿರುತ್ತದೆ. ಆದರೆ, ಈಶ್ವರಪ್ಪನವರು ಬದಲಾಗೋದೇ ಇಲ್ಲ. ಸ್ವಂತದ ಸ್ವಭಾವದಲ್ಲಿಯೂ ಮತ್ತು ರಾಜಕೀಯ ಜೀವನದಲ್ಲಿಯೂ ಅವರು ನಂಬಿಕೊಂಡ ವಿಚಾರ ಮತ್ತು ಸಂಘಟನೆ ವಿಚಾರದಲ್ಲಿಯೂ ಅವರು ಬದಲಾಗಿಲ್ಲ ಎಂದು ಈಶ್ವರಪ್ಪನವರ ಕುರಿತಂತೆ, ಹಾಸ್ಯ ಚಟಾಕಿ ಹಾರಿಸಿದರು.

ಗೌರಿಗದ್ದೆ ವಿನಯ್‌ ಗುರೂಜಿ ಮಾತನಾಡಿ, ಎಲ್ಲ ರಾಜಕಾರಣಿಗಳಲ್ಲೂ ತನ್ನ ಮಕ್ಕಳನ್ನು ಬೆಳೆಸಬೇಕೆಂಬ ಸ್ವಾರ್ಥ ಇದೆ. ಎಲ್ಲರಲ್ಲೂ ಸ್ವಾರ್ಥ ಇರುತ್ತದೆ. ಸ್ವಾರ್ಥ ಬಿಟ್ಟು ರಾಜಕಾರಣ ಮಾಡುವುದು ಮಹಾನ್‌ ವ್ಯಕ್ತಿಗಳು ಮಾತ್ರ. ಈಶ್ವರಪ್ಪನವರು ಮನಸ್ಸು ಮಾಡಿದ್ದರೆ ಅವರ ಮಗನಿಗೆ ಎಂಎಲ್‌ಎ ಚುನಾವಣೆಗೆ ಟಿಕೆಟ್‌ ಕೊಡಿಸಬಹುದಿತ್ತು. ಆದರೆ ಅವರ ಎರಡು ಗುಣ ಅವರಿಗೆ ಬೆಲೆ ಕೊಡುತ್ತದೆ. ನಾಲ್ಕೈದು ತಿಂಗಳ ಹಿಂದೆ ಒಂದು ಮಾತು ನನ್ನ ಬಳಿ ಹೇಳಿದ್ದರು. ನಾನು ತಂದೆಯಾಗುವ ಮೊದಲು ನಾನು ಆರ್‌ ಎಸ್‌ಎಸ್‌ನಲ್ಲಿ ಕಾರ್ಯಕರ್ತನಾಗಿದ್ದೆ. ಅಲ್ಲಿ ಧರ್ಮ ಏನು ಎಂದು ಹೇಳಿಕೊಟ್ಟಿದ್ದಾರೆ. ನಮ್ಮ ಹಿರಿಯರೆಲ್ಲ ಏನು ತೀರ್ಮಾನ ಮಾಡುತ್ತಾರೋ ಅದೇ ನನ್ನ ತೀರ್ಮಾನ ಎಂದು ಹೇಳಿದ್ದರು. ಅದೇ ಅವರ ದೊಡ್ಡಗುಣ ಎಂದು ತಿಳಿಸಿದರು. ಭಾರತೀಯ ನಾರಿಯರು ಇರುವವರೆಗೂ ಭಾರತಕ್ಕೆ ತೊಂದರೆಯಿಲ್ಲ. ಅವರೆಲ್ಲರೂ ಮಾಡುತ್ತಿರುವ ಪೂಜೆ, ಪುನಸ್ಕಾರಗಳಿಂದ ಧರ್ಮ ಉಳಿದಿದೆ. ಪರಿಸರವನ್ನು ಶುಭ್ರವಾಗಿಡುವುದು ಪ್ರತಿಯೊಬ್ಬರ ಕರ್ತವ್ಯ. ನಮ್ಮ ಮನೆ ಶುಭ್ರವಾಗಿದೆ. ನಮ್ಮ ರಸ್ತೆ ಇಲ್ಲ ಎಂದರು.

ಆರ್‌ಎಸ್‌ಎಸ್‌ನ ಹಿರಿಯ ಕ್ಷೇತ್ರ ಪ್ರಚಾರಕ ಸು. ರಾಮಣ್ಣ ಮಾತನಾಡಿ, ಭೀಮರಥ ಶಾಂತಿ ಮೂಢನಂಬಿಕೆಯಲ್ಲ. ಅದು ಆಚರಣೆಯ ನಂಬಿಕೆ. ಆಚರಣೆಗಳ ಬಗ್ಗೆ ವ್ಯಕ್ತವಾಗುವ ಅಪಸ್ವರ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಭೀಮರಥಕ್ಕೆ ವೈಜ್ಞಾನಿಕ ಮನೋಧರ್ಮ ಇದೆ ಎಂದರು.

ಚಿತ್ರದುರ್ಗ ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಮಾತನಾಡಿ, ಈಶ್ವರಪ್ಪ ಜಾತಿ, ಧರ್ಮಕ್ಕೆ ಸೀಮಿತರಲ್ಲ. ಅವರ ಮಾತು ಕಠೊರ ಎನಿಸಿದರೂ ಅವು ವಾಸ್ತವಕ್ಕೆ ಸಮೀಪ ಎಂದರು.

Advertisement

ಪೇಜಾವರ ಮಠಾ ಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಚಿತ್ರದುರ್ಗ ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಬಸವಕೇಂದ್ರದ ಶ್ರೀ ಬಸವಮರುಳಸಿದ್ದ ಸ್ವಾಮೀಜಿ, ಗೌರಿಗದ್ದೆ ದತ್ತಾಶ್ರಮದ ಅವದೂರ ವಿನಯ್‌ ಗುರೂಜಿ ಸಾನ್ನಿಧ್ಯ ವಹಿಸಿದ್ದರು.

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವ ಸಿ.ಟಿ. ರವಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌, ವಿಧಾನ ಪರಿಷತ್‌ ಮಾಜಿ ಸಭಾಪತಿ ಡಿ.ಎಚ್‌. ಶಂಕರಮೂರ್ತಿ, ಸಂಸದೆ ಶೋಭಾ ಕರಂದ್ಲಾಜೆ, ವಿಧಾನ ಪರಿಷತ್‌ ಸದಸ್ಯ ಆಯನೂರು ಮಂಜುನಾಥ್‌ ಇತರರು ಭಾಗವಹಿಸಿ ಈಶ್ವರಪ್ಪ-ಜಯಲಕ್ಷ್ಮೀ ದಂಪತಿಗೆ ಶುಭ ಹಾರೈಸಿದರು.

Advertisement

Udayavani is now on Telegram. Click here to join our channel and stay updated with the latest news.

Next