ಶರತ್ ಭದ್ರಾವತಿ
ಶಿವಮೊಗ್ಗ: ಕಲಬುರಗಿ ಹಾಗೂ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಏಕಕಾಲಕ್ಕೆ ಯೋಜನೆ ರೂಪಿಸಲಾಗಿತ್ತು. ಕಲಬುರಗಿಯಲ್ಲಿ ಈಗಾಗಲೇ ವಿಮಾನ ಹಾರಾಟ ಶುರು ಮಾಡಿದ್ದರೆ, ಶಿವಮೊಗ್ಗದಲ್ಲಿ ಮಾತ್ರ ವಿಮಾನ ನಿಲ್ದಾಣ ಪಾಳು ಬಿದ್ದಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿದೆ.
ಕಲಬುರಗಿಯಲ್ಲಿ ವಿಮಾನ ಹಾರುವುದನ್ನು ನೋಡಿ ಅಲ್ಲಿನ ಜನ ಸಂತಸಗೊಂಡಿದ್ದರೆ, ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣಕ್ಕೆಂದು ಜಾಗ ಬಿಟ್ಟು ಕೊಟ್ಟ ರೈತರು ಅತ್ತ ವಿಮಾನವನ್ನೂ, ಇತ್ತ ತುತ್ತು ಅನ್ನವೂ ಕಾಣದೇ ಅನಾಥ ಭಾವ ಅನುಭವಿಸುತ್ತಿದ್ದಾರೆ. ಸೋಗಾನೆ ಗ್ರಾಪಂ ವ್ಯಾಪ್ತಿಯ ವಿನಾಯಕ ನಗರ ಬಳಿಯ ವಿಮಾನ ನಿಲ್ದಾಣ ಮೈದಾನ ನೋಡಿದರೆ ಇಲ್ಲಿ ಕಾಮಗಾರಿ ನಡೆದಿತ್ತೇ ಎಂಬ ಅನುಮಾನ ಮೂಡುತ್ತದೆ.
ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳುತ್ತಲೇ ತಮ್ಮ ಅವಧಿಯಲ್ಲಿ ಚಾಲನೆಗೊಂಡು ಅಪೂರ್ಣಗೊಂಡ ವಿಮಾನ ನಿಲ್ದಾಣ ಕಾಮಗಾರಿಗೆ 39 ಕೋಟಿ ಬಿಡುಗಡೆ ಮಾಡುವ ಮೂಲಕ ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸಲು ಸೂಚನೆ ಕೊಟ್ಟಿದ್ದು, ಇನ್ನಾದರೂ ವಿಮಾನ ಹಾರಬಹುದೇ ಎಂಬ ನಿರೀಕ್ಷೆಯಲ್ಲಿ ಇಲ್ಲಿಯ ಜನರಿದ್ದಾರೆ. ರಾಜಧಾನಿಯಲ್ಲಿ ಕೇಂದ್ರೀಕೃತವಾದ ಐಟಿ-ಬಿಟಿ ಮತ್ತು ಕೈಗಾರಿಕೆಗಳನ್ನು ಶಿವಮೊಗ್ಗ ಮತ್ತು ಕಲಬುರಗಿಗೂ ತರುವ ಉದ್ದೇಶದಿಂದ ವಿಮಾನಯಾನ ಒದಗಿಸಲು ಅಂದು ಸಿಎಂ ಆಗಿದ್ದ ಯಡಿಯೂರಪ್ಪ ಯೋಜನೆ ರೂಪಿಸಿದ್ದರು. “ಮೆಥಾಸ್ ಇನಾ#† ಕಂಪನಿ’ಯು ಎರಡೂ ನಿಲ್ದಾಣಗಳ ನಿರ್ಮಾಣ ಗುತ್ತಿಗೆ ಪಡೆದಿತ್ತು. ನಿರ್ಮಾಣ, ನಿರ್ವಹಣೆ ಮತ್ತು ಹಸ್ತಾಂತರ ಪದ್ಧತಿಯಲ್ಲಿ 110 ಕೋಟಿ ರೂ. ವೆಚ್ಚದಲ್ಲಿ ಶಿವಮೊಗ್ಗ ನಿಲ್ದಾಣ ಯೋಜನೆಗೆ 2008ನೇ ಏ.2ರಂದು ಒಪ್ಪಂದ ಮಾಡಿಕೊಳ್ಳಲಾಗಿತ್ತು.
ಅದರೆ, ಸತ್ಯಂ ಕಂಪ್ಯೂಟರ್ಸ್‌ನ ದಿವಾಳಿಯಿಂದ ಅದರ ಅಂಗ ಸಂಸ್ಥೆಯಾದ ಮೆಥಾಸ್‌ಗೆ ಕಾಮಗಾರಿ ಆರಂಭಿಸಲು ಸಾಧ್ಯವಾಗಲೇ ಇಲ್ಲ. ಆ ಬಳಿಕ ಸರಕಾರ ರಿಜನಲ್ ಏರ್‌ಪೋರ್ಟ್ ಹೋಲ್ಡಿಂಗ್ಸ್ ಇಂಟರ್‌ನ್ಯಾಶನಲ್ ಲಿಮಿಟೆಡ್(ರಾಹಿ) ಗೆ ಎರಡೂ ನಿಲ್ದಾಣಗಳನ್ನು ನಿರ್ಮಿಸುವ ಜವಾಬ್ದಾರಿ ನೀಡಿತು. ಹೊಸ ಒಪ್ಪಂದವನ್ನು 2012ನೇ ಡಿಸೆಂಬರ್ ವರೆಗೆ ವಿಸ್ತರಿಸಿ ನಿರ್ಮಾಣ ವೆಚ್ಚವನ್ನು 240 ಕೋಟಿ ರೂ.ಗಳಿಗೆ ಏರಿಸಲಾಯಿತು. ಒಪ್ಪಂದದ ಪ್ರಕಾರ 2013 ಜನವರಿಗೆ ಎಟಿಆರ್-72 ಮಾದರಿಯ ವಿಮಾನಗಳ ಸಂಚಾರಕ್ಕೆ ನಿಲ್ದಾಣವನ್ನು ಮುಕ್ತಗೊಳಿಸಬೇಕಿತ್ತು. ಕೇವಲ ಮೂರು ತಿಂಗಳ ಅಂತರದಲ್ಲಿ 1000 ಮೀ.(ಒಟ್ಟು 1700 ಮೀ.) ರನ್ ವೇಯನ್ನು ಸಮತಟ್ಟುಗೊಳಿಸಿ ಜಲ್ಲಿ ಮೆಂಟ್ಲಿಂಗ್ ಮಾಡಿತ್ತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಕಲಬುರಗಿಗೂ ಮೊದಲೇ ಶಿವಮೊಗ್ಗದಲ್ಲಿ ಪ್ರಾಯೋಗಿಕ ಹಾರಾಟ ನಡೆದು ಪ್ರಯಾಣಿಕ ವಿಮಾನಗಳ ಹಾರಾಟ ಆರಂಭವಾಗಬೇಕಿತ್ತು.
ಆದರೆ ಕಾಮಗಾರಿ ವೀಕ್ಷಣೆಗೆ ಬಂದ ಕೇಂದ್ರ ವಿಮಾನ ನಿಲ್ದಾಣ ಪ್ರಾ ಧಿಕಾರ ಅಧಿ ಕಾರಿಗಳು ವಿಮಾನಗಳು ಇಳಿಯಲು ಮತ್ತು ಮೇಲೇರಲು ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಚಿಮಣಿಗಳು, ಮೊಬೈಲ್ ಟವರ್‌ಗಳು, ಬಹುಮಹಡಿ ಕಟ್ಟಡಗಳ ತೆರವಿಗೆ ಸೂಚನೆ ನೀಡಿದರು. ಇದು ಉದ್ಯಮಿಗಳು ಮತ್ತು ಜಿಲ್ಲಾಡಳಿತದ ನಡುವೆ ಜಟಾಪಟಿ ತಂದಿಟ್ಟಿತು. ಇದೇ ಸಮಯದಲ್ಲಿ ರಾಹಿ ಸಂಸ್ಥೆಯ ಪಾಲುದಾರರ ನಡುವೆ ಒಡಕು ಉಂಟಾಗಿ ಎರಡೂ ನಿಲ್ದಾಣಗಳ ಕಾಮಗಾರಿ ನನೆಗುದಿಗೆ ಬಿದ್ದಿತ್ತು.
ಈಗ ಸಿಎಂ ಯಡಿಯೂರಪ್ಪ ಅನುದಾನ ಬಿಡುಗಡೆ ಮಾಡಿದ್ದು, ಸಂಸದ ಬಿ.ವೈ.ರಾಘವೇಂದ್ರ ಹಾಗೂ ಜಿಲ್ಲೆಯ ಶಾಸಕರು ಕಾಮಗಾರಿ ಮುಗಿಸಲು ಕಾಳಜಿ ವಹಿಸಿದ್ದಾರೆ.ಗೆಸ್ಟ್‌ಹೌಸ್ ಹಾಳಾಗಿದೆ
ವಿಮಾನ ನಿಲ್ದಾಣದಲ್ಲಿ ನಿರ್ಮಿಸಿರುವ ಗೆಸ್ಟ್ ಹೌಸ್ ಸಂಪೂರ್ಣ ಹಾಳಾಗಿದ್ದು ಯಾವುದಕ್ಕೂ ರಕ್ಷಣೆ ಇಲ್ಲದಂತಾಗಿದೆ.
ಕಟ್ಟಡದಲ್ಲಿನ ಬಾಗಿಲುಗಳನ್ನು ಒಡೆದು ಹಾಕಲಾಗಿದ್ದು, ಬೀರುಗಳಲ್ಲಿದ್ದ ದಾಖಲೆಗಳನ್ನು ಚೆಲ್ಲಾಪಿಲ್ಲಿಗೊಳಿಸಲಾಗಿದೆ. ಬಿಯರ್, ವಿಸ್ಕಿ ಸ್ಯಾಚೆಗಳು ರಾರಾಜಿಸುತ್ತವೆ. ಇನ್ನು ಕಾಮಗಾರಿ ತಡವಾದ ಕಾರಣ ಹಲವು ರೈತರು ಮೆಕ್ಕೆಜೋಳ ಬಿತ್ತನೆ ಮಾಡಿದ್ದಾರೆ. ರನ್‌ವೇ ದನ, ಎಮ್ಮೆ, ಕುರಿ ಮೇಯಿಸುವ ತಾಣವಾಗಿ ಮಾರ್ಪಟ್ಟಿದೆ. ಸೆಕ್ಯೂರಿಟಿ ಗಾರ್ಡ್ ಇರುವವರೆಗೂ ಯಾವುದೂ ಹಾಳಾಗಿರಲಿಲ್ಲ. ನಂತರ ಎಲ್ಲವೂ ಹಾಳಾಗಿದೆ ಎನ್ನುತ್ತಾರೆ ಗ್ರಾಮಸ್ಥರು.
ಒಟ್ಟು ನಾಲ್ಕು ಪ್ರತಿಷ್ಠಿತ ಸಂಸ್ಥೆಗಳು ವಿಮಾನ ನಿಲ್ದಾಣ ಕಾಮಗಾರಿ ಟೆಂಡರ್ ಪಡೆಯಲು ಮುಂದೆ ಬಂದಿದ್ದು, ಸದ್ಯದಲ್ಲೇ ಕಾಮಗಾರಿ ಆರಂಭವಾಗಬಹುದು. ಈ ಹಿಂದೆ ಟೆಂಡರ್‌ದಾರರು ಕಟ್ಟಡ ನಿರ್ಮಿಸಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿದ್ದರ ಬಗ್ಗೆ ಮಾಹಿತಿ ಇಲ್ಲ.
ಎಸ್. ರುದ್ರೇಗೌಡ,
ವಿಧಾನಪರಿಷತ್ ಸದಸ್ಯ