ಶಿವಮೊಗ್ಗ: ಬೇಸಿಗೆಕಾಲದಲ್ಲಿ ಪ್ರಾಣಿ ಪಕ್ಷಿಗಳು ನೀರಿಲ್ಲದೆ ಕಷ್ಟಪಡಬಾರದು ಎಂದು ಇಲ್ಲಿನ ರೈತರೊಬ್ಬರು ಬತ್ತಿದ ನದಿಗೆ ನೀರು ಹರಿಸಿದ ಅಪರೂಪದ ಘಟನೆ ನಡೆದಿದೆ.
ಮಲೆನಾಡನಲ್ಲಿ ಈ ಬಾರಿ ಮಳೆಯ ಕೊರತೆಯಿಂದಾಗಿ ತೀವ್ರ ಬರ ಆವರಿಸಿದೆ. ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ನೀರಿಲ್ಲದೆ ತತ್ತರಿಸಿರುವ ಕಾಡು ಪ್ರಾಣಿ-ಪಕ್ಷಿಗಳ ದಾಹ ತಣಿಸಲು ನದಿಗೆ ರೈತನೊಬ್ಬ ನೀರು ಬಿಟ್ಟಿದ್ದಾರೆ.
ಹೊಸನಗರ ತಾಲೂಕಿನ ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೂಡೂರು ಗ್ರಾಮದಲ್ಲಿ ಪಾಪಣ್ಣ ಎಂದೇ ಹೆಸರಾಗಿರುವ ರೈತ ಮಂಜುನಾಥ ಭಟ್ ಎಂಬ ರೈತರೊಬ್ಬರು ತಮ್ಮ ಕೊಳವೆ ಬಾವಿಯ ನೀರನ್ನು ಬತ್ತಿರುವ ನದಿಗೆ ಹರಿಸುತ್ತಿದ್ದಾರೆ. ತಮ್ಮ ಏಳೂವರೆ ಎಕರೆ ಜಮೀನಿನ ಪಕ್ಕದಲ್ಲಿರುವ ಕುಮುದ್ವತಿ ನದಿಗೆ ನೀರು ಬಿಡುತ್ತಿದ್ದಾರೆ.
ಕೊಳವೆ ಬಾವಿಯಿಂದ ನದಿ ದಂಡೆಯವರೆಗೆ ಪೈಪ್ ಅಳವಡಿಸಿ, ನಿತ್ಯವೂ ನದಿಗೆ ನೀರು ಹರಿಸುತ್ತಿದ್ದಾರೆ. ಒಂದೊಮ್ಮೆ ವಿದ್ಯುತ್ ಸಂಪರ್ಕ ಇಲ್ಲದಿದ್ದರೆ ಡಿಸೆಲ್ ಎಂಜಿನ್ ಮೋಟರ್ ಮೂಲಕ ನೀರು ಹರಿಸುತ್ತಿರುವ ಮಂಜುನಾಥ್ ಭಟ್ ವನ್ಯಜೀವಿಗಳ ಪಾಲಿಗೆ ಕರುಣಾಮಯಿಯಾಗಿದ್ದಾರೆ.
ಕೆಲವು ವರ್ಷಗಳ ಹಿಂದೆ ಕುಮುದ್ವತಿ ನದಿ ಬೇಸಿಗೆಯಲ್ಲೂ ತುಂಬಿರುತ್ತಿತ್ತು. ವನ್ಯಜೀವಿಗಳು ಈ ನದಿಯ ನೀರನ್ನೇ ಅವಲಂಬಿಸಿವೆ. ನದಿ ಬತ್ತಿದರೆ ಪ್ರಾಣಿಗಳಿಗೆ ದಿಕ್ಕೇ ತೋಚದಂತಾಗುತ್ತದೆ ಹಾಗಾಗಿ ನೀರು ಬಿಡುತ್ತಿದ್ದೇನೆ ಎನ್ನುತ್ತಿದ್ದಾರೆ ಮಂಜುನಾಥ್ ಭಟ್.