Advertisement

ಶೀಂಬ್ರ ಸೇತುವೆ ಭೂಸ್ವಾಧೀನಕ್ಕೆ 3 ಕೋ.ರೂ. ಅನುದಾನ ಘೋಷಣೆ

07:34 PM Feb 02, 2020 | Sriram |

ಉಡುಪಿ: ಸ್ವರ್ಣಾ ನದಿಗೆ ಅಡ್ಡವಾಗಿ ಕೊಳಲಗಿರಿ ಪರಾರಿ- ಪೆರಂಪಳ್ಳಿ ಶೀಂಬ್ರ ಸೇತುವೆಯ ಭೂಸ್ವಾಧೀನ ಪ್ರಕ್ರಿಯೆಗೆ ಲೋಕೋಪಯೋಗಿ ಇಲಾಖೆ ಯಿಂದ 3 ಕೋ.ರೂ. ಅನುದಾನ ಘೋಷಣೆ ಯಾಗಿದೆ.

Advertisement

ಪ್ರತಿಭಟನೆ ಸಿದ್ಧತೆ!
ಕೊಳಲಗಿರಿ ಪರಾರಿ- ಪೆರಂಪಳ್ಳಿ ಶಿಂಬ್ರ ಸೇತುವೆ ನಿರ್ಮಾಣಗೊಂಡು ಎರಡೂವರೆ ವರ್ಷಗಳು ಕಳೆದರೂ ಭೂಸ್ವಾಧೀನಕ್ಕೆ ಸಂಬಂಧಿಸಿದ ಸಮಸ್ಯೆಯಿಂದಾಗಿ ಸೇತುವೆ ಬಳಕೆ ಮುಕ್ತವಾಗದ ಹಿನ್ನೆಲೆಗೆ ಸ್ಥಳೀಯರು ಪ್ರತಿಭಟನೆಗೆ ಸಿದ್ಧರಾಗಿದ್ದರು. ಈ ಕುರಿತು ಉದಯವಾಣಿ ಪತ್ರಿಕೆ ವರದಿಯನ್ನು ಪ್ರಕಟಿಸಿತ್ತು.

ಸೇತುವೆ ಸ್ಥಳ ಪರಿಶೀಲನೆ
ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ಗುರುಪ್ರಸಾದ್‌ ಅವರು ಫೆ.1ರಂದು ಉಡುಪಿಯ ಕೊಳಲಗಿರಿಗೆ ಸಂಪರ್ಕ ಕಲ್ಪಿಸುವ ಮಣಿಪಾಲದ ಶೀಂಬ್ರ -ಪರಾರಿ ರಸ್ತೆಯ ಸೇತುವೆ ಸ್ಥಳಕ್ಕೆ ಆಗಮಿಸಿ ರಸ್ತೆಯ ಪರಿಸ್ಥಿತಿ ಅವಲೋಕಿಸಿ 3 ಕೋ.ರೂ. ಅನುದಾನವನ್ನು ಘೋಷಣೆ ಮಾಡಿದ್ದು, ಕೂಡಲೇ ಕಾಮಗಾರಿ ಆರಂಭಿಸುವಂತೆ ಸೂಚಿಸಿದ್ದಾರೆ.

ಪೇತ್ರಿ, ಕೊಕ್ಕರ್ಣೆಗೆ ಹತ್ತಿರ
ಸೇತುವೆ ಕಾಮಗಾರಿ ಪೂರ್ಣಗೊಂಡರೆ ಕೊಳಲಗಿರಿ, ಹಾವಂಜೆ, ಪೇತ್ರಿ, ಕೊಕ್ಕರ್ಣೆ, ಮಂದಾರ್ತಿ ಸೇರಿದಂತೆ ಇತರ ಸುತ್ತಮುತ್ತಲಿನ ಜನರಿಗೆ ಉಪಯೋಗವಾಗಲಿದೆ. ರಾ.ಹೆ. 66ರನ್ನು ಸಂಪರ್ಕಿಸದೆ ನೇರವಾಗಿ ಮಣಿಪಾಲವನ್ನು ತಲುಪಬಹುದು. ಹೊಸ ಸೇತುವೆ 202.96 ಮೀ. ಉದ್ದ, ತಲಾ 25.37 ಮೀ. 8 ಉದ್ದದ ಅಂಕಣಗಳನ್ನು ಹೊಂದಿದೆ.

3 ಎಕ್ರೆ ಭೂಸ್ವಾಧೀನ!
2018ರಲ್ಲಿ ಸೇತುವೆ ನಿರ್ಮಾಣ ಪೂರ್ಣಗೊಂಡರೂ ಸಂಪರ್ಕ ರಸ್ತೆ ಭೂಸ್ವಾಧೀನವಾಗದ ಹಿನ್ನೆಲೆಯಲ್ಲಿ ವಾಹನ ಸಂಚರಿಸಲು ಅವಕಾಶವಿರಲಿಲ್ಲ. ಕೂಡು ರಸ್ತೆಗೆ ಶೀಂಬ್ರದಲ್ಲಿ 85 ಸೆಂಟ್ಸ್‌ ಹಾಗೂ ಕೊಳಲಗಿರಿಯಲ್ಲಿ 2.23 ಎಕರೆ ಭೂ ಸ್ವಾಧೀನಕ್ಕಾಗಿ ಇಲಾಖೆಯಿಂದ 25 ಲಕ್ಷ ರೂ. ಇಡಲಾಗಿತ್ತು. ಆದರೆ ಮಾರುಕಟ್ಟೆ ಬೆಲೆ ಅಂದಾಜಿಸಿದಾಗ 3 ಕೋ. ರೂ. ನೀಡಬೇಕಾಗುತ್ತದೆ.

Advertisement

ಅನುದಾನ ಬಿಡುಗಡೆಯಾಗಲಿ!
ಇಲಾಖೆ ಮಾಡಿರುವ ಘೋಷಣೆ ಕೇವಲ ಘೋಷಣೆಗೆ ಸೀಮಿತವಾಗದಿರಲಿ. ಶೀಘ್ರದಲ್ಲಿ ಕಾಮಗಾರಿ ಪ್ರಾರಂಭಿಸಲು ಅಗತ್ಯವಿರುವ ಭೂಸ್ವಾಧೀನ ಹಾಗೂ ಕೂಡು ರಸ್ತೆಗೆ ಅಗತ್ಯವಿರುವ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಆದೇಶವಾಗಿದೆ
ಇತ್ತೀಚಿಗೆ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಅವರ ಉಡುಪಿ ಜಿಲ್ಲೆ ಪ್ರವಾಸ ಮಾಡಿದ ಸಂದರ್ಭ ಪರಾರಿ- ಪೆರಂಪಳ್ಳಿ ಶೀಂಬ್ರ ಸೇತುವೆ ಭೂಸ್ವಾಧಿನಕ್ಕೆ ಅಗತ್ಯವಿರುವ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿತ್ತು. ಇದೀಗ ಸಚಿವರ ಆದೇಶದ ಮೇರೆಗೆ ಕಾರ್ಯದರ್ಶಿಯವರು ಸ್ಥಳ ಪರಿಶೀಲನೆ ನಡೆಸಿ ಅನುದಾನ ಘೋಷಣೆ ಮಾಡಿ ಕಾಮಗಾರಿ ಮಾಡುವಂತೆ ಆದೇಶ ಮಾಡಿದ್ದಾರೆ.
-ಕೆ. ರಘುಪತಿ ಭಟ್‌,
ಶಾಸಕ ಉಡುಪಿ

ಮಳೆಗಾಲಕ್ಕೂ ಮುನ್ನ ಆಗಲಿ
ಮಣಿಪಾಲ ಹತ್ತಿರ ಈ ಸೇತುವೆ ನಿರ್ಮಾಣವಾದರೆ ಕುಂದಾಪುರದ ಜನತೆಗೆ ಮಣಿಪಾಲವು 15 ಕಿ.ಮೀ. ಹತ್ತಿರವಾಗಲಿದೆ. ಬ್ರಹ್ಮಾವರ -ಪೇತ್ರಿ ಕೊಳಲಗಿರಿ- ಪರಾರಿ- ಪೆರಂಪಳ್ಳಿಯಾಗಿ ಮಣಿಪಾಲಕ್ಕೆ ಹೋಗ ಬಹುದು. ಅನುದಾನವನ್ನು ಶೀಘ್ರದಲ್ಲಿ ಬಿಡುಗಡೆ ಮಾಡಿ ಮಳೆಗಾಲದ ಒಳಗೆ ಕಾಮಗಾರಿ ಮುಗಿಸಬೇಕು.
-ಹಾವಂಜೆ ಶಂಕರ್‌,
ಸ್ಥಳೀಯರು

 

Advertisement

Udayavani is now on Telegram. Click here to join our channel and stay updated with the latest news.

Next