Advertisement

ರಮ್ಯಾರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಶಿಲ್ಪಾ ಗಣೇಶ್‌! 

09:37 AM Aug 08, 2017 | |

ಬೆಂಗಳೂರು : ಕಾಂಗ್ರೆಸ್‌ ಪಕ್ಷದ ಸಾಮಾಜಿಕ ತಾಣಗಳ ಮುಖ್ಯಸ್ಥೆ, ನಟಿ ರಮ್ಯಾ ವಿರುದ್ಧ ಬಿಜೆಪಿ ರಾಜ್ಯ ಉಪಾಧ್ಯಕ್ಷೆ  ಶಿಲ್ಪಾ ಗಣೇಶ್‌ ಅವರು ಕಿಡಿ ಕಾರಿದ್ದಾರೆ. ರಮ್ಯಾರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಈ ಪೋಸ್ಟ್‌ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

Advertisement

ರಮ್ಯಾ ಪೋಸ್ಟ್‌ ಮಾಡಿದ್ದೇನು ? 
ಹಲವು ಬಾರಿ ತಮ್ಮ ಟ್ವೀಟ್‌ ಮತ್ತು ಫೇಸ್‌ಬುಕ್‌ ಪೋಸ್ಟ್‌ಗಳಲ್ಲಿ  ವಿವಾದಾತ್ಮಕ ವಿಚಾರಗಳಿಂದ ಸುದ್ದಿಯಾಗಿದ್ದ ರಮ್ಯಾ ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರ ಗುಜರಾತ್‌ನ ಪ್ರವಾಹ ಪರಿಸ್ಥಿತಿಯ ವೈಮಾನಿಕ ಸಮೀಕ್ಷೆಯನ್ನು ಲೇವಡಿ ಮಾಡಿ  ಪೋಸ್ಟ್‌  ಮಾಡಿದ್ದರು.

ಗುಜರಾತ್‌ನಲ್ಲಿ ಪ್ರವಾಹ ಸಂತ್ರಸ್ತ್ರರೊಂದಿಗಿದ್ದ ರಾಹುಲ್‌ ಗಾಂಧಿ ಅವರ ಫೋಟೋಗೆ ಜನರ ನಾಯಕ ಎಂದು ಬರೆದು ಮೋದಿ ಅವರು ವೈಮಾನಿಕ ಸಮೀಕ್ಷೆ ನಡೆಸುತ್ತಿದ್ದ ಫೋಟೋಗೆ ಸೀಟ್‌ ಬೆಲ್ಟ್ ನಾಯಕ ಎಂದು ಬರೆದಿದ್ದರು. ಈ ಬಗ್ಗೆ ಹಲವರು ರಮ್ಯಾ ವಿರುದ್ಧ ಕಿಡಿ ಕಾರಿದ್ದರು. 

ಶಿಲ್ಪಾ ಗಣೇಶ್‌ ಬರೆದದ್ದು ಹೀಗಿದೆ 
ರಮ್ಯಾರವರೇ,
ಮೊದಲಿಗೆ ತಾವೊಬ್ಬರೇ ಬುದ್ಧಿವಂತರು ಎನ್ನುವ ತಮ್ಮ ಭ್ರಮೆಗೆ ನಮಸ್ಕಾರಗಳು. ಇನ್ನು ನೀವು ಹೋಲಿಕೆ ಮಾಡುತ್ತಿರುವ ಈ ಫೋಟೋ ವಿಚಾರಕ್ಕೆ ಬಂದರೆ ಯಾವ ಜಾಗಗಳಲ್ಲಿ ವಾಹನ ಹೋಗಲೂ ಕೂಡ ಕಷ್ಟವೋ ಅಲ್ಲಿ ವೈಮಾನಿಕ ಸಮೀಕ್ಷೆ ಮಾಡುವುದು ಅನಿವಾರ್ಯ ಎನ್ನುವುದು ಅರಿವಿರಲಿ, ಪ್ರಧಾನಿಗಳು ನಂತರದಲ್ಲಿ ಜನರೊಂದಿಗೆ ನೇರವಾಗಿ ಮಾತಾಡಿರುವುದನ್ನು ತಾವು ಮರೆತಿದ್ದರೂ ಅಲ್ಲಿನ ಜನ ಮರೆತಿಲ್ಲ, ನಿಮ್ಮ ರಾಹುಲ್ ರವರಿಗೆ ಜನರ ಬಗ್ಗೆ ಅಷ್ಟು ಕಾಳಜಿ ಇದ್ದಿದ್ದರೆ ಅಂತಹ ಪ್ರವಾಹದ ಪರಿಸ್ಥಿತಿಯಲ್ಲಿ ಗುಜಾರಾತಿನ ತಮ್ಮದೇ ಪಕ್ಷದ ಶಾಸಕರನ್ನು ಬೆಂಗಳೂರಿನಲ್ಲಿ ಮೋಜು ಮಾಡಲು ಕಳುಹಿಸಿ ತಾವು ಭಾರಿ ಸಭ್ಯರಂತೆ ಜನರೆದುರು ಬಂದು ಮೊಸಳೆ ಕಣ್ಣೀರು ಸುರಿಸಿದರೆ ಅದನ್ನು ನಂಬಲು ಜನ ಮೂರ್ಖರಲ್ಲ. ನಿಮ್ಮ ರಾಹುಲ್ ರವರು ನಿಜವಾದ ಪ್ರವಾಹ ಸಂತ್ರಸ್ತರ ಜೊತೆಗೆ ಕುಳಿತು ಮಾತಾಡಿದ್ದಾರೆ ಎನ್ನಲು ಯಾವುದೇ ಸಾಕ್ಷಿ ಇಲ್ಲ. ನಿಮ್ಮದೇ ಮಂಡ್ಯದಲ್ಲಿ ರಾಹುಲ್ ಭೇಟಿಯಾದಾಗ ತಾವು ಸೃಷ್ಟಿಸಿದ ನಕಲಿ ರೈತರ ಕಥೆ ಇನ್ನೂ ಜನರ ಮನಸ್ಸಿನಲ್ಲಿ ಹಸಿರಾಗಿದೆ. ಇದರಿಂದಾಗಿ ತಾವು ಮಂಡ್ಯದ ಮಾರುಕಟ್ಟೆಯಲ್ಲಿ ಅವಮಾನ ಪಟ್ಟಿದ್ದು ತಮ್ಮ ಮಂಡ್ಯದಿಂದ ವಾಸಸ್ಥಾನ ಬದಲಾಯಿಸಿದ್ದು ಕೂಡಾ ಜನ ಮರೆತಿಲ್ಲ.

ರಾಹುಲ್ ರವರು ತಾವು ಸಂಸದರಾದ ಕ್ಷೇತ್ರದಲ್ಲೇ ಯಾವುದೇ ಅಭಿವೃದ್ಧಿ ಮಾಡದೇ ಜನರಿಂದ ಉಗಿಸಿಕೊಂಡಿದ್ದು ಜನ ಮರೆತಿಲ್ಲ. ಇನ್ನು ರಾಹುಲ್ ರವರು ಗುಜರಾತಿನ ಪ್ರವಾಹ ಸಂತ್ರಸ್ತರನ್ನು ನೋಡಲು ಹೋದಾಗ ತಮ್ಮ ಕಾರಿನ ಮೇಲೆ ಬಿಜೆಪಿಯವರು ಕಲ್ಲು ತೂರಾಟ ಮಾಡಿದರು ಎಂದು ಹೇಳಿಕೆ ನೀಡಿದ್ದು ನೋಡಿದರೆ ಇದರ ಹಿಂದೆ ನಿಮ್ಮ ಬುದ್ಧಿವಂತಿಕೆ ಎದ್ದು ಕಾಣುತ್ತದೆ, ತಾವೇ ಕಲ್ಲು ಹೊಡೆಸಿಕೊಂಡು ಬಿಜೆಪಿಯ ಮೇಲೆ ಗೂಬೆ ಕೂರಿಸುವುದು ತಿಳಿದ ವಿಚಾರವೇ ಅಲ್ಲವೇ? ಈಗಾಗಲೇ ತಾವು ಮಂಡ್ಯದಲ್ಲಿ ಇದೇ ತರ ನಾಟಕ ಮಾಡಿ ಯಶಸ್ವಿಯಾದವರು ತಾನೇ?

Advertisement

ಮೂರು ಬಾರಿ ಮುಖ್ಯಮಂತ್ರಿ ಆದವರು ದೇಶದ ಪ್ರಧಾನಿಯಾದವರಿಗೆ ಆಡಳಿತ ಮಾಡುವುದನ್ನು ತಾವು ಕಲಿಸಿಕೊಡಲು ಹೋಗಬೇಡಿ. ನೀವೇ ಹೇಳಿದಂತೆ ರಾಹುಲ್ ರನ್ನು ಮೋದಿಜೀ ಲೆವೆಲ್ಲಿಗೆ ಕೊಂಡೊಯ್ಯುತ್ತೇನೆ ಎಂದ ಮಾತನ್ನು ಮೋದಿಜೀ ಹೆಸರಿಗೆ ಮಣ್ಣೆರೆಚುವ ಬದಲು ನಿಮ್ಮ ನಿಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡುವ ಮೂಲಕ ಜನರ ಮನಸ್ಸನ್ನು ಗೆಲ್ಲಿರಿ. ನಿಮ್ಮ ನಾಟಕಗಳನ್ನು ಜನ ನಂಬುವ ಕಾಲ ಹೊರಟುಹೋಗಿದೆ, ಜವಾಬ್ದಾರಿಯಿಂದ ಮಾತಾಡುವುದನ್ನು ಕಲಿಯಿರಿ.
ಧನ್ಯವಾದಗಳು.

Advertisement

Udayavani is now on Telegram. Click here to join our channel and stay updated with the latest news.

Next