ಮುಂಬೈ: ಒಂದು ಕಾಲದಲ್ಲಿ ಟೀಮ್ ಇಂಡಿಯಾದ ಆರಂಭಿಕ ಆಟಗಾರನಾಗಿ ಬಂದು ರನ್ ಗಳ ಸುರಿಮಳೆಯನ್ನೇ ಸುರಿಸುತ್ತಿದ್ದ ಶಿಖರ್ ಧವನ್ ಅಂತಾರಾಷ್ಟ್ರೀಯ ಮತ್ತು ದೇಶಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.
ಇಂದು (ಆಗಸ್ಟ್ 24) ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ‘ಎಕ್ಸ್’ ನಲ್ಲಿ ತಮ್ಮ ಅಭಿಮಾನಿಗಳಿಗೆ ಸುದೀರ್ಘ ವೀಡಿಯೊ ಸಂದೇಶವನ್ನು ಹಂಚಿಕೊಂಡಿದ್ದಾರೆ, ನನ್ನ ಕ್ರಿಕೆಟ್ ಪಯಣದ ಈ ಅಧ್ಯಾಯವನ್ನು ನಾನು ಇಲ್ಲಿಗೆ ಮುಕ್ತಾಯಗೊಳಿಸುತ್ತಿದ್ದೇನೆ, ಇದರೊಂದಿಗೆ ನಾನು ನನ್ನೊಂದಿಗೆ ಅಸಂಖ್ಯಾತ ನೆನಪುಗಳು ಮತ್ತು ಕೃತಜ್ಞತೆಗಳನ್ನೂ ಹೊತ್ತುಕೊಂಡು ಹೊತ್ತಿದ್ದೇನೆ. ನಿಮ್ಮೆಲ್ಲರ ಪ್ರೀತಿ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳು! ಜೈ ಹಿಂದ್! ಎಂದು ಬರೆದುಕೊಂಡಿದ್ದಾರೆ. ಕ್ರಿಕೆಟ್ ಗೆ ವಿದಾಯ ಘೋಷಿಸುವ ಮೂಲಕ ಕ್ರಿಕೆಟ್ ಅಭಿಮಾನಿಗಳಿಗೆ ಬೆಳ್ಳಂಬೆಳಗ್ಗೆ ಶಾಕ್ ನೀಡಿದ್ದಾರೆ.
ಭಾರತ ತಂಡದಲ್ಲಿ ಯುವ ಆಟಗಾರ ಶುಭಮನ್ ಗಿಲ್ ಆರಂಭಿಕ ಆಟಗಾರನಾಗಿ ಸ್ಥಾನ ಪಡೆದುಕೊಂಡ ಬಳಿಕ ಶಿಖರ್ ಧವನ್ ಆರಂಭಿಕ ಆಟಗಾರನ ಸ್ಥಾನ ಕಳೆದುಕೊಂಡಿದ್ದರು. 2022ರ ಡಿಸೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಧವನ್ ಕೊನೆಯ ಬಾರಿಗೆ ಭಾರತ ಪರ ಏಕದಿನ ಪಂದ್ಯ ಆಡಿದ್ದರು.
2010ರಲ್ಲಿ ಟೀಮ್ ಇಂಡಿಯಾ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ಶಿಖರ್ ಧವನ್ ತಮ್ಮ 13 ವರ್ಷಗಳ ವೃತ್ತಿಜೀವನದಲ್ಲಿ, 34 ಟೆಸ್ಟ್ ಪಂದ್ಯ, 167 ಏಕದಿನ ಪಂದ್ಯ ಮತ್ತು 68 ಟಿ- 20 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.