ಶಿಕಾರಿಪುರ: ಸರಕಾರ ನೀಡುವ ಸೌಲಭ್ಯ ಪಡೆದು ಉತ್ತಮ ಜೀವನ ನಡೆಸಬೇಕು. ಸೌಲಭ್ಯ ದುರುಪಯೋಗ ಮಾಡಿಕೊಂಡಲ್ಲಿ ಸರಕಾರ ಯೋಜನೆ ಸ್ಥಗಿತಗೊಳಿಸುತ್ತದೆ. ಅದಕ್ಕೆ ಆಸ್ಪದ ನೀಡಬಾರದು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಪಟ್ಟಣದಲ್ಲಿ ಸೋಮವಾರ ವಿವಿಧ ಇಲಾಖೆಗಳ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಿ ಅವರು ಮಾತನಾಡಿದರು. ಇಲಾಖೆ ನೀಡುವ ಸಾಲ- ಸೌಲಭ್ಯ ಸಾಲ ಪಡೆದ ಉದ್ದೇಶಕ್ಕೆ ಬಳಕೆ ಮಾಡಬೇಕು. ಆಗ ಮರುಪಾವತಿ ಸುಲಭ ಆಗುತ್ತದೆ. ಸಹಾಯ ಧನ ಪಡೆದುಕೊಂಡವರೂ ಅದನ್ನು ಸದುಪಯೋಗ ಮಾಡಿಕೊಳ್ಳಿರಿ ಎಂದರು.
ವಿವಿಧ ಇಲಾಖೆಯ ಸೌಲಭ್ಯ ಫಲಾನುಭವಿಗಳಿಗೆ ನೀಡುವಾಗ ಅದಕ್ಕಾಗಿ ಹಣ ಪಡೆಯುವ ಮಧ್ಯವರ್ತಿಗಳೂ ಹುಟ್ಟಿಕೊಂಡಿರುತ್ತಾರೆ. ಮುಖ್ಯಮಂತ್ರಿಗಳ ಕ್ಷೇತ್ರದಲ್ಲಿ ಇಂತಹದಕ್ಕೆ ಅವಕಾಶ ನೀಡಬಾರದು ಎನ್ನುವ ಉದ್ದೇಶಕ್ಕೆ, ಎಲ್ಲ ಸೌಲಭ್ಯಗಳ ಕುರಿತ ಮಾಹಿತಿ ಜನರಿಗೆ ಸಿಗಬೇಕು ಎನ್ನುವ ಕಾರಣಕ್ಕೆ ಒಂದೆ ವೇದಿಕೆಯಲ್ಲಿ ಎಲ್ಲ ಇಲಾಖೆ ಸೌಲಭ್ಯ ವಿತರಿಸಲಾಗುತ್ತಿದೆ. ತಾಲೂಕಿನ 1500ಕ್ಕೂ ಹೆಚ್ಚು ಫಲಾನುಭವಿಗಳಿಗೆ ಸೌಲಭ್ಯ ನೀಡುತ್ತಿರುವುದು ಸಂತಸ ತಂದಿದೆ ಎಂದರು.
ತಾಲೂಕಿನ ಎಲ್ಲ ಹೋಬಳಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು ಮುಖ್ಯಮಂತ್ರಿಗಳು ಆಗಮಿಸಿ ಯೋಜನೆಗೆ ಚಾಲನೆ ನೀಡಲಿದ್ದಾರೆ. ಶಿವಮೊಗ್ಗ- ರಾಣೆಬೆನ್ನೂರು ರೈಲ್ವೆ ಯೋಜನೆ ಸರ್ವೆ ಕಾರ್ಯ ಆದಷ್ಟು ಬೇಗನೆ ಪೂರ್ಣಗೊಂಡು ಕಾಮಗಾರಿ ಆರಂಭಗೊಳ್ಳುತ್ತದೆ. ತುಮಕೂರು- ಶಿವಮೊಗ್ಗ ಚತುಷ್ಪಥ ರಸ್ತೆ ಕಾಮಗಾರಿಗೆ ಬಂದ ಹಣ ವಾಪಸ್ ಹೋಗದಂತೆ ಮುನ್ನೆಚ್ಚರಿಕೆ ವಹಿಸಿದ್ದು ಕಾಮಗಾರಿ ಆರಂಭಿಸಲಾಗಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ಬದ್ಧರಾಗಿದ್ದು ಎಲ್ಲ ಕ್ಷೇತ್ರದ ಅಭಿವೃದ್ಧಿಗೂ ಆದ್ಯತೆ ನೀಡಲಾಗಿದೆ ಎಂದರು.
ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಕೆ.ಎಸ್. ಗುರುಮೂರ್ತಿ ಮಾತನಾಡಿ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ, ಕರ್ನಾಟಕ ಬೋವಿ ಅವೃದ್ಧಿ ನಿಗಮ, ಆದಿಜಾಂಬವ ಅಭಿವೃದ್ಧಿ ನಿಗಮ, ಡಾ|ಅಂಬೇಡ್ಕರ್ ಅಭಿವೃದ್ಧಿ ನಿಗಮ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಮೂಲಕ ಬೋರ್‌ವೆಲ್ ಕೊರೆಸುವುದಕ್ಕೆ 445 ಫಲಾನುಭವಿಗಳಿಗೆ, ಸ್ವಯಂ ಉದ್ಯೋಗಕ್ಕಾಗಿ 240, ವಿವಿಧ ಸಂಘ- ಸಂಸ್ಥೆಗಳಿಗೆ ನೀಡುವ ಮೈಕ್ರೋ ಫೈನಾನ್ಸ್ ಕ್ರೆಡಿಟ್ ಯೋಜನೆ ಅಡಿ 840 ಫಲಾನುಭವಿಗಳಿಗೆ ಅನುಮೋದನೆ ಪತ್ರ ನೀಡಲಾಗಿದೆ ಎಂದರು.
ಜಿಪಂ ಸದಸ್ಯರಾದ ಅರುಂಧತಿ ರಾಜೇಶ್, ಅಕ್ಷತಾ, ಮಮತಾ ಸಾಲಿ, ರೇಣುಕಾ, ತಾಪಂ ಅಧ್ಯಕ್ಷ ಕೆ.ಆರ್. ಶಂಭು, ತಹಶೀಲ್ದಾರ್ ಕವಿರಾಜ್, ತಾಪಂ ಇಒ ಪರಮೇಶ್ವರ ಮತ್ತಿತರರು ಇದ್ದರು.