ಶಿಕಾರಿಪುರ: ರಾಜ್ಯದ ಹೈವೊಲ್ಟೇಜ್ ಕ್ಷೇತ್ರ ಶಿಕಾರಿಪುರ. ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜಕೀಯ ಆರಂಭಿಸಿದಾಗಿನಿಂದ ಸೋತಿದ್ದು ಒಮ್ಮೆ ಮಾತ್ರ. ಈಗ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ. ಕಾಂಗ್ರೆಸ್‌ನಲ್ಲಿ ಈ ಬಾರಿ 10 ಜನ ಆಕಾಂಕ್ಷಿಗಳಿದ್ದಾರೆ.
ಜೆಡಿಎಸ್ ಅಭ್ಯರ್ಥಿ ಹುಡುಕಾಟದಲ್ಲಿದೆ. ಶಿವಮೊಗ್ಗ ಜಿಲ್ಲೆಯ ಪ್ರಮುಖ ವಿಧಾನಸಭಾ ಕ್ಷೇತ್ರಗಳಲ್ಲೊಂದಾದ ಶಿಕಾರಿಪುರದಲ್ಲಿ ಈ ಬಾರಿ ಹೊಸ ಮುಖಗಳ ನಡುವೆ ಸ್ಪರ್ಧೆ ನಡೆಯುವ ಸಾಧ್ಯತೆ ಇದೆ.
ಬಿ.ಎಸ್.ಯಡಿಯೂರಪ್ಪನವರು ಚುನಾವಣ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದ್ದು ಮಗ ವಿಜಯೇಂದ್ರ ಅವರೇ ತಮ್ಮ ಉತ್ತರಾಧಿಕಾರಿ ಎಂದು ಘೋಷಿಸಿದ್ದಾರೆ. ಬಹುತೇಕ ಅವರಿಗೇ ಟಿಕೆಟ್ ದೊರೆಯುವ ಸಾಧ್ಯತೆ ಇದೆ. ಬಿಎಸ್‌ವೈ ಅವರು ಸಿಎಂ ಸ್ಥಾನದಿಂದ ಕೆಳಗಿಳಿದ ಮೇಲೆ ಶಿಕಾರಿಪುರದಿಂದ ಯಾರು ಸ್ಪರ್ಧಿಸುತ್ತಾರೆ ಎಂಬ ಗೊಂದಲ ಏರ್ಪಟ್ಟಿತ್ತು. ಅದಕ್ಕೆ ಬಿಎಸ್‌ವೈ ಅವರೇ ತೆರೆ ಎಳೆದಿದ್ದರು. ಈಗ ವಿಜಯೇಂದ್ರ ಅವರು ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸುತ್ತಿದ್ದು ಎರಡು ಸುತ್ತು ಸಂಘಟನೆ ಮುಗಿಸಿದ್ದಾರೆ.
ಇನ್ನು ಪ್ರತಿ ಚುನಾವಣೆಯಲ್ಲೂ ಪೈಪೋಟಿ ನೀಡುತ್ತಿರುವ ಕಾಂಗ್ರೆಸ್‌ನಿಂದ ಈ ಬಾರಿ 10 ಮಂದಿ ಟಿಕೆಟ್ ಕೇಳಿದ್ದಾರೆ. ಇದರಲ್ಲಿ ಪುರಸಭೆ ಮಾಜಿ ಸದಸ್ಯ ನಾಗರಾಜ ಗೌಡ, ಕಳೆದ ಚುನಾವಣೆ ಪರಾಜಿತ ಅಭ್ಯರ್ಥಿ ಗೋಣಿ ಮಾಲತೇಶ್, ನಿವೃತ್ತ ಡಿವೈಎಸ್‌ಪಿ ಪತ್ನಿ, ಶಾಮನೂರು ಶಿವಶಂಕರಪ್ಪ ಸಂಬಂಧಿ ಪುಷ್ಪ ಶಿವಕುಮಾರ್, ಮಾಜಿ ಶಾಸಕ ಮಹಾಲಿಂಗಪ್ಪ ಹೆಸರು ಮುಂಚೂಣಿಯಲ್ಲಿದೆ. ಉಳಿದಂತೆ ಶಿರಾಳಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರಪ್ಪ, ಪುರಸಭೆ ಸದಸ್ಯ ಉಳ್ಳಿ ದರ್ಶನ್, ವಕೀಲ ಚಂದ್ರಕಾಂತ ಪಾಟೀಲ್, ನಿರ್ಮಲಾ ಪಾಟೀಲ್, ರಾಘವೇಂದ್ರ ನಾಯ್ಕ, ರಾಮಲಿಂಗಪ್ಪ ಸಹ ಅರ್ಜಿ ಸಲ್ಲಿಸಿದ್ದಾರೆ. ಕಾಂಗ್ರೆಸ್‌ನಿಂದ ಆಕಾಂಕ್ಷಿಗಳ ಪಟ್ಟಿ ಹೆಚ್ಚಿದ್ದರೂ ಕ್ಷೇತ್ರದಲ್ಲಿ ಯಡಿಯೂರಪ್ಪ ವಿರುದ್ಧ ಮುನಿಸಿಕೊಂಡಿರುವ ವರ್ಗವನ್ನು ಸೆಳೆಯಲು ಕಾಂಗ್ರೆಸ್ ತಂತ್ರಗಾರಿಕೆ ರೂಪಿಸುತ್ತಿದೆ. ತಾಲೂಕಿನಲ್ಲಿ ಸಾದರ ಲಿಂಗಾಯತರು ಹೆಚ್ಚಿದ್ದು ಆ ಮತಗಳನ್ನು ಸೆಳೆಯುವುದು ಅಥವಾ ಅತೀ ಹೆಚ್ಚು ಸಂಖ್ಯೆಯಲ್ಲಿರುವ ಕುರುಬ ಸಮುದಾಯಕ್ಕೆ ಟಿಕೆಟ್ ಕೊಡಬಹುದು ಎನ್ನಲಾಗಿದೆ.
ಹೊಸ ಬೆಳವಣಿಗೆಯಲ್ಲಿ ಪಿ.ಒ. ಶಿವಕುಮಾರ್ ಶಿವಮೊಗ್ಗ ನಗರ ಟಿಕೆಟ್ ಆಕಾಂಕ್ಷಿ ಎಂದು ಹೇಳಿ ಕೊಂಡಿದ್ದಾರೆ. ಒಂದು ವೇಳೆ ಅವರಿಗೆ ಶಿವಮೊಗ್ಗ ಟಿಕೆಟ್ ಸಿಕ್ಕರೆ ಪತ್ನಿ ಪುಷ್ಪ ಅವರನ್ನು ಶಿಕಾರಿಪುರದಿಂದ ನಿಲ್ಲಿಸುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
2014ರ ಉಪ ಚುನಾವಣೆಯಲ್ಲಿ ಬಿ.ವೈ.ರಾಘವೇಂದ್ರ ಅವರು ಕೇವಲ 6,430 ಮತಗಳ ಅಂತರದಿಂದ ಗೆದ್ದಿದ್ದರು. ಮತಗಳ ಅಂತರ ಕಡಿಮೆಯಾಗಿದ್ದು ಬಿಜೆಪಿಯಲ್ಲಿ ಆತಂಕ ತಂದಿತ್ತು. ಈಗ ವಿಜಯೇಂದ್ರ ಅವರಿಗೂ ಪ್ರಬಲ ಪೈಪೋಟಿ ಎದುರಾಗುವ ನಿರೀಕ್ಷೆ ಇದೆ.
ಜೆಡಿಎಸ್‌ನಿಂದ ಎರಡು ಬಾರಿ ಸ್ಪರ್ಧಿಸಿ ಎಚ್.ಟಿ.ಬಳಿಗಾರ್ ಅವರು 2013ರಲ್ಲಿ 15,007, 2018ರಲ್ಲಿ 13,191 ಮತ ಪಡೆದಿದ್ದರು. ಅವರು ಬಿಜೆಪಿ ಸೇರಿ ಈಗ ಉಗ್ರಾಣ ನಿಗಮದ ಅಧ್ಯಕ್ಷರಾಗಿದ್ದಾರೆ. ಜೆಡಿಎಸ್ ಹೊಸ ಅಭ್ಯರ್ಥಿಯ ನಿರೀಕ್ಷೆಯಲ್ಲಿದೆ.
ಕಾಂಗ್ರೆಸ್‌ನಿಂದ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿರುವ ಹತ್ತು ಮಂದಿ ಯಾರಿಗೆ ಟಿಕೆಟ್ ಕೊಟ್ಟರೂ ಒಟ್ಟಿಗೆ ಕೆಲಸ ಮಾಡುವುದಾಗಿ ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದ್ದಾರೆ. ಬಂಡಾಯ ಏಳುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಜೆಡಿಎಸ್ ಅಸಮಾಧಾನಿತರಿಗೆ ಟಿಕೆಟ್ ಆಫರ್ ಕೊಡಬಹುದು.
ಬಿ.ವೈ. ವಿಜಯೇಂದ್ರ ಸ್ಪರ್ಧೆ ಮಾಡೋದು ಪಕ್ಕಾನಾ?
ಶಿಕಾರಿಪುರದಲ್ಲಿ ವಿಜಯೇಂದ್ರ ಸ್ಪರ್ಧಿಸುವುದು ಇನ್ನೂ ಪಕ್ಕಾ ಆಗಿಲ್ಲ. ಹಳೇ ಮೈಸೂರು ಭಾಗದಲ್ಲಿ ನಿಲ್ಲುತ್ತಾರೆ ಎಂಬ ಗೊಂದಲಗಳಿಗೂ ತೆರೆ ಬಿದ್ದಿಲ್ಲ. ಹಳೇ ಮೈಸೂರು ಭಾಗದಲ್ಲಿ ನಿಲ್ಲುವುದು ಖಚಿತವಾದರೆ ಇಲ್ಲಿ ಬಿಎಸ್‌ವೈ ಕುಟುಂಬಕ್ಕೆ ಟಿಕೆಟ್ ಕೊಡುತ್ತಾರಾ? ಅಥವಾ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ಸಿಗುತ್ತದೆಯೇ ಕಾದು ನೋಡಬೇಕಿದೆ. ವಿಜಯೇಂದ್ರ ಅವರು ಹಳೇ ಮೈಸೂರು ಭಾಗದಲ್ಲಿ ಸ್ಪರ್ಧೆ ಮಾಡಿ, ಶಿಕಾರಿಪುರದಲ್ಲಿ ಕುಟುಂಬ ಸದಸ್ಯರಿಗೇ ಟಿಕೆಟ್ ಸಿಗುವ ಸಾಧ್ಯತೆ ಇದ್ದರೆ ಸಂಸದ ಬಿ.ವೈ.ರಾಘವೇಂದ್ರ ಅವರ ಪತ್ನಿ ಅಶ್ವಿನಿ ಅವರಿಗೆ ಸಿಗಬಹುದು. ಕಾರ್ಯ ಕರ್ತರಿಗೆ ಕೊಡುವುದಾದರೆ ಬಿಎಸ್‌ವೈ ಅವರ ಬಲಗೈನಂತಿರುವ ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಗುರುಮೂರ್ತಿ ಹೆಸರು ಕೇಳಿಬರುತ್ತಿದೆ. ಯಾರಿಗೆ ಟಿಕೆಟ್ ಸಿಕ್ಕರೂ ಈ ಬಾರಿ ಪ್ರಬಲ ಪೈಪೋಟಿ ಎದುರಾಗುವುದು ನಿಶ್ಚಿತ.
-ಶರತ್ ಭದ್ರಾವತಿ