ಕುಂದಾಪುರ: ಕಳೆದ 5 ವರ್ಷಗಳ ಹಿಂದೆ ವಂಡ್ಸೆ ಸಮೀಪದ ನೂಜಾಡಿಯ ಕೈಕಣ ಎಂಬಲ್ಲಿ ಶಿಕಾರಿ ನೆಪ ಹೇಳಿ ಪ್ರಭಾಕರ ಆಚಾರ್ಯ ಎನ್ನುವವರನ್ನು ಕರೆದೊಯ್ದು ಬಳಿಕ ಗುಂಡು ಹೊಡೆದು ಕೊಲೆ ಮಾಡಿದ ಆರೋಪ ಹೊತ್ತಿದ್ದ ಐವರನ್ನು ಕುಂದಾಪುರದ ಜಿಲ್ಲಾ ಮತ್ತು ಹೆಚ್ಚುವರಿ ಸತ್ಯ ನ್ಯಾಯಾಲಯ ಸೋಮವಾರ ಖುಲಾಸೆಗೊಳಿಸಿ ತೀರ್ಪು ನೀಡಿದೆ.
ಸುಂದರ ಪೂಜಾರಿ, ನಾಗರಾಜ ಪೂಜಾರಿ, ಸಂತೋಷ ಪೂಜಾರಿ, ನಾಗರಾಜ್ ಅಲಿಯಾಸ್ ರಾಜ್ ಹಾಗೂ ಬಾಬು ಪೂಜಾರಿ ವಿರುದ್ಧ ಹೊರಿಸಲಾದ ಆರೋಪ ಋಜುವಾತುಪಡಿಸಲು ವಿಫಲವಾದ ಹಿನ್ನೆಲೆಯಲ್ಲಿ ಐವರನ್ನೂ ನ್ಯಾಯಾಧೀಶರಾದ ಪ್ರಕಾಶ್ ಖಂಡೇರಿ ದೋಷಮುಕ್ತಗೊಳಿಸಿದ್ದರು. ಆರೋಪಿಗಳ ಪರ ಖ್ಯಾತ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ವಾದಿಸಿದ್ದರು.
ಘಟನೆ ವಿವರ: ಟವರ್ ಕಂಪನಿಯಲ್ಲಿ ಫೀಲ್ಡ್ ಆಫೀಸರ್ ಆಗಿದ್ದ ಪ್ರಭಾಕರ ಆಚಾರ್ಯ 2013ರ ಆಗಸ್ಟ್ 11ರಂದು ರಾತ್ರಿ ಮನೆಯಲ್ಲಿದ್ದು ಬಳಿಕ ಮನೆಯಿಂದ ತೆರಳಿದ್ದರು. ಮರುದಿನ ಬೆಳಗ್ಗೆ ಅವರ ಮೃತದೇಹ ಪತ್ತೆಯಾಗಿತ್ತು. ಸ್ನೇಹಿತರೇ ಆದ ಸುಂದರ ಪೂಜಾರಿ ಹಾಗೂ ಮತ್ತಿತರರು ಪ್ರಭಾಕರ ಆಚಾರ್ಯ ಅವರನ್ನು ಶಿಕಾರಿಗೆಂದು ಕರೆದೊಯ್ದು ಅಲ್ಲಿ ಗುಂಡು ಹೊಡೆದು ಸಾಯಿಸಿದ್ದರೆಂದು ಆರೋಪಿಸಲಾಗಿತ್ತು.
ಪ್ರಭಾಕರ್ ಹಾಗೂ ಸುಂದರ್ ಪೂಜಾರಿ ನಾದಿನಿಯ ನಡುವಿನ ಅನೈತಿಕ ಸಂಬಂಧ ಹಾಗೂ ಸುಂದರ್ ಪೂಜಾರಿ ಮತ್ತು ಎರಡನೇ ಆರೋಪಿ ನಾಗರಾಜ್ ಪೂಜಾರಿ ಕೊಡಬೇಕಾಗಿದ್ದ ಹಣವನ್ನು ಪ್ರಭಾಕರ್ ಆಚಾರ್ಯ ಮರಳಿ ಕೇಳಿದ್ದಕ್ಕೆ ಆತನನ್ನು ವ್ಯವಸ್ಥಿತವಾಗಿ ಕೊಂದಿದ್ದಾರೆಂದು ಆರೋಪ ಮಾಡಲಾಗಿತ್ತು. ಮೃತನ ಸಹೋದರ ಈ ಬಗ್ಗೆ ಕೊಲ್ಲೂರು ಠಾಣೆಗೆ ದೂರು ನೀಡಿದ್ದು, ಅಂದಿನ ಬೈಂದೂರು ಸಿಪಿಐ ಅರುಣ ಬಿ ನಾಯ್ಕ್ ತನಿಖಾಧಿಕಾರಿಯಾಗಿದ್ದು, ಸಿಪಿಐ ಸುದರ್ಶನ್ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಧಿವಿಜ್ಞಾನ ಪ್ರಯೋಗಾಲಯ ತಜ್ಞರು, ವೈದ್ಯರು ಸೇರಿದಂತೆ 23ಮಂದಿ ಸಾಕ್ಷಿಗಳ ವಿಚಾರಣೆ ನಡೆಸಲಾಗಿತ್ತು. ಯಾವುದೇ ಪ್ರತ್ಯಕ್ಷ ಸಾಕ್ಷಿಗಳಿಲ್ಲದಿರುವುದು, ಪರೀಕ್ಷೆಗೊಳಪಡಿಸಿದ ಗುಂಡು ವಶಕ್ಕೆ ಪಡೆದ ಬಂದೂಕಿನಿಂದ ಹಾರಿದ ಬಗ್ಗೆ ಮತ್ತು ಅದೇ ದಿನದಂದು ಸಿಡಿದ ಬಗ್ಗೆ ಸೂಕ್ತ ದಾಖಲೆಗಳಿರಲಿಲ್ಲ. ಬಂದೂಕಿನ ಮೇಲೆ ಬೆರಳಿನ ಮುದ್ರೆ ಇರಲಿಲ್ಲ. ಅಲ್ಲದೇ ಕೊಲೆ ಮಾಡುವ ಯಾವುದೇ ಉದ್ದೇಶವೂ ಆರೋಪಿಗಳಿಗೆ ಇರಲಿಲ್ಲ ಎಂದು ವಾದಿಸಲಾಗಿತ್ತು. ಹೀಗೆ ಹಲವು ಪ್ರಮುಖ ಸನ್ನಿವೇಶಗಳು ಸಾಬೀತಾಗದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಆರೋಪಿಗಳನ್ನು ದೋಷಮುಕ್ತಗೊಳಿಸಿದ್ದರು.