ಬೆಂಗಳೂರು: ಶಿಗ್ಗಾಂವಿ ಬಂಡಾಯದ ಬಿಸಿ “ಕೈ’ ಪಾಳೆಯಕ್ಕೆ ತುಸು ಜೋರಾಗಿ ತಟ್ಟುವ ಲಕ್ಷಣಗಳು ಕಾಣುತ್ತಿದ್ದು, ಇದನ್ನು ಶಮನಗೊಳಿಸಲು ಪಕ್ಷದ ನಾಯಕರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಇದರ ಭಾಗವಾಗಿ ಕಾಂಗ್ರೆಸ್ ಮುಖಂಡ ಅಜ್ಜಂಪೀರ್ ಖಾದ್ರಿ ಅವರನ್ನು ಜಮೀರ್ ಅಹಮ್ಮದ್ ಖಾನ್ ಗೃಹ ಬಂಧನದಲ್ಲಿ ಇರಿಸಿದ್ದಾರೆ ಎನ್ನಲಾಗುತ್ತಿದೆ.
ಯಾಸಿರ್ ಅಹಮದ್ ಖಾನ್ ಪಠಾಣ್ ಅವರನ್ನು ಶಿಗ್ಗಾಂವಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಘೋಷಿಸಿದ ಬೆನ್ನಲ್ಲೇ ಮುನಿಸಿಕೊಂಡ ಅಜ್ಜಂಪೀರ್ ಖಾದ್ರಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇದು ಕಾಂಗ್ರೆಸ್‌ನ ನಿದ್ದೆಗೆಡಿಸಿದೆ.
ಹಾಗಾಗಿ, ಅವರ ಮನವೊಲಿಕೆ ಕಸರತ್ತು ನಡೆದಿದೆ. ಸಚಿವ ಜಮೀರ್ ಅಹಮದ್ ಖಾನ್ ಈ ಪ್ರಯತ್ನ ನಡೆಸಿದ್ದು, ಇದರಿಂದ ಇಡೀ ದಿನ ಖಾದ್ರಿ ಜಮೀರ್ ಮನೆಯಲ್ಲೇ ಇರಬೇಕಾಯಿತು. ಅಷ್ಟೇ ಅಲ್ಲ, ನಾಮಪತ್ರ ಹಿಂಪಡೆಯುವ ಕೊನೆಯ ದಿನ (ಅ. 30)ರವರೆಗೂ ಅವರು ಸಚಿವರ ಅತಿಥಿಯಾಗಿಯೇ ಇರಲಿದ್ದಾರೆ. ಅಂದು ನೇರವಾಗಿ ಶಿಗ್ಗಾಂವಿ ಚುನಾವಣಾಧಿಕಾರಿ ಕಚೇರಿಗೆ ತೆರಳಿ ತಮ್ಮ ಉಮೇದುವಾರಿಕೆ ಹಿಂಪಡೆಯಲಿದ್ದಾರೆ ಎನ್ನಲಾಗಿದೆ.
ಹಲವು ಸುತ್ತಿನ ಮಾತುಕತೆ ಬಳಿಕ ಅಜ್ಜಂಪೀರ್ ಖಾದ್ರಿ ಅವರ ಮನವೊಲಿಕೆಯಲ್ಲಿ ಕಾಂಗ್ರೆಸ್ ನಾಯಕರು ಭಾಗಶಃ ಯಶಸ್ವಿಯಾಗಿದ್ದಾರೆ. ಆದರೆ, ಕ್ಷೇತ್ರಕ್ಕೆ (ಶಿಗ್ಗಾಂವಿಗೆ) ತೆರಳಿದಾಗ ಅಲ್ಲಿ ಹಿಂಪಡೆಯದಿರಲು ಕಾರ್ಯಕರ್ತರ ಒತ್ತಡ ಹೆಚ್ಚಾಗಬಹುದು. ಆಗ ಕೊನೆಯ ಕ್ಷಣದಲ್ಲಿ ಮನಸ್ಸು ಬದಲಿಸಬಹುದು ಎಂಬ ಆತಂಕವೂ ಇದೆ. ಈ ಹಿನ್ನೆಲೆಯಲ್ಲಿ ಅ. 30ರ ವರೆಗೆ ಅಜ್ಜಂಪೀರ್ ಖಾದ್ರಿ ಅವರಿಗೆ ಸಚಿವರು ತಮ್ಮ ಮನೆಯಲ್ಲೇ ಆತಿಥ್ಯ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.