ಬೆಂಗಳೂರು: ಸಾವಿರಾರು ಹೂಗಳ ಮಕರಂದ ಹೀರಿ ಅದರ ಮಧುವನ್ನು ನೀಡುವ ಜೇನುನೊಣಕ್ಕೆ “ರಾಜ್ಯ ಕೀಟ’ ಮನ್ನಣೆ ನೀಡುವಂತೆ ಕರ್ನಾಟಕ ಜೀವ ವೈವಿಧ್ಯ ಮಂಡಳಿ ಶಿಫಾರಸು ಮಾಡಿದ್ದು, ಸರ್ಕಾರ ಒಪ್ಪಿಕೊಂಡರೆ ಮುಂದಿನ ದಿನಗಳಲ್ಲಿ ಜೇನುನೊಣ ಕರ್ನಾಟಕ ಕೀಟವಾಗಲಿದೆ.
ಈಗಾಗಲೇ ಕರ್ನಾಟಕಕ್ಕೆ ರಾಜ್ಯ ಪಕ್ಷಿ, ಪ್ರಾಣಿ, ಮರ ಹಾಗೂ ಹೂವು ಇದ್ದು, ಇದರ ಜತೆಗೆ ಕೀಟವನ್ನೂ ಸೇರಿಸಲು ಹಲವು ದಿನಗಳಿಂದ ರಾಜ್ಯದ ವನ್ಯಜೀವಿ ತಜ್ಞರು ಒತ್ತಾಯಿಸುತ್ತಾ ಬಂದಿದ್ದರು. ಈ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿರುವ ಕರ್ನಾಟಕ ಜೀವ ವೈವಿಧ್ಯ ಮಂಡಳಿ ಜೇನುನೊಣವನ್ನು ರಾಜ್ಯ ಕೀಟವನ್ನಾಗಿ ಪರಿಗಣಿಸಲು ಅಗತ್ಯವಾದ ಸಿದ್ಧತೆಯನ್ನು ಮಾಡಿಕೊಂಡಿದ್ದು, ಮಂಡಳಿಯ ಮುಂದಿನ ಸಭೆಯಲ್ಲಿ ಚರ್ಚಿಸಿ ಸಚಿವ ಸಂಪುಟದ ಒಪ್ಪಿಗೆ ಪಡೆಯಲು ತಯಾರಿ ನಡೆಯುತ್ತಿದೆ.
ಕೀಟ ಮಾನ್ಯತೆ ನೀಡಲಿರುವ ಮೊದಲ ರಾಜ್ಯ: ಪ್ರಾದೇಶಿಕ ವ್ಯಾಪ್ತಿಯ ಶ್ರೇಷ್ಠತೆಗಳನ್ನು ಎತ್ತಿ ಹಿಡಿಯುವುದಕ್ಕಾಗಿ ಆಯಾ ರಾಜ್ಯ ಸರ್ಕಾರಗಳು ರಾಜ್ಯ ಪ್ರಾಣಿ, ಪಕ್ಷಿ, ಹೂವು ಅನ್ನು ರಾಜ್ಯ ಸಂಕೇತವಾಗಿ ಮಾಡಿಕೊಳ್ಳುತ್ತವೆ. ಈ ಹಿಂದೆ ಮಹಾರಾಷ್ಟ್ರ ನಂತರ ರಾಜ್ಯ ಸರ್ಕಾರವು 2016ರಲ್ಲಿ ಕರ್ನಾಟಕದ ರಾಜ್ಯದ ಚಿಟ್ಟೆಯಾಗಿ ಸದರ್ನ್ ಬರ್ಡ್‌ವಿಂಗ್ ಅನ್ನು ಅಧಿಕೃತವಾಗಿ ಘೋಷಿಸಿ ಚಿಟ್ಟೆಯನ್ನು ಸಂಕೇತವಾಗಿ ಮಾಡಿಕೊಂಡ ದೇಶದ ಎರಡನೇ ರಾಜ್ಯವಾಗಿತ್ತು. ಈಗ ವನ್ಯಜೀವಿ ತಜ್ಞರ ಒತ್ತಾಯ ಹಾಗೂ ಮಂಡಳಿಯ ಚಿಂತನೆಯಂತೆ ಜೇನುಹುಳುವಿಗೆ ರಾಜ್ಯ ಕೀಟ ಮಾನ್ಯತೆ ಸಿಕ್ಕರೆ, ಕೀಟವೊಂದಕ್ಕೆ ರಾಜ್ಯ ಹೆಮ್ಮೆಯ ಕೀಟವೆಂದು ಪರಿಗಣಿಸಿ ಮಾನ್ಯತೆ ನೀಡಿದ ಮೊದಲ ರಾಜ್ಯ ಕರ್ನಾಟಕವಾಗುತ್ತದೆ.
ಪ್ರಕೃತಿಯ ಸಮತೋಲನ ಕಾಪಾಡಲು ಜೇಣುನೊಣ ಪ್ರಮುಖ ಪಾತ್ರವಹಿಸುತ್ತದೆ. ಭೂಮಿಯ ಅರ್ಧದಷ್ಟು ಹೂ ಗಿಡ ಮರ ಬೆಳೆಗಳು ನೈಸರ್ಗಿಕ ಪರಾಗ ಸ್ಪರ್ಶಕ್ಕೆ ಜೇನುಹುಳುವನ್ನೇ ಅವಲಂಬಿಸಿದೆ ಎಂಬುದು ತಜ್ಞರ ಅಭಿಪ್ರಾಯ. ಇದರಿಂದ ಉತ್ಪತ್ತಿಯಾಗುವ ಬೀಜವು ಉತ್ಕೃಷ್ಟವಾಗಿದ್ದು, ಬೆಳೆಯೂ ಉತ್ತಮ ಇಳುವರಿ ನೀಡುತ್ತದೆ. ಇನ್ನು ಜೇನುಹುಳು ಒಂದು ಗ್ರಾಂ ನಷ್ಟು ಮಧುವನ್ನು ಸಂಗ್ರಹಿಸಲು 200 ಕಿ.ಮೀ ಸಂಚರಿಸಿ. 50 ಸಾವಿರ ಹೂಗಳನ್ನು ಭೇಟಿ ಮಾಡುತ್ತದೆ. ಇನ್ನು ಜೇನು ಕೃಷಿಯನ್ನು ಕರ್ನಾಟಕದಲ್ಲಿ ಸಾಕಷ್ಟು ಮಂದಿ ಕಸುಬು ಹಾಗೂ ಉಪ ಕಸುಬಾಗಿ ಮಾಡಿಕೊಂಡು ಆದಾಯ ಗಳಿಸುತ್ತಿದ್ದಾರೆ.
ಇತ್ತೀಚೆಗೆ ಪರಿಸರ ಮಾಲಿನ್ಯ ಹಾಗೂ ಬೆಳೆಗಳ ರಾಸಾಯನಿಕಗಳ ಬಳಕೆಯಿಂದ ಜೇನುನೊಣದ ಸಂತತಿ ಕಡಿಮೆಯಾಗುತ್ತಿದ್ದು, ಇಂತಹ ಸಮಯದಲ್ಲಿ ರಾಜ್ಯ ಕೀಟ ಮನ್ನಣೆ ಸಿಕ್ಕರೆ ಸಂತತಿ ವೃದ್ಧಿಗೆ ಸಹಾಯಕವಾಗಬಹುದು ಎನ್ನುತ್ತಾರೆ ಪರಿಸರವಾದಿಗಳು ಹಾಗೂ ಜೀವವೈವಿಧ್ಯ ತಜ್ಞರು.
ಜೇನುಹುಳು ವಿಶಿಷ್ಟ ಕೀಟ. ಪರಿಸರ ಸಮತೋಲನೆಗೆ ಹಾಗೂ ಪರಾಗ ಸ್ಪರ್ಶ ಕ್ರಿಯೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇಂದಿನ ಮಾಲಿನ್ಯ ಪರಿಸರ ಹಾಗೂ ಕೃಷಿಯಲ್ಲಿನ ರಾಸಾಯನಿಕ ಬದುಕಿನಿಂದಾಗಿ ಜೇನುಹುಳು ಸಂತತಿ ಕಡಿಮೆಯಾಗುತ್ತಿದೆ. ರಾಜ್ಯ ಕೀಟ ಮನ್ನಣೆ ಉತ್ತಮ ಆಲೋಚನೆ. ಇದರಿಂದಾದರೂ ಸಂತತಿ ವೃದ್ಧಿಗೆ ಸಹಾಯವಾಗಬಹುದು.
– ಯಲ್ಲಪ್ಪ ರೆಡ್ಡಿ, ಪರಿಸರವಾದಿ
ಜೇನುಹುಳುವಿಗೆ ಕರ್ನಾಟದ ರಾಜ್ಯದ ಕೀಟ ಮಾನ್ಯತೆ ನೀಡಲು ಚಿಂತನೆ ನಡೆಸಿದ್ದು, ಈಗಾಗಲೇ ವನ್ಯಜೀವಿ ತಜ್ಞರ ಸಲಹೆ ಪಡೆದು ಚರ್ಚಿಸಲಾಗಿದೆ. ಅಗತ್ಯ ಮಾಹಿತಿಗಳನ್ನು ಸಂಗ್ರಹಿಸಿಕೊಂಡು ಸಚಿವ ಸಂಪುಟದ ಅನುಮೋದನೆಗೆ ಶೀಘ್ರದಲ್ಲೇ ಸಲ್ಲಿಸಲಾಗುವುದು.
-ಪಿ.ಶೇಷಾದ್ರಿ, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ
– ಜಯಪ್ರಕಾಶ್ ಬಿರಾದಾರ್