Advertisement

ಶಿಡ್ಲಘಟ್ಟ: ಕುಕ್ಕರ್‌ ಸಿಡಿತಕ್ಕೆ ಕೈ ಸುಟ್ಟುಕೊಂಡ ಕಾಂಗ್ರೆಸ್‌

03:04 PM May 14, 2023 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯ ರೇಷ್ಮೆ ನಗರಿ ಶಿಡ್ಲಘಟ್ಟ ಕ್ಷೇತ್ರ ಹೇಳಿ ಕೇಳಿ ಕಾಂಗ್ರೆಸ್‌ ಭದ್ರಕೋಟೆ, ಕಳೆದ 15 ಚುನಾವಣೆಗಳಲ್ಲಿ ಕಾಂಗ್ರೆಸ್‌ 10 ಬಾರಿ ಗೆಲುವು ಸಾಧಿಸಿದೆ. ಆ ಪೈಕಿ ವಿ. ಮುನಿಯಪ್ಪ ಅವರೇ 6 ಬಾರಿ ಗೆಲುವು ಸಾಧಿಸಿದ್ದಾರೆ. ಆದರೆ, ಈ ಬಾರಿ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಪುಟ್ಟು ಅಂಜಿನಪ್ಪನವರ ಕುಕ್ಕರ್‌ ಸಿಡಿತಕ್ಕೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಕೈ ಸುಟ್ಟುಕೊಂಡಿದೆ.

Advertisement

ಹೌದು, ಕ್ಷೇತ್ರದ ಹಾಲಿ ಶಾಸಕರಾಗಿದ್ದ ವಿ.ಮುನಿಯಪ್ಪ ರಾಜಕೀಯ ನಿವೃತ್ತಿ ಘೋಷಿಸಿದ ನಂತರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಬಗ್ಗೆ ಸಾಕಷ್ಟು ಗೊಂದಲ ಇತ್ತು. ಕೊನೆ ಕ್ಷಣದವರೆಗೂ ಟಿಕೆಟ್‌ ಯಾರಿಗೆ ಎಂಬುದು ತಿಳಿಯದೇ ಕಾರ್ಯಕರ್ತರು ಬಿಜೆಪಿ, ಜೆಡಿಎಸ್‌ಗೆ ವಲಸೆ ಹೋದರು. ಆರಂಭದಲ್ಲಿ ವಿ.ಮುನಿಯಪ್ಪ ಕೋಲಾರದ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಪರ ಬ್ಯಾಟ್‌ ಬೀಸಿದರೂ ಫ‌ಲ ಕೊಡಲಿಲ್ಲ. ಕೊನೆಗೆ ಟಿಕೆಟ್‌ ಕದನದಲ್ಲಿ ಸಮಾಜಕ ಸೇವಕ ರಾಜೀವ್‌ಗೌಡ ಹಾಗೂ ಪುಟ್ಟು ಅಂಜಿನಪ್ಪ ನಡುವೆ ತೀವ್ರ ಪೂಪೋಟಿ ನಡೆದರೂ ಕೊನೆ ಕ್ಷಣದಲ್ಲಿ ಕಾಂಗ್ರೆಸ್‌ ನಾಯಕರು ರಾಜೀವ್‌ ಗೌಡಗೆ ಟಿಕೆಟ್‌ ಪ್ರಕಟಿಸಿದರು.

ಟಿಕೆಟ್‌ ವಂಚಿತ ಪುಟ್ಟು ಅಂಜಿನಪ್ಪ, ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದ ಪರಿಣಾಮ ಕೈ ಬಂಡಾಯ ಹಾಗೂ ಕಳೆದ ಬಾರಿ ಬಿ.ಫಾರಂ ಗೊಂದಲದಲ್ಲಿ ವಿ.ಮುನಿಯಪ್ಪ ವಿರುದ್ಧ ಅಲ್ಪ ಮತಗಳ ಅಂತರದಿಂದ ಸೋತಿದ್ದ ಜೆಡಿಎಸ್‌ನ ಮೇಲೂರು ರವಿಕುಮಾರ್‌ಗೆ ಈ ಬಾರಿ ಗೆಲುವಿನ ಹಾದಿ ಸುಗಮಗೊಳಿಸಿತು.

ರವಿಕುಮಾರ್‌ 68,932 ಮತ ಪಡೆದರೆ, ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿ ಪುಟ್ಟು ಅಂಜಿನಪ್ಪ 52,160 ಮತ ಪಡೆದು ಗೆಲುವಿಗಾಗಿ ಪ್ರಬಲ ಪೈಪೋಟಿ ನೀಡಿದ್ದಾರೆ. ಕಾಂಗ್ರೆಸ್‌ನ ರಾಜೀವ್‌ಗೌಡ ಕೇವಲ 36,157 ಮತ ಪಡೆದಿದ್ದು, ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಕಾಂಗ್ರೆಸ್‌ಗೆ ಬಂಡಾಯ ಇಲ್ಲದೇ ಇದ್ದಿದ್ದರೆ ಅಥವಾ ಪುಟ್ಟು ಅಂಜಿನಪ್ಪಗೆ ಟಿಕೆಟ್‌ ಕೊಟ್ಟಿದ್ದರೆ ಗೆಲುವು ಸುಲಭ ಇತ್ತು ಎನ್ನುವ ಮಾತು ಕ್ಷೇತ್ರದ ರಾಜಕೀಯ ವಲಯದಲ್ಲಿ ಕೇಳಿ ಬಂತು.

Advertisement

Udayavani is now on Telegram. Click here to join our channel and stay updated with the latest news.

Next