Advertisement
ಬೆಳಗ್ಗೆ ಹತ್ತೂವರೆ ಗಂಟೆಗೆ ಆರಂಭವಾದ ಪ್ರತಿಭಟನೆ ಸ್ಥಳಕ್ಕೆ ಅಪರಾಹ್ನದ 2-30 ರ ವೇಳೆಗೆ ಸ್ಥಳಕ್ಕೆ ಆಗಮಿಸಿದ ಬೆಳ್ತಂಗಡಿ ಉಪತಹಶೀಲ್ದಾರ್ ಪ್ರತೀಷ್ ಕುಮಾರ್ ಹಾಗೂ ವೃತ್ತ ನಿರೀಕ್ಷಕ ಸಂದೇಶ್ ರವರು ಪ್ರತಿಭಟನಾಕಾರರ ಮನವಿಯನ್ನು ಸ್ವೀಕರಿಸಿ ಶೀಘ್ರವೇ ಆರೋಪಿಗಳ ಪತ್ತೆ ಹಚ್ಚುವುದಾಗಿ ನೀಡಿದ ಭರವಸೆಯ ಮೇರೆಗೆ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.
ಕುಡಿಯುವ ನೀರಿಗೆ ವಿಷ ಹಾಕಿದ ದುಷ್ಕರ್ಮಿಗಳ ಪತ್ತೆಗೆ ಆಗ್ರಹಿಸಿ ದ.7ರಂದು ನಡೆದ ಎಸ್‌ಡಿಎಂಸಿ ಹಾಗೂ ಪೋಷಕರ ಸಭೆಯಲ್ಲಿ ದ.13ಕ್ಕೆ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಈ ಪ್ರತಿಭಟನೆಗೆ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು ಹಾಗೂ ಪೋಷಕರ ಒಂದು ಗುಂಪು ಗೈರು ಹಾಜರಿಯಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಎಸ್‌ಡಿಎಂಸಿ ಅಧ್ಯಕ್ಷ ವೆಂಕಪ್ಪ ಗೌಡರವರು, ಪ್ರಕರಣ ತನಿಖೆಯ ಹಂತದಲ್ಲಿದೆ. ಶಾಸಕರು ಹಿರಿಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದು ಆರೋಪಿಗಳ ಪತ್ತೆಗೆ ಒತ್ತಾಯಿಸಿದ್ದಾರೆ. ದ.10ರಂದು ನಡೆದ ಪೋಷಕರ ಸಭೆಯಲ್ಲಿ ದ.13ರಂದು ಪ್ರತಿಭಟನೆ ನಡೆಸುವ ಬದಲು ದ.11ರಿಂದ ಮಕ್ಕಳನ್ನು ಶಾಲೆಗೆ ಕಳುಹಿಸದೇ ಇರಲು ನಿರ್ಣಯಿಸಲಾಗಿದೆ. ಆದ್ದರಿಂದ ಇಂದಿನ ಪ್ರತಿಭಟನೆಗೆ ಹೋಗಿಲ್ಲ. ಆರೋಪಿಗಳ ಪತ್ತೆಗೆ ನಮ್ಮದೂ ಆಗ್ರಹವಿದೆ ಎಂದರು.
Related Articles
Advertisement
ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್‌ರವರು ಮಾತನಾಡಿ, ಕುಡಿಯುವ ನೀರಿಗೆ ವಿಷ ಹಾಕಿದ ಘಟನೆ ದುರದೃಷ್ಟಕರವಾಗಿದೆ. ಈ ಹಿಂದೆ ಶಾಲೆಯ ಪೈಪು ಲೈನ್ ಒಡೆದು ಹಾಕಿರುವ ಘಟನೆಯ ಮಾಹಿತಿ ಇತ್ತೀಚೆಗಷ್ಟೇ ಸಿಕ್ಕಿದೆ. ಮುಖ್ಯಮಂತ್ರಿಗಳ ಬೆಳ್ತಂಗಡಿ ಭೇಟಿ, ದತ್ತಪೀಠ ಬಂದೋಬಸ್ತ್ ಹಿನ್ನೆಲೆಯಲ್ಲಿ ಕೆಲಸದ ಒತ್ತಡದಲ್ಲಿದ್ದೇವೆ. ಪ್ರಕರಣದ ತನಿಖೆ ಬಗ್ಗೆ ಯಾವುದೇ ಸಂಶಯ ಬೇಡ. ಕಾನೂನು ಪ್ರಕಾರ ಆರೋಪಿಗಳನ್ನು ಪತ್ತೆ ಹಚ್ಚುತ್ತೇವೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ ಸ್ವತ: ನಾನೇ ಮುತುವರ್ಜಿ ವಹಿಸಿ ತನಿಖೆ ಕೈಗೊಳ್ಳುತ್ತೇನೆ. ಆರೋಪಿ ಯಾವುದೇ ಪಕ್ಷದವನಾಗಿದ್ದರೂ ಬಂಧಿಸುವ ಕೆಲಸ ಖಚಿತವಾಗಿಯೂ ಮಾಡುತ್ತೇವೆ ಎಂದು ಭರವಸೆ ನೀಡಿದರು.
ತಹಶೀಲ್ದಾರ್ ಮತ್ತು ಪೋಲೀಸ್ ಇಲಾಖೆ ಸಭೆ ನಂತರ ಶಾಲೆಗೆ ಮಕ್ಕಳು ; ಪ್ರತಿಭಟನಾ ಸಭೆಯಲ್ಲಿ ಮನವಿಯನ್ನು ನೀಡಿದ ಪ್ರತಿಭಟನಾಕಾರರು , ಮಕ್ಕಳ ಪೋಷಕರು ಕಂದಾಯ ಇಲಾಖೆ ಮತ್ತು ಪೋಲೀಸ್ ವೃತ್ತ ನಿರೀಕ್ಷಕರು ಮತ್ತು ಮಕ್ಕಳ ಪೋಷಕರು ಸಭೆ ನಡೆಸಿ ಶಾಲಾ ಮಕ್ಕಳಲ್ಲಿ ಧೈರ್ಯ ತುಂಬಿಸುವ ಕಾರ್ಯವನ್ನ ಸಭೆಯ ಮೂಲಕ ನಡೆಸಿದ ನಂತರ ಶಾಲೆಗೆ ಮಕ್ಕಳನ್ನು ಕಳುಹಿಸುವುದಾಗಿ ಪೋಷಕರು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು. ಹಾಗೂ ಈಗಾಗಲೇ ವಿಷ ಹಾಕಿದೆ ಎನ್ನಲಾದ ಬಾವಿಯ ನೀರನ್ನು ಪರೀಕ್ಷೆಗೆ ಕಳುಹಿಸಿದ್ದು ಇದರ ವರದಿಯನ್ನು ಕೂಡಲೇ ತರಿಸಬೇಕು ಮತ್ತು ಇದೇ ಬಾವಿಯ ನೀರನ್ನು ಮರು ಬಳಕೆ ಮಾಡಬಹುದೇ ಎನ್ನುವ ಕುರಿತಂತೆ ಸ್ಥಳೀಯರಿಗಿರುವ ಸಂಶಯವನ್ನ ದೂರಗೊಳಿಸುವುದು ಇಲಾಖಾ ಜವಾಬ್ದಾರಿಯಾಗಿದೆ ಎಂದು ಅಧಿಕಾರಿಗಳಿಗೆ ಪ್ರತಿಭಟನಾಕಾರರು ತಿಳಿಸಿದರು