ನವದೆಹಲಿ: ನ್ಯಾಯಾಲಯದ ಆದೇಶದಂತೆ ಜ್ಞಾನವಾಪಿ ಮಸೀದಿ ಆವರಣದ ವಿಡಿಯೋ ಸಮೀಕ್ಷೆ ನಡೆಸಿದ ಸಂದರ್ಭದಲ್ಲಿ ಹಲವಾರು ಹಿಂದೂ ದೇವತೆಗಳ ವಿಗ್ರಹದ ಮುರಿದ ತುಣುಕುಗಳು ಪತ್ತೆಯಾಗಿರುವುದಾಗಿ ಹಿಂದೂ ಅರ್ಜಿದಾರರ ಪರವಾಗಿ ಗುರುವಾರ (ಮೇ 19) ಕೋರ್ಟ್ ಗೆ ಹಾಜರಾಗಿದ್ದ ವಕೀಲ ಅಜಯ್ ಮಿಶ್ರಾ ಅವರು ತಿಳಿಸಿರುವುದಾಗಿ ವರದಿ ಹೇಳಿದೆ.
ಇದನ್ನೂ ಓದಿ:ಸಾಧನೆಗೆ ಬಡತನವೇ ಪ್ರೇರಣೆ :ಗೋವಾಕ್ಕೆ ಗುಳೆ ಹೋಗಿರುವ ಕಾರ್ಮಿಕನ ಮಗ ಟಾಪರ್
ಅವಶೇಷಗಳು ದೇವಾಲಯದಂತೆ ಇದ್ದು, ಅದು ಶೇಷನಾಗನ ಪಳಯುಳಿಕೆಯಂತಿದೆ. ಆದರೆ ನನಗೆ ನೆಲಮಾಳಿಗೆಗೆ ಹೋಗಲು ಅವಕಾಶ ನೀಡಲಿಲ್ಲ. ಈ ಅವಶೇಷಗಳು 500-600 ವರ್ಷಗಳಷ್ಟು ಪುರಾತನದ್ದಾಗಿದೆ ಎಂದು ಅಜಯ್ ಮಿಶ್ರಾ ಆಜ್ ತಕ್ ಜೊತೆ ಮಾತನಾಡುತ್ತ ತಿಳಿಸಿದ್ದಾರೆ.
ಜ್ಞಾನವಾಪಿ ಮಸೀದಿ ಸಂಕೀರ್ಣದೊಳಗೆ ವಿಡಿಯೋ ಚಿತ್ರೀಕರಣ ಮಾಡುವ ತಂಡದಲ್ಲಿ ಅಜಯ್ ಮಿಶ್ರಾ ಕೂಡಾ ಒಬ್ಬರಾಗಿದ್ದರು. ಆದರೆ ಸಮೀಕ್ಷೆ ಸಂದರ್ಭದಲ್ಲಿ ತನಗೆ ಜಿಲ್ಲಾಡಳಿತ ತನಗೆ ಸಹಕಾರ ನೀಡಿರಲಿಲ್ಲ ಎಂದು ಆರೋಪಿಸಿದ್ದಾರೆ.
ಮಸೀದಿ ಆವರಣದೊಳಗೆ ಗುಮ್ಮಟ ಆಕಾರದ ರಚನೆ ಇದ್ದಿರುವುದಾಗಿ ಮಿಶ್ರಾ ಖಚಿತಪಡಿಸಿದ್ದಾರೆ. ಆದರೆ ಅದನ್ನು ತಮ್ಮ ವರದಿಯಲ್ಲಿ ಉಲ್ಲೇಖಿಸಿಲ್ಲ ಎಂದು ತಿಳಿಸಿದ್ದಾರೆ. ಆ ಆಕಾರ ಹಿಂದೂಗಳ ಶಿವಲಿಂಗದಂತಿದೆ ಎಂದು ಮಿಶ್ರಾ ಹೇಳಿದ್ದಾರೆ. ಮತ್ತೊಂದೆಡೆ ಮಸೀದಿ ಆಡಳಿತ ಮಂಡಳಿ ಇದನ್ನು ಅಲ್ಲಗಳೆದಿದ್ದು, ಅದೊಂದು ಕಾರಂಜಿ ಎಂದು ತಿಳಿಸಿದೆ.
ಅಷ್ಟೇ ಅಲ್ಲ ಸ್ಪೆಷಲ್ ಕೋರ್ಟ್ ಕಮಿಷನರ್ ವಿಶಾಲ್ ಸಿಂಗ್ ಅವರು ಕೋರ್ಟ್ ಗೆ ಸಲ್ಲಿಸಿರುವ ವರದಿಯಲ್ಲಿ ಈ ರಚನೆ ಬಗ್ಗೆ ಉಲ್ಲೇಖಿಸಿದ್ದಾರೆ. ಮಸೀದಿಯೊಳಗೆ ಸನಾತನ ಸಂಸ್ಕೃತಿಯ ಹಲವಾರು ಕುರುಹುಗಳು ಇದ್ದಿರುವುದಾಗಿ ತಿಳಿಸಿದ್ದಾರೆ.
ನೆಲಮಾಳಿಗೆಯ ಗೋಡೆಯಲ್ಲಿ ಕಮಲ, ಡಮರುಗ, ತ್ರಿಶೂಲ ಪತ್ತೆಯಾಗಿರುವುದಾಗಿ ವರದಿಯಲ್ಲಿ ತಿಳಿಸಿದೆ. ವಿಡಿಯೋ ಸಮೀಕ್ಷೆಯ ಮೆಮೊರಿ ಚಿಪ್ ಅನ್ನು ಕೋರ್ಟ್ ಗೆ ಸಲ್ಲಿಸಿರುವುದಾಗಿ ಸಿಂಗ್ ತಿಳಿಸಿದ್ದಾರೆ.