ಯಲಬುರ್ಗಾ: ದಿನೇ ದಿನೇ ಏರುತ್ತಿರುವ ತಾಪಮಾನದಿಂದ ಕುರಿ ಮೇಕೆಗಳನ್ನು ಸಾಕಿ ಜೀವನ ಸಾಗಿಸುತ್ತಿರುವ ಕುರಿಗಾಹಿಗಳ ಬದುಕು ಕಷ್ಟಕರವಾಗಿದೆ. ಕುಡಿವ ನೀರಿನ ಅಭಾವ ಹಾಗೂ ಹುಲ್ಲು ಸಿಗದೆ ಬೀರು ಬೀರು ಬಿಸಿಲಿನ ಹೊಡೆತಕ್ಕೆ ಕುರಿ, ಮೇಕೆ ಮೇಯಿಸುಲು ಆತಂಕ ಪಡುವಂತಾಗಿದೆ.
ತಾಲೂಕಿನಲ್ಲಿ ಪಶು ಇಲಾಖೆಯ ಸರ್ವೇ ಪ್ರಕಾರ ತಾಲೂಕಿನಲ್ಲಿ 112784 ಕುರಿಗಳು, 32551 ಮೇಕೆಗಳು ಇವೆ. ಆದರೆ, ಹಳ್ಳ, ಕೆರೆಗಳಲ್ಲಿ ನೀರು ಬತ್ತಿ ಹೋಗಿದ್ದು, ಆಹಾರ ಮತ್ತು ನೀರಿನ ಕೊರತೆ ಮತ್ತು ಸುಡುವ ಬಿಸಿಲಿನ ಮಧ್ಯೆ ಅಲೆದಾಟ ಸಾಮಾನ್ಯವಾಗಿದೆ. ನೀರಿಗಾಗಿ ಹತ್ತಾರು ಕಿ.ಮೀ. ದೂರ ಹೋಗಿ ಬರಬೇಕಾದ ಸ್ಥಿತಿ ಇದೆ. ಕುರಿಗಾಹಿಗಳ ಬದುಕು ಹೈರಾಣವಾಗಿದೆ. ಎತ್ತ ನೋಡಿದರೂ ಬರಡು ಭೂಮಿ ಎದ್ದು ಕಾಣುತ್ತಿದೆ. ಕುರಿ, ಮೇಕೆಗಳನ್ನು ಮೇಯಿಸಲು ಏನೂ ಇಲ್ಲದ ಕಾರಣ ಮತ್ತು ಬಿಸಿಲ ಝಳಕ್ಕೆ ತತ್ತರಿಸಿ ಹೋಗಿದ್ದಾರೆ.
ಕುಡಿಯುವ ನೀರಿನ ತೊಟ್ಟಿ ನಿರ್ಮಿಸಲಿ: ಹೆಚ್ಚಿದ ತಾಪಮಾನದಿಂದ ಗಿಡ ಮರಗಳ ನೆರಳಿನಲ್ಲಿ ವಿಶ್ರಾಂತಿ ಪಡೆಯುವುದು ಅನಿವಾರ್ಯವಾಗಿದೆ. ಬೆಳಗ್ಗೆ 11 ರಿಂದ ಬಿಸಿಲ ಝಳ ಹೆಚ್ಚಾಗುತ್ತಿರುವುದು ಸುಮಾರು ಮೂರು- ನಾಲ್ಕು ಗಂಟೆವರೆಗೂ ನೆರಳಿನಲ್ಲಿಯೇ ಇರಬೇಕಾದ ಪರಿಸ್ಥಿತಿ ಇದೆ. ಬೇಸಿಗೆ ಕಾಲದಲ್ಲಿ ಅಲ್ಲಲ್ಲಿ ಕುಡಿಯುವ ನೀರಿನ ತೊಟ್ಟಿ ನಿರ್ಮಿಸಿದರೆ ಜಾನುವಾರು ಹಾಗೂ ಕುರಿ, ಮೇಕೆಗಳಲ್ಲಿ ಹೆಚ್ಚಿನ ಪ್ರಯೋಜನವಾಗಲಿದೆ.
ಕುರಿಗಳಲ್ಲಿ ಗರ್ಭಪಾತ-ಆತಂಕ: ಕುರಿಗಳಲ್ಲಿ ಗರ್ಭಪಾತ ಆತಂಕ ಈ ಭಾಗದಲ್ಲಿ ಎದುರಾಗುತ್ತಿದೆ. ಇದು ಕುರಿ ಹಾಗೂ ಕುರಿಗಾಹಿಗಳ ಮೇಲೆ ಬರೆ ಎಳೆಯುತ್ತಿದೆ. ಹಸಿರು ತಪ್ಪಲು ತಿಂದು ಸದೃಢವಾಗಿ ಇರಬೇಕಿದ್ದ ಕುರಿ, ಆಡುಗಳು ಆಹಾರವಿಲ್ಲದೆ ಗರ್ಭ ಧರಿಸಿದ ಆಡು ಕುರಿಗಳು ಗರ್ಭಪಾತ(ಕಂದನ) ಹಾಕುತ್ತಿವೆ. ಅಲ್ಲದೆ ಮರಿ ಹಾಕಿದ ತಾಯಿಗಳಲ್ಲಿ ಹಾಲಿನ ಕೊರತೆ ಕಂಡು ಬಂದಿದೆ.
ಕುರಿಗಾರ ನೆರವಿಗೆ ಸರಕಾರ ಧಾವಿಸಲಿ: ಸಾವಯವ ಗೊಬ್ಬರ, ಮಾಂಸ, ಉಣ್ಣೆ ಹಾಗೂ ಚರ್ಮದಿಂದ ಕುರಿ ಸಾಕಣೆ ಉದ್ಯೋಗ ಸರಕಾರಕ್ಕೆ ಕೋಟ್ಯಂತರ ರೂ. ಮೊತ್ತದ ಆದಾಯ ಮೂಲವಾಗಿದೆ. ಬರದ ಬವಣೆಯಿಂದ ತೊಂದರೆಯಲ್ಲಿರುವ ಕುರಿಗಾಹಿಗಳಿಗೆ ಸರಕಾರ ತಕ್ಷಣ ಯೋಜನೆ ಕೈಗೆತ್ತಿಕೊಳ್ಳಬೇಕು ಎಂಬುದು ಈ ಭಾಗದ ಕುರಿಗಾರ ಒಕ್ಕೊರಲಿನ ಕೋರಿಕೆಯಾಗಿದೆ.
ತಾಲೂಕಿನಾದ್ಯಂತ ಕುರಿಗಾರರು ನೀರು ಅರಸುತ್ತಾ ಕಿ.ಮೀ.ಗಟ್ಟಲೆ ಅಲೆದಾಡುವಂತಾಗಿದೆ. ಬಿಸಿಲಿನ ತಾಪಕ್ಕೆ ಭೂಮಿ ಕಾದ ಕಾವಲಿಯಂತಾಗಿದೆ. ಎತ್ತ ನೋಡೊದರೂ ಬರಡು ಭೂಮಿಯೇ ಎದ್ದು ಕಾಣುತ್ತಿದೆ.
ಅಳಲು: ತಾಲೂಕಿನ ಯರೇ ಭಾಗಗಳ ಗ್ರಾಮಗಳ ಕುರಿಗಾಹಿಗಳ ಪರದಾಟ ಹೇಳತೀರದು. ಮಸಾರಿ ಭಾಗದ ಕುರಿಗಾಹಿಗಳು ತೋಟದ ಮಾಲೀಕರ ಮನವೋಲಿಸಿ ಕುರಿಗಳಿಗೆ ಕುಡಿವ ನೀರಿನ ವ್ಯವಸ್ಥೆ ಕಲ್ಪಿಸಿಕೊಂಡಿರುತ್ತಾರೆ. ಭೂಮಿ ಬರಡಾಗಿದ್ದರಿಂದ ಹಳ್ಳದ ಗಿಡ ಕಂಟೆ, ಜಾಲಿ ಕಾಯಿಗಳನ್ನು ಹುಡುಕುತ್ತಾ ಸುಮಾರು 15 ಕಿ.ಮೀ. ದೂರ ನಡೆದರೂ ನೀರು, ಆಹಾರ ಸಿಗುತ್ತಿಲ್ಲ, ಕುರಿಗಳನ್ನು ಮೇಯಿಸಲು ತುಂಬಾ ತೊಂದರೆಯಾಗುತ್ತಿದೆ ಎಂದು ಕುರಿಗಾಹಿ ಅಂಬರೀಶ ಛಲವಾದಿ ಅಳಲು ತೋಡಿಕೊಂಡರು.
•ಮಲ್ಲಪ್ಪ ಮಾಟರಂಗಿ