ಚಳ್ಳಕೆರೆ: ಜಮೀನಿನಲ್ಲಿ ಬೆಳೆದಿದ್ದ ಬೆಳೆಯನ್ನು ಕುರಿಗಳು ಮೇಯ್ದಿದ್ದರಿಂದ ನಿಂದಿಸಿದ್ದಕ್ಕೆ ಮನನೊಂದು ಕುರಿಗಾಹಿ ನಗರಂಗೆರೆಯ ಹೊಲದಲ್ಲಿದ್ದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ತಾಲೂಕಿನ ಡಿ.ಉಪ್ಪಾರಹಟ್ಟಿ ಗ್ರಾಮದ ಈರಣ್ಣ (30) ಆತ್ಮಹತ್ಯೆ ಮಾಡಿಕೊಂಡ ಕುರಿಗಾಹಿ. ಈತ ಪ್ರತಿನಿತ್ಯ ತನ್ನ ಕುರಿಗಳನ್ನು ಸುತ್ತಮುತ್ತಲಿನ ಗೋಮಾಳದಲ್ಲಿ ಮೇಯಿಸುತ್ತಿದ್ದ. ಶನಿವಾರ ಬೆಳಗ್ಗೆ ಆದರ್ಶ ಶಾಲೆ ಪಕ್ಕದಲ್ಲಿರುವ ಟೊಮ್ಯಾಟೋ ಬೆಳೆ ಇದ್ದ ಜಮೀನಿಗೆ ನುಗ್ಗಿದ ಕುರಿಗಳು ಬೆಳೆಯನ್ನು ತಿಂದು ಹಾಕಿವೆ.
ಬೆಳೆ ಬೆಳೆದ ಜಾನಮ್ಮನಹಳ್ಳಿಯ ರೈತ ಅಭಿ, ನೀನು ಕುರಿ ಬಿಟ್ಟು ಮೇಯಿಸಿದ್ದರಿಂದ ನನಗೆ 5 ಲಕ್ಷ ರೂ. ನಷ್ಟ ಉಂಟಾಗಿದೆ. ಇದನ್ನು ನೀನೇ ಭರಿಸಬೇಕು. ಇಲ್ಲದಿದ್ದರೆ ನಿನ್ನ ಕುರಿಗಳನ್ನು ನಾನು ಬಿಡುವುದಿಲ್ಲ. ನೀನು ಎಲ್ಲಿಯಾದರೂ ಹೋಗಿ ಸಾಯಿ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ, ಇದರಿಂದ ಮನನೊಂದ ಈರಣ್ಣ ಮನೆಗೂ ಬಾರದೆ ನಾಪತ್ತೆಯಾಗಿದ್ದ. ವಿಷಯ ತಿಳಿದ ಈರಣ್ಣನ ಪತ್ನಿ ಕವಿತಮ್ಮ ಹಾಗೂ ಅತ್ತೆ ಜಮೀನಿಗೆ ಧಾವಿಸಿದರು. ನಮ್ಮ ಯಜಮಾನರು ಬಂದ ಕೂಡಲೇ ಮಾತನಾಡಿ ಸುಮಾರು 25 ಸಾವಿರ ರೂ. ಕೊಡುವುದಾಗಿ ಭರವಸೆ ನೀಡಿ ಕುರಿಗಳನ್ನು ವಾಪಾಸ್ ತಮ್ಮ ಗ್ರಾಮಕ್ಕೆ ಹೊಡೆದುಕೊಂಡು ಹೋಗಿದ್ದರು.
ಏ. 10ರಂದು ಭಾನುವಾರ ಬೆಳಗ್ಗೆ 6ರ ಸಮಯದಲ್ಲಿ ಹೊಲವೊಂದರ ಬಾವಿಯ ಬಳಿ ಈರಣ್ಣನ ಒಂದು ಚಪ್ಪಲಿ ಇದ್ದು, ಮತ್ತೂಂದು ಚಪ್ಪಲಿ ನೀರಿನಲ್ಲಿ ತೇಲುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದ ಕವಿತಮ್ಮ ಮತ್ತು ಸಂಬಂಧಿಕರು ಪೊಲೀಸರಿಗೆ ಮತ್ತು ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದರು. ಅಗ್ನಿಶಾಮಕದಳದವರು ಈರಣ್ಣನ ಶವವನ್ನು ಹೊರ ತೆಗೆದಿದ್ದಾರೆ. ಗಂಡನ ಸಾವಿಗೆ ಅಭಿ ಕಾರಣವೆಂದು ಆರೋಪಿಸಿ ಕವಿತಮ್ಮ ಚಳ್ಳಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.