Advertisement

ಆಶ್ರಯ ಮನೆ‌ ಕಾಮಗಾರಿ ಸ್ಥಗಿತ!

11:09 AM Feb 08, 2019 | Team Udayavani |

ಕೊಟ್ಟೂರು: ಮರಳು ಸಾಗಾಣೆಯ ಮೇಲೆ ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಿದ ಪರಿಣಾಮ ತಾಲೂಕಿನಲ್ಲಿ ಮರಳಿನ‌ ಅಭಾವ ಸೃಷ್ಟಿಯಾಗಿದ್ದು, ಸರ್ಕಾರದ ವಸತಿ ಯೋಜನೆಗಳಡಿ ನಿರ್ಮಿಸುತ್ತಿರುವ ಮನೆ ಹಾಗೂ ಖಾಸಗಿ ಕಟ್ಟಡಗಳ ನಿರ್ಮಾಣಗಳ ಕಾಮಗಾರಿ ಸ್ಥಗಿತಗೊಂಡಿದೆ.

Advertisement

ತಾಲೂಕಿನ ನಾಗರಕಟ್ಟೆ, ಕೆ.ಅಯ್ಯನಹಳ್ಳಿ, ರಾಂಪುರ ಸೇರಿದಂತೆ ಇನ್ನಿತರ ಹಳ್ಳಿಗಳಲ್ಲಿರುವ ಕೆರೆಯ ಹಿಂಭಾಗ, ಸಣ್ಣ ಪುಟ್ಟ ಕೆರೆಗಳಿಂದ ಸ್ಥಳೀಯರು ತಮಗೆ ಬೇಕಾದಷ್ಟು ಮರಳನ್ನು ಬಂಡಿ, ಟ್ರ್ಯಾಕ್ಟರ್‌ ಮೂಲಕ ಸಾಗಾಣೆ ಮಾಡುತ್ತಿದ್ದರು. ಆದರೆ ಕ್ರಮೇಣ ಮರಳಿಗೆ ಬೇಡಿಕೆ ಹೆಚ್ಚಾಗಿ ಈಗ ಸರ್ಕಾರ ಮರಳು ಸಾಗಾಣೆ ಮೇಲೆ ಕಟ್ಟೆಚ್ಚರ ವಹಿಸಿ ಅಲ್ಲಲ್ಲಿ ಮರಳು ಸಾಗಾಣೆ ಮಾಡುವವರ ವಿರುದ್ಧ ಪ್ರಕರಣಗಳು ದಾಖಲಿಸಲಾಯಿತು. ಇದರಿಂದ ಮನೆ ಕಟ್ಟಿಕೊಳ್ಳುವವರಿಗೆ ನುಂಗಲಾರದ ತುತ್ತಾಗಿದೆ.

ಅಲ್ಲದೆ, ಇದೀಗ ರಾಜ್ಯಾದ್ಯಾಂತ ಹೊಸ ಮರಳು ನೀತಿ ಜಾರಿಯಾಗಿದ್ದು, ಎಲ್ಲಿ ಮರಳನ್ನು ತೆಗೆಯಬೇಕು, ಎಲ್ಲಿ ಮರಳನ್ನು ಸಂಗ್ರಹಿಸಬೇಕು ಎಂಬ ಕುರಿತು ಹೊಸ ಮಾರ್ಗಸೂಚಿ ನಿಗದಿಪಡಿಸಲಾಗಿದೆ. ಇದರ ಅನ್ವಯ ಕೊಟ್ಟೂರು ತಾಲೂಕಿನಲ್ಲಿ ಎಲ್ಲಿಯೂ ಮನೆ ನಿರ್ಮಾಣಕ್ಕೆ ಯೋಗ್ಯ ಮರಳು ಇಲ್ಲವೆಂದು ಘೋಷಿಸಲಾಗಿದೆ. ಅಲ್ಲದೆ, ಅಕ್ರಮ ಮರಳು ಸಾಗಾಣಿಕೆಗೆ ಕಡಿವಾಣ ಬಿದ್ದಿದೆ.

ಮರಳು ಅಭಾವದಿಂದ ಕಾಮಗಾರಿಗಳಿಗೆ ಬಳಸುತ್ತಿರುವ ಎಂ.ಸ್ಯಾಂಡ್‌ನಿಂದ ಕಟ್ಟಡಗಳು ಕೆಲವೇ ದಿನಗಳಲ್ಲಿ ಮನೆಗಳಲ್ಲಿ ಹಾಗೂ ನಿರ್ಮಾಣವಾಗಿರುವ ಕಟ್ಟಡಗಳು ಬಿರುಕು ಬೀಳುತ್ತಿವೆ.

ಹೂವಿನಹಡಗಲಿ ಮತ್ತು ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಲೋಕೋಪಯೋಗಿ ಇಲಾಖೆಯಿಂದ ಮರಳು ಸಂಗ್ರಹ ಮಾಡಲಾಗುತ್ತ್ತದೆ. ಒಂದು ಘನ ಮೀಟರ್‌ ಮರಳಿಗೆ 690 ರೂ. ದರ ನಿಗದಿಪಡಿಸಲಾಗಿದೆ. ಸಾಗಾಣಿಕೆ ಮುನ್ನ ಅನೇಕ ಷರತ್ತು ವಿಧಿಸಲಾಗಿದೆ. ಅಲ್ಲಿಂದ ಕೊಟ್ಟೂರು ಪಟ್ಟಣಕ್ಕೆ ಒಂದು ಟ್ರ್ಯಾಕ್ಟರ್‌ ಲೋಡ್‌ ಮರಳು ತಂದರೆ ಸುಮಾರು 5 ರಿಂದ 6 ಸಾವಿರ ರೂ. ಖರ್ಚು ಬರಲಿದೆ. ಇದರಿಂದ ಬಡವರಿಗೆ ಮರಳು ದುಬಾರಿಯಾಗಿದ್ದು, ಕೂಡಲೇ ಸ್ಥಳೀಯವಾಗಿ ಸಿಗುವ ಮರಳನ್ನು ಬಳಸಿಕೊಳ್ಳಲು ಅವಕಾಶ ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Advertisement

ಸರ್ಕಾರದ ಆಶ್ರಯ ಯೋಜನೆಯಡಿ 150 ಮನೆ ಕೂಲಿ ಕಾರ್ಮಿಕರಿಗೆ ಮಂಜೂರು ಮಾಡಿದ್ದೇವೆ. ಈ ಮನೆಗಳ ನಿರ್ಮಾಣಕ್ಕೆ ಮರಳಿನ ಅವಶ್ಯಕತೆ ಇದ್ದು, ಪಟ್ಟಣದಲ್ಲಿ ಮರಳು ಸಂಗ್ರಹಣೆಗೆ ಲೋಕೋಪಯೋಗಿ ಇಲಾಖೆ ಮುಂದಾಗಬೇಕು.
• ಎಚ್.ಎಫ್‌.ಬಿದರಿ, ಮುಖ್ಯಾಧಿಕಾರಿ, ಪುರಸಭೆ, ಕೊಟ್ಟೂರು.

ಲೋಕೋಪಯೋಗಿ ಇಲಾಖೆಯವರಿಗೆ ಮರಳನ್ನು ಸಂಗ್ರಹಿಸುವಂತೆ ಕೂಡಲೇ ಮೇಲಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೆೊಳ್ಳಲಾಗುವುದು.
•ಕೆ. ಮಂಜುನಾಥ್‌, ತಹಶೀಲ್ದಾರ್‌, ಕೊಟ್ಟೂರು.

ಸರ್ಕಾರ ನೀಡುವ ಸಹಾಯಧನದಿಂದ ಮನೆ ಕಟ್ಟಿಕೊಳ್ಳಲು ಆಗುತ್ತಿಲ್ಲ. ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳುವ ಬಡವರಿಗೆ ಉಚಿತವಾಗಿ ಮರಳು ನೀಡಬೇಕು. ಗುತ್ತಿಗೆದಾರರು, ಟೆಂಡರ್‌ ಮೂಲಕ ಮಾಡಿಕೊಂಡ ಕಾಮಗಾರಿಗಳನ್ನು ಮರಳಿನ ಅಭಾವದಿಂದ ಸಂಪೂರ್ಣ ಕೆಲಸ ಮುಗಿಯದೆ, ಕೂಲಿ ಕಾರ್ಮಿಕರಿಗೂ ಕೆಲಸವಿಲ್ಲದಂತಾಗಿದೆ. ಕೂಡಲೇ ಲೋಕೋಪಯೋಗಿ ಇಲಾಖೆಯು ಕೊಟ್ಟೂರಿನಲ್ಲಿ ಯೋಗ್ಯ ಬೆಲೆಗೆ ಮರಳಿನ‌ ಪಾಯಿಂಟ್ ಮಾಡಬೇಕು.
•ಅಜ್ಜಯ್ಯ, ಗುತ್ತಿಗೆದಾರ.

Advertisement

Udayavani is now on Telegram. Click here to join our channel and stay updated with the latest news.

Next