Advertisement

ಅರ್ಹರಿಗೆ ಸಿಗಬಹುದೇ ಆಶ್ರಯ ಮನೆ?

12:31 PM Jul 03, 2018 | Team Udayavani |

ಬೀದರ: ಸರಕಾರದ ವಸತಿ ಯೋಜನೆ ಈಗ ಬಡವರ ಪಾಲಿಗೆ ಗಗನ ಕುಸುಮವಾಗಿದ್ದು, ನಗರ ಹೊರವಲಯದಲ್ಲಿ ನಿರ್ಮಾಣಗೊಂಡ ಆಶ್ರಯ ಮನೆಗಳು ಬಲಾಡ್ಯ ಖಾಸಗಿ ವ್ಯಕ್ತಿಗಳ ಪಾಲಾಗುತ್ತಿವೆಯೇ ಎಂಬ ಅನುಮಾನ ಕಾಡತೊಡಗಿದೆ.

Advertisement

ನಗರ ಹೊರವಲಯದ ಗೋರನಳ್ಳಿ ಸಮೀಪದ ಸರ್ವೇ ನಂ. 27 ಮತ್ತು 28ರಲ್ಲಿ ಒಟ್ಟು 28 ಎಕರೆ ಭೂಮಿ ಇದ್ದು, ಈ ಪ್ರದೇಶದಲ್ಲಿ ಸುಮಾರು 600 ನಿವೇಶನಗಳನ್ನು ಸಿದ್ಧಪಡಿಸಲಾಗಿದೆ. ಏಳು ವರ್ಷಗಳ ಹಿಂದೆಯೇ ಆಶ್ರಯ ಯೋಜನೆಯಡಿ 200 ಮನೆಗಳನ್ನು ನಗರಸಭೆ ನಿರ್ಮಿಸಿತ್ತು.

ಪ್ರಭಾವಿಗಳಿಂದ ಬಾಡಿಗೆ ವಸೂಲಿ: 200 ಮನೆಗಳ ಪೈಕಿ ಈಗಾಗಲೇ 76 ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದ್ದು, ಇನ್ನೂ 124 ಮನೆಗಳನ್ನು ಹಂಚಿಕೆ ಮಾಡಬೇಕಾಗಿದೆ. ಈ ಮಧ್ಯದಲ್ಲಿ ಖಾಲಿ ಇರುವ ಮನೆಗಳನ್ನು ಖಾಸಗಿ ಪ್ರಭಾವಿ ವ್ಯಕ್ತಿಗಳು ತಮ್ಮ ಪ್ರಭಾವ ಬಳಸಿಕೊಂಡು ಅತಿಕ್ರಮಿಸಿಕೊಂಡಿದ್ದಾರೆ. ಅಲ್ಲದೇ ತಮಗೆ ಬೇಕಾದವರಿಗೆ ಹೆಚ್ಚಿನ ಅಡ್ವಾನ್ಸ್‌ ಹಾಗೂ ಬಾಡಿಗೆ ನಿಗದಿಪಡಿಸಿ ವಾಸಕ್ಕೆ ನೀಡುತ್ತಿದ್ದಾರೆ.  ಹಾಗಾಗಿ ಅರ್ಹ ಫಲಾನುಭವಿಗಳಿಗೆ ಆಶ್ರಯ ಮನೆಗಳು ದೊರಕುವುದು ಅನುಮಾನವಾಗಿದೆ. 

ಯಾರಿಗೆ ಸಿಗಬೇಕು ಮನೆ: ನಗರದ ನಿರ್ಗತಿಕರು, ಬಡತನ ರೇಖೆಗಿಂತ ಕೆಳಗಿರುವವರು, ವಿಧವೆಯರಿಗೆ, ಅಂಗವಿಕಲರಿಗೆ, ತೃತೀಯ ಲಿಂಗಿಗಳಿಗೆ ಪ್ರಥಮ ಆದ್ಯತೆ ನೀಡಬೇಕಿದೆ. ಅಲ್ಲದೆ ನಗರದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಮನೆ ಕಳೆದುಕೊಂಡ ಫಲಾನುಭವಿಗಳಿಗೆ ಮೊದಲ ಪ್ರಾತಿನಿಧ್ಯ ನೀಡಿ ಮನೆ ಹಂಚಿಕೆ ಮಾಡಬೇಕು ಎಂದು ಈ ಹಿಂದೆ ಚರ್ಚೆ ನಡೆಸಲಾಗಿದ್ದು, ಇಂದಿಗೂ ಕೂಡ ಅಧಿಕಾರಿಗಳು ಮನೆ ಹಂಚಿಕೆಗೆ ಮುಂದಾಗುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಸೌಲಭ್ಯಗಳು ಇಲ್ಲ: ಆಶ್ರಯ ಯೋಜನೆಯಡಿ ನಿರ್ಮಾಣಗೊಂಡ ಮನೆಗಳ ಸುತ್ತಲಿನ ಪ್ರದೇಶದಲ್ಲಿ ಮೂಲ ಸೌಕರ್ಯಗಳ ಕೊರತೆ ಇದೆ. ಮನೆ ಹಂಚಿಕೆಯಲ್ಲಿ ಆಯ್ಕೆಯಾದ ಅನೇಕರು ಕೂಡ ಆ ಮನೆಗಳಲ್ಲಿ ವಾಸಮಾಡದೇ ಬೇರೆಕಡೆಗೆ ವಾಸಿಸುತ್ತಿರುವುದು ಸಾಮಾನ್ಯವಾಗಿದೆ. ಸುಗಮ ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳ ಕೊರತೆ ಇದೆ ಎಂಬ ನೆಪ ಹೇಳಿ ಹಕ್ಕು ಪತ್ರಹೊಂದಿದ ಫಲಾನುಭವಿಗಳು ಜಾರಿಕೊಳ್ಳುತ್ತಿದ್ದಾರೆ.

Advertisement

ಮನೆಗೆ ಬೀಗ: ಸಧ್ಯ ಹಕ್ಕು ಪತ್ರಗಳನ್ನು ಹೊಂದಿರದ ಅನೇಕ ಖಾಸಗಿ ವ್ಯಕ್ತಿಗಳು ಸರ್ಕಾರದ ಮನೆಗಳಲ್ಲಿ ವಾಸವಾಗಿದ್ದಾರೆ. ಮನೆ ತಮ್ಮದು ಎಂದು ಬೀಗ ಹಾಕಿ ಬಿಂದಾಸ್‌ ಆಗಿ ವಾಸಿಸಲು ಆರಂಭಿಸಿದ್ದಾರೆ. ಅಲ್ಲದೇ ಒಂದೇ ಮನೆಗೆ ಎರಡು ಬೀಗ ಜಡೆದಿರುವುದು ಕಂಡುಬಂದಿದೆ. ಮನೆಗಳಿಗೆ ಬೀಗ ಹಾಕಿಕೊಂಡವರು ದಿನಕ್ಕೊಮ್ಮೆ ಬಂದು ನೋಡಿ ಮನೆ ಖಾಯಂ ಬಗ್ಗೆ ಖಾತ್ರಿಪಡಿಸಿಕೊಳ್ಳುತ್ತಿದ್ದಾರೆ ಎಂಬುದು ಸ್ಥಳೀಯರ ಮಾತು. ಅಲ್ಲದೇ ಸದ್ಯ ಪ್ರವೇಶ ಮಾಡಿದ ಮನೆಗಳು ಮುಂದಿನ ದಿನಗಳಲ್ಲಿ ತಮಗೇ ದೊರೆಯಲಿದೆ ಎಂಬ ಆತ್ಮವಿಶ್ವಾಸವನ್ನು ಕೂಡ ಅವರು ವ್ಯಕ್ತಪಡಿಸುತ್ತಿದ್ದಾರೆ.
ಆದರೆ, ಹಂಚಿಕೆಯಾಗದ ಮನೆಗಳಲ್ಲಿ ಅಕ್ರಮವಾಗಿ ಠಿಕಾಣಿ ಹೂಡಿರುವ ಖಾಸಗಿಯವರನ್ನು ಒಕ್ಕಲೆಬ್ಬಿಸಿ ಅರ್ಹರಿಗೆ ಮನೆಗಳನ್ನು ವಿತರಿಸಲಾಗುತ್ತದೆಯೇ ಎಂಬುದು ಯಕ್ಷ ಪ್ರಶ್ನೆಯಾಗಿದೆ

600 ನಿವೇಶನಗಳಲ್ಲಿ 200 ಮನೆಗಳನ್ನು ನಿರ್ಮಿಸಲಾಗಿದೆ. ಈಗಾಗಲೇ 76 ಮನೆಗಳನ್ನು ಹಂಚಿಕೆ ಮಾಡಲಾಗಿದ್ದು, 124 ಮನೆಗಳನ್ನು ಹಂಚಲು ಸಿದ್ಧತೆ ನಡೆಸಲಾಗುತ್ತಿದೆ. ಆಶ್ರಯ ಸಮಿತಿಯವರು ಅರ್ಹ ಫಲಾನುಭವಿಗಳ ಪಟ್ಟಿ ನೀಡಿದ ತಕ್ಷಣ ಹಂಚಿಕೆ ಕಾರ್ಯ ಆರಂಭಿಸಲಾಗುವುದು. ಈ
ಹಿಂದೆ ಕೂಡ ಖಾಸಗಿ ವ್ಯಕ್ತಿಗಳು ಮನೆಗಳನ್ನು ಅತಿಕ್ರಮಣ ಮಾಡಿಕೊಂಡ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಖಾಲಿ ಮಾಡಿಸುವ ಕೆಲಸ ಮಾಡಲಾಗಿತ್ತು. ಇದೀಗ ಅತಿಕ್ರಮಣ ಮಾಡಿಕೊಂಡ ಖಾಸಗಿ ವ್ಯಕ್ತಿಗಳು ಎಷ್ಟೇ ಬಲಾಡ್ಯರಾದರು ಕೂಡ ಕಾನೂನು ಕ್ರಮ ಕೈಗೊಂಡು ಅರ್ಹರಿಗೆ ಮನೆ ಸಿಗುವಂತೆ ಮಾಡಲಾಗುವುದು.
  ಮನೋಹರ್‌, ನಗರಸಭೆ ಆಯುಕ್ತ ಬೀದರ್‌

ದುರ್ಯೋಧನ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next