Advertisement

ಲಾಕ್‌ಡೌನ್‌ ಬಾಧಿತರಿಗೆ ಆಶ್ರಯ, ಉಪಚಾರ

12:05 PM Apr 18, 2020 | mahesh |

ಬೆಂಗಳೂರು: ಲಾಕ್‌ಡೌನ್‌ನಿಂದ ತೊಂದರೆಗೆ ಸಿಲುಕಿದವರು, ಅಲೆಮಾರಿ ಜನಾಂಗದವರು, ಅಸಂಘಟಿತ ಕಾರ್ಮಿಕರು, ತೊಂದರೆಗೊಳಗಾದ ಇತರೆ ಜಿಲ್ಲೆ ಮತ್ತು ರಾಜ್ಯಗಳ ಜನರಿಗೆ ಸಮಾಜ ಕಲ್ಯಾಣ ಇಲಾಖೆ ಅಧೀನದ ವಸತಿ ಶಾಲೆ, ವಸತಿ ನಿಲಯಗಳಲ್ಲಿ ಆಶ್ರಯ ಕಲ್ಪಿಸಿ ಅಗತ್ಯ ಸೌಲಭ್ಯ ನೀಡಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಸಚಿವ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

Advertisement

ತಮ್ಮ ಗೃಹ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ -19 ಸೋಂಕು ನಿಯಂತ್ರಣಕ್ಕಾಗಿ ಇಲಾಖೆ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಸಮಾಜ ಕಲ್ಯಾಣ ಇಲಾಖೆಯ 44 ವಸತಿ ನಿಲಯ, 54 ಮೊರಾರ್ಜಿ ದೇಸಾಯಿ ವಸತಿ ಶಾಲೆ
ಒಳಗೊಂಡಂತೆ ಒಟ್ಟು 98 ವಸತಿ ಶಾಲೆ, ವಸತಿ ನಿಯಲಗಳಲ್ಲಿ 784 ಮಂದಿಯನ್ನು ಕ್ವಾರೆಂಟೈನ್‌ನಲ್ಲಿ ಇಡಲಾಗಿದೆ ಎಂದು ತಿಳಿಸಿದರು.

ಒಟ್ಟು 800 ವಸತಿ ಶಾಲೆ ಹಾಗೂ 2000 ವಿದ್ಯಾರ್ಥಿ ನಿಲಯಗಳನ್ನು ಆಶ್ರಯ ತಾಣಗಳನ್ನಾಗಿ ಗುರುತಿಸಲಾಗಿದೆ. ಲಾಕ್‌ಡೌನ್‌ನಿಂದ ತೊಂದರೆಗೆ ಸಿಲುಕಿದವರು, ನಿರಾಶ್ರಿತರು, ಅಸಂಘಟಿತ ಕೂಲಿ ಕಾರ್ಮಿಕರು, ಅಲೆಮಾರಿ ಜನಾಂಗದವರು ಹಾಗೂ ಆಶ್ರಯ ಕೋರಿ ಬಂದಂತಹ ಒಟ್ಟು 5108 ಮಂದಿಗೆ ಇಲಾಖೆಯ 92 ವಸತಿ ಶಾಲೆ, ವಸತಿ ನಿಲಯಗಳಲ್ಲಿ ಆಶ್ರಯ ಕಲ್ಪಿಸಲಾಗಿದೆ ಎಂದು ಹೇಳಿದರು.

ತಮಿಳುನಾಡು, ಆಂಧ್ರಪ್ರದೇಶ, ಮಿಜೋರಾಂ, ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಸೇರಿದಂತೆ ನಾನಾ ರಾಜ್ಯಗಳಿಂದ ಆಗಮಿಸಿ ಸಂಕಷ್ಟಕ್ಕೆ ಸಿಲುಕಿರುವವರಿಗೆ ವಿದ್ಯಾರ್ಥಿ ನಿಲಯಗಳಲ್ಲಿ ಆಶ್ರಯ ಕಲ್ಪಿಸಲಾಗಿದೆ. ಪ್ರಧಾನ ಕಾರ್ಯದರ್ಶಿ ಜಿ.ಕುಮಾರ ನಾಯಕ್‌ ನೇತೃತ್ವದಲ್ಲಿ ಇಲಾಖೆ ಅಧಿಕಾರಿಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸಿ ಅಗತ್ಯ ಕ್ರಮ ಕೈಗೊಂಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ತೊಂದರೆಗೊಳಗಾದ ಅಸಂಘಟಿತ ಕಾರ್ಮಿಕರು, ಆಶ್ರಯದಲ್ಲಿರವವರಿಗೆ ನಿತ್ಯ ತಿಂಡಿ, ಊಟೋಪಚಾರ ನೀಡಿ, ಆರೈಕೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಈಗಾಗಲೇ 1.26 ಕೋಟಿ ಫಲಾನುಭವಿಗಳಿಗೆ ಎರಡು ತಿಂಗಳ ಪಡಿತರ ವಿತರಿಸಲಾಗಿದೆ. “ಉಜ್ವಲ’ ಯೋಜನೆಯ ಫಲಾನುಭವಿಗಳಿಗೆ ತಲಾ ಮೂರು ಅಡುಗೆ ಅನಿಲ ಸಿಲಿಂಡರ್‌ ವಿತರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಜಿ.ಕುಮಾರ ನಾಯಕ್‌, ಎಸ್‌ಸಿಪಿ- ಟಿಎಸ್‌ಪಿ ಯೋಜನೆ ಸಲಹೆಗಾರ ಇ. ವೆಂಕಟಯ್ಯ, ಆಯುಕ್ತ ಪೆದ್ದಪ್ಪಯ್ಯ ಉಪಸ್ಥಿತರಿದ್ದರು.

Advertisement

ನಿರಾಶ್ರಿತರಿಗೆ ಧೈರ್ಯ ತುಂಬಿದ ಡಿಸಿಎಂ
ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ಆಶ್ರಯ ಪಡೆದಿರುವ ಲಾಕ್‌ಡೌನ್‌ ಬಾಧಿತರನ್ನು ಶುಕ್ರವಾರ ಭೇಟಿಯಾಗಿ
ಸಮಾಲೋಚನೆ ನಡೆಸಿದ ಸಮಾಜ ಕಲ್ಯಾಣ ಸಚಿವರಾದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಸ್ವತಃ ಊಟ ಬಡಿಸಿ ಧೈರ್ಯ
ತುಂಬುವ ಕೆಲಸ ಮಾಡಿದರು.

ಈಶಾನ್ಯ ರಾಜ್ಯಗಳು ಸೇರಿದಂತೆ ಇತರೆ ರಾಜ್ಯಗಳಿಂದ ಆಗಮಿಸಿ ಲಾಕ್‌ಡೌನ್‌ನಿಂದ ಬಾಧತರಾದವರಿಗೆ ಆಶ್ರಯ ಕಲ್ಪಿಸಿರುವ ಜಯನಗರ ಮಾರೇನಹಳ್ಳಿ ವಿದ್ಯಾರ್ಥಿ ನಿಲಯ ಹಾಗೂ ಎಂ.ಜಿ. ರಸ್ತೆಯ ವಸತಿ ನಿಲಯಕ್ಕೆ ಶುಕ್ರವಾರ ಭೇಟಿ ನೀಡಿದ ಗೋವಿಂದ ಕಾರಜೋಳ ಅವರು ಆಶ್ರಯ
ಪಡೆದವರೊಂದಿಗೆ ಸಮಾಲೋಚನೆ ನಡೆಸಿದರು.

ಇಲಾಖೆಯಿಂದ ನೀಡುತ್ತಿರುವ ಊಟೋಪಚಾರ, ಆರೈಕೆ, ಆರೋಗ್ಯ ತಪಾಸಣೆ, ಸ್ವತ್ಛತೆ, ಸಿಬ್ಬಂದಿ ನಡವಳಿಕೆ ಇತರೆ ಸೌಲಭ್ಯಗಳ ಬಗ್ಗೆ ವಿಚಾರಿಸಿದರು.
ಮಾಸ್ಕ್ ಸೇರಿದಂತ ನಿತ್ಯ ಕರ್ಮಗಳಿಗೆ ಅಗತ್ಯವಾದ ವಸ್ತುಗಳು, ಕರವಸ್ತ್ರ, ಟವೆಲ್‌, ಉಡುಪು, ಔಷಧೋಪಚಾರದ ಗುಣಮಟ್ಟ ಪರಿಶೀಲಿಸಿದರು. ನಿರಾಶ್ರಿತರು ವಾಸ್ತವ್ಯ ಹೂಡಿರುವ ವಸತಿ ಕೊಠಡಿಗಳಿಗೆ ತೆರಳಿ ಬೆಡ್‌, ಬೆಡ್‌ಶೀಟ್‌, ಉಡುಪು, ಸ್ವತ್ಛತೆಯನ್ನೂ ಪರಿಶೀಲಿಸಿದರು. ಅಡುಗೆ ಕೋಣೆಗೆ
ತೆರಳಿ ಸಾಮಗ್ರಿ ದಾಸ್ತಾನು ಪರಿಶೀಲಿಸಿ ಶುದ್ಧ ಹಾಗೂ ಗುಣಮಟ್ಟದ ಆಹಾರ ವಿತರಿಸುವಂತೆ ಸೂಚಿಸಿದರು. ಬಳಿಕ ಭೋಜನಾಲಯದಲ್ಲಿ ಉಪಮುಖ್ಯ
ಮಂತ್ರಿಗಳು ಊಟ ಬಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next