ಅಬುಧಾಬಿ : ಅಬುಧಾಬಿಯಲ್ಲಿನ್ನು ಮುಸ್ಲಿಮೇತರ ವ್ಯಕ್ತಿಗಳು ಪರಸ್ಪರ ಮದುವೆಯಾಗಲು, ವಿಚ್ಛೇದನ ಪಡೆಯಲು, ಮಗುವಿನ ಪಾಲನೆಯ ಹೊಣೆ ಹೊರುವ ಅವಕಾಶ ಕಲ್ಪಿಸಲಾಗಿದೆ. ಯುಎಇಯ ಏಳು ಎಮಿರೇಟ್ಸ್‌ಗಳ ಒಕ್ಕೂಟದ ಅಧ್ಯಕ್ಷರಾಗಿರುವ ಅಬುಧಾಬಿಯ ಶೇಖ್ ಖಲೀಫಾ ಬಿನ್ ಝಾಯೇದ್ ಅಲ್-ನಹಯಾನ್ ಈ ಕುರಿತಂತೆ ಆದೇಶ ಹೊರಡಿಸಿದ್ದಾರೆ.
ಮುಸ್ಲಿಮೇತರ ಕುಟುಂಬಗಳ ವ್ಯಾಜ್ಯಗಳನ್ನು ವಿಚಾರಣೆ ನಡೆಸುವ ನಿಟ್ಟಿನಲ್ಲಿ ಅಬುಧಾಬಿಯಲ್ಲಿ ಪ್ರತ್ಯೇಕ ನ್ಯಾಯಾಲಯವನ್ನು ಸ್ಥಾಪಿಸಲಾಗುತ್ತದೆ. ಆ ನ್ಯಾಯಾಲಯವು, ಇಂಗ್ಲೀಷ್ ಮತ್ತು ಅರೇಬಿಕ್ ಭಾಷೆಗಳಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಸಾಮಾನ್ಯವಾಗಿ, ಯುಎಇ ಎಮಿರೇಟ್ಸ್ ಒಕ್ಕೂಟದಲ್ಲಿ ಶೆರಿಯಾ ಕಾನೂನುಗಳ ಆಧಾರದಲ್ಲಿ ಮದುವೆ, ವಿಚ್ಛೇದನ, ಮಕ್ಕಳ ಪಾಲನೆ ಹೊಣೆ ಇತ್ಯಾದಿ ಕೌಟುಂಬಿಕ ಕಾನೂನುಗಳು ಚಾಲ್ತಿಯಲ್ಲಿವೆ. ಆದರೆ, ಮುಸ್ಲಿಮೇತರರಿಗೂ ಇದೇ ರೀತಿಯ ಕಾನೂನಿನ ಅನುಕೂಲಗಳನ್ನು ಕಲ್ಪಿಸಿರುವುದು ಅಬುಧಾಬಿಯಲ್ಲೇ ಮೊದಲು. ಅಲ್ಲದೆ, ಮುಸ್ಲಿಮೇತರರಿಗೂ ಕೌಟುಂಬಿಕ ಕಾನೂನುಗಳ ಸವಲತ್ತು ನೀಡಿದ ಮೊದಲ ಇಸ್ಲಾಂ ರಾಷ್ಟ್ರವೆಂಬ ಹೆಗ್ಗಳಿಕೆ ಅಬುಧಾಬಿಯ ಪಾಲಾಗಿದೆ.
ಪ್ರತಿಭೆಗಳಿಗೆ ಹಾಗೂ ಕೌಶಲ್ಯಧಾರಿಗಳಿಗೆ ಸ್ವರ್ಗವೆನಿಸಿರುವ ಯುಎಇ ದೇಶಗಳತ್ತ ಜಗತ್ತಿನ ನಾನಾ ಪ್ರತಿಭೆಗಳನ್ನು ಸೆಳೆಯುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಶೇಖ್ ಖಲೀಫಾ ತಿಳಿಸಿದ್ದಾರೆ.
ಇದನ್ನೂ ಓದಿ : ಡ್ರೋನ್ ಮೂಲಕ ದಾಳಿ ನಡೆಸಿ ಇರಾಕ್ ಪ್ರಧಾನಿ ಹತ್ಯೆಗೆ ಯತ್ನ
ಇಂಥ ಮಹತ್ವದ ಬದಲಾವಣೆಯನ್ನು ಕೈಗೊಂಡಿರುವುದು ಇದೇ ಮೊದಲೇನಲ್ಲ. ಕೆಲವು ತಿಂಗಳುಗಳ ಹಿಂದೆಯೇ, ಅಲ್ಲಿನ ಕಾನೂನುಗಳಲ್ಲಿ ಮಹತ್ವದ ಬದಲಾವಣೆಯನ್ನು ಅಬುಧಾಬಿ ಸರ್ಕಾರ ಮಾಡಿತ್ತು. ವಿವಾಹ ಪೂರ್ವ ಲೈಂಗಿಕ ಸಂಬಂಧಗಳನ್ನು, ಮದ್ಯಪಾನವನ್ನು ಅಪರಾಧವೆಂದು ಪರಿಗಣಿಸದೇ ಇರುವುದು, ಮರ್ಯಾದೆಗೇಡು ಹತ್ಯೆಗೆ ಬೆಂಬಲ ನೀಡುವಂಥ ಕಾನೂನುಗಳನ್ನು ರದ್ದು ಮಾಡುವಂಥ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿತ್ತು. ಇದರ ಜೊತೆಗೆ, ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಪ್ರೋತ್ಸಾಹಿಸಲು ದೀರ್ಘಾವಧಿ ವೀಸಾ ನೀಡಲೂ ಸಮ್ಮತಿಸಲಾಗಿತ್ತು.