ಇಸ್ಲಮಾಬಾದ್: ಹಿಂದಿನ ಪ್ರಧಾನಿ ಇಮ್ರಾನ್ ಖಾನ್ ಅವರ ಮೇಲೆ ನಡೆದ ದಾಳಿಯಲ್ಲಿ ತಮ್ಮ, ಆಂತರಿಕ ಸಚಿವರ ಮತ್ತು ಹಿರಿಯ ಮಿಲಿಟರಿ ಅಧಿಕಾರಿಗಳ ಪಾತ್ರವಿದೆ ಎಂದು ಸಾಬೀತಾದರೆ ತಾನು ರಾಜೀನಾಮೆ ನೀಡುವುದಾಗಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದಾರೆ.
ಇಮ್ರಾನ್ ಖಾನ್ ಮೇಲಿನ ದಾಳಿಗೆ ಸಂಬಂಧಿಸಿದ ಯಾವುದೇ ಪಿತೂರಿಯಲ್ಲಿ ಭಾಗಿಯಾಗಿರುವುದು ಕಂಡುಬಂದರೆ ನಾನು ಒಂದು ನಿಮಿಷವೂ ಪ್ರಧಾನಿಯಾಗಿ ಉಳಿಯುವುದಿಲ್ಲ ಎಂದು ಶೆಹಬಾಜ್ ಹೇಳಿದ್ದಾರೆ.
70ರ ಹರೆಯದ ಇಮ್ರಾನ್ ಖಾನ್ ಅವರು ಗುರುವಾರ ಪಂಜಾಬ್ ಪ್ರಾಂತ್ಯದ ವಜೀರಾಬಾದ್ ಪ್ರದೇಶದಲ್ಲಿ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಇಬ್ಬರು ಬಂದೂಕುಧಾರಿಗಳು ಗುಂಡು ಹಾರಿಸಿದ್ದು, ಖಾನ್ ಬಲಗಾಲಿಗೆ ಗುಂಡು ತಗುಲಿದೆ. ಘಟನೆಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದರೆ, ಕೆಲವು ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ನಾಯಕರು ಗಾಯಗೊಂಡಿದ್ದಾರೆ.
ಇದನ್ನೂ ಓದಿ:ಶಾಕ್ ಕೊಟ್ಟ ನೆದರ್ಲ್ಯಾಂಡ್ ; ದ.ಆಫ್ರಿಕಾ ಮನೆಗೆ, ಭಾರತ ಸೆಮಿಗೆ; ಅದೃಷ್ಟ ಪಾಕ್-ಬಾಂಗ್ಲಾಗೆ
ತನ್ನ ಮೇಲಿನ ದಾಳಿಯ ಒಂದು ದಿನದ ನಂತರ ಇಮ್ರಾನ್ ಖಾನ್ ಅವರು ಪ್ರಧಾನಿ ಶೆಹಬಾಜ್ ಷರೀಫ್, ಆಂತರಿಕ ಸಚಿವ ರಾಣಾ ಸನಾವುಲ್ಲಾ ಮತ್ತು ಮೇಜರ್ ಜನರಲ್ ಫೈಸಲ್ ನಸೀರ್ ಅವರ ಮೇಲೆ ಸಂಚು ರೂಪಿಸಿದ ಆರೋಪ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಷರೀಫ್, ಈ ಸಂಚಿನಲ್ಲಿ ನಾನು ಅಥವಾ ಆಂತರಿಕ ಸಚಿವರು ಅಥವಾ ಸೇನಾಧಿಕಾರಿ ಭಾಗಿಯಾಗಿದ್ದಾರೆ ಎಂಬುದಕ್ಕೆ ಖಾನ್ ಪುರಾವೆ ನೀಡಿದರೆ, ನಾನು ಒಂದು ನಿಮಿಷವೂ ಪ್ರಧಾನಿಯಾಗುವುದಿಲ್ಲ, ನಾನು ರಾಜೀನಾಮೆ ನೀಡುತ್ತೇನೆ ಎಂದು ಹೇಳಿದರು.