ಇಸ್ಲಮಾಬಾದ್: ಪಾಕಿಸ್ಥಾನದ ರಾಜಕೀಯದಲ್ಲಿ ಮತ್ತೆ ಬದಲಾವಣೆಯಾಗಿದೆ. ಪ್ರಧಾನಿಯಾಗಿದ್ದ ಇಮ್ರಾನ್ ಖಾನ್ ಅವರು ಶನಿವಾರ ರಾತ್ರಿ ನಡೆದ ವಿಶ್ವಾಸಮತ ಮಂಡನೆಯಲ್ಲಿ ಸೋಲನುಭವಿಸಿದ್ದು, ಪ್ರಧಾನಿ ಪಟ್ಟ ಕಳೆದುಕೊಂಡಿದ್ದಾರೆ.
ಇದೀಗ ಪಾಕಿಸ್ಥಾನದಲ್ಲಿ ಹೊಸ ಪ್ರಧಾನಿ ಆಯ್ಕೆಯಾಗಬೇಕಿದೆ. ವಿರೋಧ ಪಕ್ಷದ ನಾಯಕ ಶೆಹಬಾಜ್ ಶರೀಫ್ ಅವರು ಪಾಕಿಸ್ತಾನದ ಮುಂದಿನ ಪ್ರಧಾನಿಯಾಗಲು ಮುಂಚೂಣಿಯಲ್ಲಿದ್ದಾರೆ.
ಮೂರು ಬಾರಿ ಪ್ರಧಾನಿಯಾಗಿದ್ದ ನವಾಜ್ ಶರೀಫ್ ಅವರ ಸಹೋದರನಾಗಿರುವ ಶೆಹಬಾಜ್, ದೇಶದ ಹೊರಗೆ ಅಷ್ಟೊಂದು ಪ್ರಸಿದ್ದರಲ್ಲದಿದ್ದರೂ ಪಾಕಿಸ್ಥಾನದಲ್ಲಿ ಉತ್ತಮ ಹೆಸರು ಗಳಿಸಿದ್ದಾರೆ.
1999 ರಲ್ಲಿ ಪಾಕಿಸ್ತಾನದಲ್ಲಿ ಮಿಲಿಟರಿ ದಂಗೆಯ ನಂತರ ಶಹಬಾಜ್ ಜೈಲಿನಲ್ಲಿದ್ದರು, ಬಳಿಕ ಸೌದಿ ಅರೇಬಿಯಾಕ್ಕೆ ಗಡಿಪಾರಾಗಿದ್ದರು. 2007 ರಲ್ಲಿ ದೇಶಕ್ಕೆ ಮರಳಿದ ಅವರು, ಪನಾಮ ಪೇಪರ್ಸ್ ಲೀಕ್ ಸಂಬಂಧಿಸಿದ ಆಸ್ತಿಯನ್ನು ಮರೆಮಾಚುವ ಆರೋಪದ ಮೇಲೆ 2017 ರಲ್ಲಿ ನವಾಜ್ ಷರೀಫ್ ತಪ್ಪಿತಸ್ಥರೆಂದು ಸಾಬೀತಾದ ನಂತರ ರಾಷ್ಟ್ರೀಯ ರಂಗಕ್ಕೆ ಪ್ರವೇಶಿಸಿದರು.
ನವಾಜ್ ಷರೀಫ್‌ಗಿಂತ ಭಿನ್ನವಾಗಿ, ಶಹಬಾಜ್ ಅವರು ಪಾಕಿಸ್ಥಾನದಲ್ಲಿ ಸಾಂಪ್ರದಾಯಿಕವಾಗಿ ವಿದೇಶಿ ಮತ್ತು ರಕ್ಷಣಾ ನೀತಿಯನ್ನು ನಿಯಂತ್ರಿಸುವ ಪಾಕಿಸ್ತಾನದ ಮಿಲಿಟರಿಯೊಂದಿಗೆ ಸೌಹಾರ್ದಯುತ ಸಂಬಂಧವನ್ನು ಹೊಂದಿದ್ದಾರೆ ಎಂದು ವಿಶ್ಲೇಷಕರು ಹೇಳುತ್ತಾರೆ.
ಇದನ್ನೂ ಓದಿ:ಕ್ಲೀನ್ ಬೌಲ್ಡ್ ಆದ ಇಮ್ರಾನ್: ವಿಶ್ವಾಸಮತ ಕಳೆದುಕೊಂಡು ಪಟ್ಟ ಬಿಟ್ಟ ಪಾಕ್ ಪ್ರಧಾನಿ
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿಯಾಗಿ, ಬೀಜಿಂಗ್-ನಿಧಿ ಯೋಜನೆಗಳಲ್ಲಿ ಚೀನಾದೊಂದಿಗೆ ಶೆಹಬಾಜ್ ನಿಕಟವಾಗಿ ಕೆಲಸ ಮಾಡಿದ್ದರು.
ಅಮೆರಿಕದೊಂದಿಗಿನ ಇಮ್ರಾನ್ ಖಾನ್ ರ ವಿರೋಧಾತ್ಮಕ ಸಂಬಂಧಕ್ಕೆ ವ್ಯತಿರಿಕ್ತವಾಗಿ, ಯುಎಸ್ ನೊಂದಿಗಿನ ಸಂಬಂಧವು ಪಾಕಿಸ್ತಾನಕ್ಕೆ ನಿರ್ಣಾಯಕವಾಗಿದೆ ಎಂದು ಅವರು ಕಳೆದ ವಾರ ಸಂದರ್ಶನವೊಂದರಲ್ಲಿ ಹೇಳಿದ್ದರು.