ಶೀತಲ್ ಶೆಟ್ಟಿ ನಿರ್ದೇಶನದ ಚೊಚ್ಚಲ ಚಿತ್ರ “ವಿಂಡೋಸೀಟ್’ ಇಂದು ತೆರೆಕಾಣುತ್ತಿದೆ. ಜಾಕ್ ಮಂಜು ನಿರ್ಮಾಣದಲ್ಲಿ ತಯಾರಾದ ಮರ್ಡರ್ ಮಿಸ್ಟ್ರಿ ಚಿತ್ರ ಇದಾಗಿದ್ದು, ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಹಾಡು, ಟ್ರೇಲರ್‌ಗೆ ಉತ್ತಮ ಪ್ರತಿಕ್ರಿಯೆ ದೊರೆತಿರುವುದರಿಂದ ಸಿನಿಮಾವನ್ನು ಜನ ಇಷ್ಟಪಡುತ್ತಾರೆ ಎಂಬ ವಿಶ್ವಾಸ ಚಿತ್ರತಂಡಕ್ಕಿದೆ.
ಚಿತ್ರದ ಕುರಿತು ಮಾತನಾಡಿದ ನಿರ್ದೇಶಕಿ ಶೀತಲ್ ಶೆಟ್ಟಿ , “ವಿಂಡೋಸೀಟ್ ಇದು ಒಂದು ಮರ್ಡರ್ ಮಿಸ್ಟ್ರಿ ಕಥೆ. ತಾಳಗುಪ್ಪಾದಿಂದ ಸಾಗರದವರೆಗಿನ ನಿತ್ಯದ ಟ್ರೈನ್ ಜರ್ನಿಯಲ್ಲಿ ಸಾಗುವ ನಾಯಕನ ಬದುಕಿನಲ್ಲಿ ಏನೆಲ್ಲಾ ಘಟನೆಗಳು ನಡೆಯುತ್ತವೆ, ಅವನ ಬದುಕನ್ನು ಬದಲಿಸುವ ಒಂದು ಘಟನೆಗಳ ಸುತ್ತ ಚಿತ್ರ ಸಾಗುತ್ತದೆ. ಪ್ರೇಕ್ಷಕರಿಗೆ ಬೋರ್ ಅನಿಸದ ರೀತಿಯಲ್ಲಿ ಭಿನ್ನವಾಗಿ ಚಿತ್ರ ಮಾಡಿದ್ದೇವೆ. ಒಬ್ಬ ನಿರೂಪಕಿ ಹೇಗೆ ಚಿತ್ರ ಮಾಡುತ್ತಾರೆ ಎಂಬ ಸಣ್ಣ ಸಂಶಯವನ್ನು ತೋರದೆ, ಎಲ್ಲಾ ಕಲಾವಿದರು, ತಂತ್ರಜ್ಞರು ನನಗೆ ತುಂಬಾ ಸಪೋರ್ಟ್ ಮಾಡಿದರು. ಹಾಗೇ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಪ್ರಚಾರದ ವೇಳೆ ಉತ್ತಮ ಪ್ರತಿಕ್ರಿಯೆ ಸಹ ದೊರೆತಿದೆ’ ಎಂದರು.
ನಾಯಕಿ ಅಮೃತಾ ಅಯ್ಯಂಗಾರ್ ಮಾತನಾಡಿ, “ಮಹಿಳಾ ನಿರ್ದೇಶಕರು ಅಂದರೆ ಡ್ರಾಮಾ, ಕಾವ್ಯಾತ್ಮಕ ಕಥೆಗಳನ್ನು ಮಾಡುತ್ತಾರೆ ಎಂದುಕೊಂಡಿದ್ದೆ. ಆದರೆ ಇವರು ಮರ್ಡರ್ ಮಿಸ್ಟ್ರಿ ಅಂದ ತಕ್ಷಣ ಆಶ್ಚರ್ಯ ಆಯಿತು. ಮೊದಲು ಶೀತಲ್ ಕರೆ ಮಾಡಿ, “ನೀವು ಒಂದು ಲೇಡಿ ಬಾಸ್ ಪಾತ್ರ ಮಾಡಬೇಕು. ತುಂಬಾ ಸ್ಟ್ರಾಂಗ್ ಆದ ಸ್ವಾಭಿಮಾನದ ಮಹಿಳೆಯಾಗಿ ನೀವು ಕಾಣಿಸಿಕೊಳ್ಳಬೇಕು’ ಎಂದರು. ನನಗೆ ತಕ್ಷಣ ನೆನಪಾಗಿದ್ದು ನನ್ನ ತಾಯಿ. ಅವರು ಹಾಗೆ ತುಂಬಾ ಸ್ವಾಭಿಮಾನಿ. ಹಾಗಾಗಿ ಚಿತ್ರ ಕಥೆ ಇಷ್ಟವಾಯಿತು. ಸಿನಿಮಾ ಚೆನ್ನಾಗಿ ಬಂದಿದೆ’ ಎಂದರು.
ಇದನ್ನೂ ಓದಿ:ಸಾಮಾನ್ಯ ಮನುಷ್ಯನ ಅಸಾಮಾನ್ಯ ಶಕ್ತಿ: ಇಂದಿನಿಂದ ‘ಬೈರಾಗಿ’ ದರ್ಶನ
ಚಿತ್ರದಲ್ಲಿ ನಿರೂಪ್ ಭಂಡಾರಿ ನಾಯಕನಾಗಿ ಕಾಣಿಸಿಕೊಂಡಿದ್ದು, ನಾಯಕಿಯರಾಗಿ ಅಮೃತಾ ಅಯ್ಯಂಗಾರ್ ಹಾಗೂ ಸಂಜನಾ ಆನಂದ ಅಭಿನಯಿಸಿದ್ದಾರೆ. ರವಿಶಂಕರ್, ಮಧುಸೂಧನ್ ರಾವ್, ಲೇಖಾ ನಾಯ್ಡು , ನಂದಕುಮಾರ್, ಕಾಮಿಡಿ ಕಿಲಾಡಿಗಳು ಸೂರಜ್ ಮುಂತಾದವರು ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ವಿಘ್ನೇಶ್ ರಾಜ್ ಛಾಯಾಗ್ರಹಣ, ಪ್ರದೀಪ್ ರಾವ್ ಸಂಕಲನ, ಅರ್ಜುನ್ ಜನ್ಯಾ ಸಂಗೀತ ಸಂಯೋಜನೆ, ವಿರೇಶ್ ಸಂಭಾಷಣೆ ಚಿತ್ರಕ್ಕಿದೆ.
ವಾಣಿ ಭಟ್ಟ