Advertisement

Sheetal Devi: ಕೈಗಳಿಲ್ಲದ ಹುಡುಗಿ ಬಿಲ್ಗಾರಿಕೆಯಲ್ಲಿ ನಿಪುಣೆ; ಇದು ಸ್ಪೂರ್ತಿಯ ಕಥೆ

06:15 PM Sep 05, 2024 | ಕೀರ್ತನ್ ಶೆಟ್ಟಿ ಬೋಳ |

ಆಕೆ ಜನಿಸಿದ್ದು ಭಾರತದ ಶಿಖರ ಜಮ್ಮು ಕಾಶ್ಮೀರದಲ್ಲಿ. ಅಂದ ಚಂದವಾಗಿ ಹುಟ್ಟಿದ್ದ ಮುಗುವಿಗೆ ಕೈಗಳೇ ಬೆಳೆದಿರಲಿಲ್ಲ. ಸದಾ ಗುಂಡಿನ ಮೊರೆತಗಳಿಗೆ ಸಾಕ್ಷಿಯಾಗುವ ಕಿಶ್ತ್ವಾರ್‌ ನಲ್ಲಿ (Kishtwar) ಬೆಳೆದ ಹುಡುಗಿ ಇದೀಗ ಇಡೀ ಕ್ರೀಡಾ ಪ್ರಪಂಚ ಭಾರತದೆಡೆಗೆ ತನ್ನತ್ತ ತಿರುಗಿ ನೋಡುವಂತೆ ಮಾಡಿದ‌ ಬಿಲ್ಗಾರಿಕಾ (Archer) ಸಾಧಕಿ. ಅವರೇ 17 ವರ್ಷ ಪ್ರಾಯದ ಶೀತಲ್‌ ದೇವಿ.

Advertisement

ಬನ್ನಿ, ಶೀತಲ್‌ ದೇವಿ ಎಂಬ ಅಪೂರ್ವ ಪ್ರತಿಭೆಯ ಕಥೆ ಓದಿ ಬರೋಣ…

ಲೋಯಿಧರ್ ಹಳ್ಳಿಯಲ್ಲಿರುವ ಗುನ್‌ಮಾರ್ಧರ್ 1,510 ಮೀಟರ್ ಎತ್ತರದಲ್ಲಿರುವ ಒಂದು ಸುಂದರವಾದ ಪ್ರದೇಶ. ಇದು ಜಮ್ಮು ವಿಭಾಗದ ಕಿಶ್ತ್ವಾರ್‌ ಅನ್ನು ಕಾಶ್ಮೀರದ ಅನಂತನಾಗ್‌ ಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 244 ಇಲ್ಲಿ ಹಾದುಹೋಗುತ್ತದೆ. ಇಲ್ಲಿರುವ ಸುಮಾರು 400 ಕುಟುಂಬಗಳ ಪ್ರಾಥಮಿಕ ಉದ್ಯೋಗವೆಂದರೆ ಜೋಳದ ಕೃಷಿ. ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ ನಲ್ಲಿ ಶೀತಲ್ ದೇವಿ ಎರಡು ಚಿನ್ನದ ಪದಕಗಳನ್ನು ಗೆದ್ದ ನಂತರ ಕಿಶ್ತ್ವಾರ್‌ ಪಟ್ಟಣ ಮತ್ತು ಲೋಯಿಧರ್ ಹಳ್ಳಿಗಳ ನಡುವೆ ರಾಜ್ಯ ಸಾರಿಗೆ ಬಸ್ ಸೇವೆ ಪ್ರಾರಂಭಿಸಿತ್ತು. ಆದರೆ ಇದೀಗ ಪ್ರಯಾಣಿಕರ ಕೊರತೆಯಿಂದಾಗಿ ಇಲ್ಲಿನ ಬಸ್‌ ಸಂಚಾರವೂ ವಿರಳವಾಗಿದೆ. ಇದು ಶೀತಲ್‌ ದೇವಿ (Sheetal Devi) ಅವರು ಬೆಳೆದ ಪ್ರದೇಶ.

ಇಲ್ಲಿನ ಪ್ರದೇಶ ಹೇಗಿದೆ ಎಂದರೆ, ಕಿಶ್ತ್ವಾರ್‌ ನಿಂದ ಲೋಯಿಧರ್‌ ವರೆಗಿನ ರಸ್ತೆಯಲ್ಲಿ ಸಾಗಿದರೆ ರಸ್ತೆಯುದ್ದಕ್ಕೂ ಮೂವರು ವಾಂಟೆಡ್ ಭಯೋತ್ಪಾದಕರ ವಿವರಗಳನ್ನು ನೀಡುವ ಪೋಸ್ಟರ್‌ ಗಳು ನಿಮಗೆ ಗೋಚರಿಸುತ್ತವೆ. ಆಗಾಗ ಭಾರತೀಯ ಸೇನಾ ಬೆಂಗಾವಲು ಪಡೆಗಳು ಇಲ್ಲಿ ಚಲಿಸುತ್ತಿರುತ್ತದೆ.

Advertisement

ಗುನ್‌ಮಾರ್ಧರ್ ನ ಮನ್‌ ಸಿಂಗ್‌ ಮತ್ತು ಶಕ್ತಿ ದೇವಿ ದಂಪತಿಗೆ ಜನಿಸಿದ ಶೀತಲ್‌ ದೇವಿಗೆ ಹುಟ್ಟುವಾಗಲೇ ಫೋಕೊಮೇಲಿಯಾ (Phocomelia) ಎಂಬ ಸಮಸ್ಯೆ ಕಾಡಿತ್ತು. ಅವರ ಕೈಗಳು ಬೆಳೆದಿರಲೇ ಇಲ್ಲ. ಆದರೆ ಸಿಂಗ್‌ ದಂಪತಿಯು ಮಗಳಿಗೆ ಇದು ಕಾಡದಂತೆ ಬೆಳೆಸಿದರು. ಶೀತಲ್‌ ಕೂಡಾ ಎಲ್ಲವನ್ನು ಮೀರಿ ಬೆಳೆದಿದ್ದಾಳೆ ಎಂಬ ಸಂತಸ, ಹೆಮ್ಮೆ ಅವರಿಗಿದೆ.

ಆಕೆಯ ಹೆಸರಿನಂತೆ ಶೀತಲ್‌ ಯಾವಾಗಲೂ ಶಾಂತವಾಗಿಯೇ ಇರುತ್ತಾಳೆ ಎನ್ನುತ್ತಾರೆ ತಂದೆ ಮನ್‌ ಸಿಂಗ್.‌

ಮೂರು ದಶಕಗಳಿಂದ ಗುನ್‌ಮಾರ್ಧರ್ ನಲ್ಲಿರುವ ಈ ಕುಟುಂಬಕ್ಕಿರುವುದು ಅರ್ಧ ಎಕರೆಯಷ್ಟು ಜಾಗ. ಅದರಲ್ಲಿ ಅವರು ಜೋಳ ಮತ್ತು ತರಕಾರಿ ಬೆಳೆಯುತ್ತಾರೆ. “ಕುಟುಂಬವನ್ನು ಸಾಕಲು ಏನು ಮಾಡಬೇಕೋ ಅದನ್ನು ಮಾಡುತ್ತೇನೆ ನಾನು. ಕುಟುಂಬದ ಊಟಕ್ಕಾಗಿ ಕಲ್ಲು ಪುಡಿ ಮಾಡುವ ದಿನಗೂಲಿ ನೌಕರನಾಗಿ ದುಡಿಯತ್ತಿದ್ದೆ. ಈಗಲೂ ಕೆಲವೊಮ್ಮೆ ಕಲ್ಲಿನ ಕೆಲಸಕ್ಕೆ ಹೋಗುತ್ತೇನೆ” ಎನ್ನುತ್ತಾರೆ ಮನ್‌ ಸಿಂಗ್.‌

ಮಗಳ ದೈಹಿಕ ಸ್ಥಿತಿಯ ಕಾರಣದಿಂದ ಆಕೆಯನ್ನು ಪೋಷಕರು ಶಾಲೆಗೆ ಸೇರಿಸಿರಲಿಲ್ಲ. ಒಂದು ದಿನ ಸ್ಥಳೀಯ ಶಾಲೆಯ ಶಿಕ್ಷಕರೊಬ್ಬರು ಮದುವೆ ಸಮಾರಂಭದಲ್ಲಿ ಆಕೆಯನ್ನು ನೋಡಿ ಇದರ ಬಗ್ಗೆ ವಿಚಾರಿಸಿದರು. ಶೀತಲ್‌ ಪೋಷಕರ ಮನವೊಲಿಸಿದ ಶಿಕ್ಷಕ ಶಾಲೆಗೆ ಸೇರಿಸಿದರು. ಆಕೆ ಶಾಲೆಯಲ್ಲಿ ಕಾಲು ಬೆರಳು ಬಳಸಿ ಬರೆಯುತ್ತಿದ್ದಳು. ಇದನ್ನು ನೋಡಿ ಈಕೆ ದೊಡ್ಡದಾಗಿ ಏನಾದರೂ ಸಾಧಿಸುತ್ತಾಳೆ ಎಂದನಿಸಿತು ಎನ್ನುತ್ತಾರೆ ಶಿಕ್ಷಕ ಸಂದೀಪ್‌ ಕುಮಾರ್‌ ರಾಥೋರ್.‌

ಅದು 2021ರ ಸಮಯ. ಆಗ 11 ರಾಷ್ಟ್ರೀಯ ರೈಫಲ್ಸ್‌ ನಲ್ಲಿದ್ದ ಕರ್ನಲ್‌ ಶಿಶುಪಾಲ್‌ ಸಿಂಗ್‌ ಅವರು ಶಾಲಾ ಕಾರ್ಯಕ್ರಮವೊಂದರಲ್ಲಿ ಶೀತಲ್‌ ರನ್ನು ನೋಡಿದ್ದರು. ಅವರು ಕುಟುಂಬಕ್ಕೆ ಶೀತಲ್ ಪ್ರಾಸ್ಥೆಟಿಕ್ ಅಂಗಗಳನ್ನು ಪಡೆಯಲು ಸಹಾಯ ಮಾಡಲು ಮುಂದಾದರು. ಬೆಂಗಳೂರಿನ ಮೇಜರ್ ಅಕ್ಷಯ್ ಮೆಮೋರಿಯಲ್ ಟ್ರಸ್ಟ್ ಮತ್ತು ಆನ್‌ಲೈನ್ ಕಥೆ ಹೇಳುವ ವೇದಿಕೆಯಾದ ಬೀಯಿಂಗ್ ಯು, ಶೀತಲ್ ಮತ್ತು ಅವರ ಸಹೋದರಿ ಶಿವಾನಿ ಕತ್ರಾದಲ್ಲಿರುವ ಶ್ರೀ ಮಾತಾ ವೈಷ್ಣೋ ದೇವಿ ಶ್ರೈನ್ ಬೋರ್ಡ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ದಾಖಲಾಗಲು ಸಹಾಯ ಮಾಡಿತು. ಇಲ್ಲಿಂದ ಬಿಲ್ಲುಗಾರ್ತಿಯಾಗಿ ಶೀತಲ್ ಅವರ ವೃತ್ತಿಜೀವನವು ಪ್ರಾರಂಭವಾಯಿತು.

ಶೀತಲ್‌ ಮತ್ತು ಶಿವಾನಿ ಕೋಚ್‌ ಕುಲದೀಪ್‌ ವಿದ್ವಾನ್‌ ಮತ್ತು ಅಭಿಲಾಶ ಅವರಡಿಯಲ್ಲಿ ತರಬೇತಿ ಆರಂಭಿಸಿದ್ದರು. “ಶೀತಲ್‌ ಗೆ ಆರ್ಚರಿಯ ಬಗ್ಗೆ ಏನೂ ಗೊತ್ತಿರಲಿಲ್ಲ. ಆದರೆ ಕತ್ರಾಗೆ ಹೋಗುವಾಗ ಕಾರಿನಲ್ಲಿ ಆಕೆ ಖುಷಿಯಿಂದ ಇದ್ದಳು. ಅದು ಅವಳಿಗೆ ಹೊಸ ಆರಂಭವಾಗಿತ್ತು. ಆರಂಭದಲ್ಲಿ, ಅವಳು ಶೂಟ್ ಮಾಡುವಾಗ, ಬಿಲ್ಲು ಹಿಡಿಯಲು ಬಳಸುವ ಬ್ಯಾಂಡ್‌ನಿಂದಾಗಿ ಅವಳ ಭುಜದಲ್ಲಿ ಬಹಳಷ್ಟು ಗಾಯಗಳಾಗಿತ್ತು. ನಂತರ, ಕುಲದೀಪ್ ಸರ್ ಹೊಸ ಹೋಲ್ಡಿಂಗ್ ಸಾಧನವನ್ನು ತಯಾರಿಸಿದಾಗ ಅವಳಿಗೆ ಸುಲಭವಾಯಿತು. ಈಗ ಇಲ್ಲಿನ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶೀತಲ್ ರಂತೆ ಆಗಲು ಬಯಸಿದ್ದಾರೆ’ ಎನ್ನುತ್ತಾರೆ ಸಹೋದರಿ ಶಿವಾನಿ.

ಕಾಲಿನಿಂದ ಬಿಲ್ಲನ್ನು ಎತ್ತುವ ಶೀತಲ್‌ ತನ್ನ ಭುಜದಲ್ಲಿರುವ ಕ್ಲಿಪ್‌ ಗೆ ಬಾಣವನ್ನು ಬಾಯಿಯಿಂದ ಎಳೆದು ಸಿಕ್ಕಿಸುತ್ತಾರೆ. ಈ ರೀತಿ ಗುರಿ ಇಡುವ ಶೀತಲ್‌ ಸಾಧನೆ ಕಂಡು ಜಗತ್ತು ವಿಸ್ಮಿತವಾಗಿದೆ. ವಿಶ್ವ ಪ್ಯಾರಾ ಚಾಂಪಿಯನ್‌ ಶಿಪ್‌ ನಲ್ಲಿ ಬೆಳ್ಳಿ ಗೆದ್ದ ಶೀತಲ್‌ ತನ್ನ ಪದಕ ಬೇಟೆ ಆರಂಭಿಸಿದ್ದರು. ಬಳಿಕ 2022ರ ಏಷ್ಯನ್‌ ಪ್ಯಾರಾ ಗೇಮ್ಸ್‌ ನಲ್ಲಿ ಎರಡು ಚಿನ್ನದ ಪದಕ ಗೆದ್ದುಕೊಂಡಿದ್ದರು. 2024ರ ಪ್ಯಾರಾಲಂಪಿಕ್ಸ್‌ ನಲ್ಲಿ ರಾಕೇಶ್‌ ಕುಮಾರ್‌ ಜತೆ ಕಂಚಿನ ಪದಕ ಗೆದ್ದ ಶಿವಾನಿ ಮತ್ತೊಮ್ಮೆ ಭಾರತಕ್ಕೆ ಗರಿಮೆ ತಂದಿದ್ದಾರೆ.

“ನಮ್ಮ ಗ್ರಾಮ ಮತ್ತು ಸುತ್ತಮುತ್ತಲು ಸಿಂತಾನ್‌ ಪಾಸ್‌ ಭಾರಿ ಪ್ರಸಿದ್ದಿ ಪಡೆದಿದೆ. ಆದರೆ ಇದೀಗ ಶೀತಲ್‌ ನಮಗೆ ಹೊಸ ಗುರುತು ನೀಡಿದ್ದಾಳೆ. ಆಕೆ ಮೆಡಲ್‌ ನಮ್ಮ ದೊಡ್ಡ ಸಂಪತ್ತು” ಎನ್ನುತ್ತಾರೆ ತಂದೆ ಮನ್‌ ಸಿಂಗ್.‌

17 ವರ್ಷ ಪ್ರಾಯದ, ವಿಕಲ ಚೇತನ ಹುಡುಗಿ ಶೀತಲ್‌ ಇದೀಗ ಮನೆಯ ಆಧಾರಸ್ಥಂಬ. ತಂದೆ ಮನ್‌ ಸಿಂಗ್‌ ಮತ್ತು ಅಜ್ಜ 88 ವರ್ಷದ ರೂಪ್‌ ಚಂದ್‌ ಮೇಲ್ವಿಚಾರಣೆಯಲ್ಲಿ ಎರಡು ಕೋಣೆಯ ಹೊಸ ಮನೆ ಕಟ್ಟಲಾಗುತ್ತಿದೆ. ತನಗೆ ಬಹುಮಾನ ರೂಪದಲ್ಲಿ ಬಂದ ಹಣದಿಂದ ಈ ಮನೆ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾಳೆ ಶೀತಲ್.

ಕೀರ್ತನ್‌ ಶೆಟ್ಟಿ ಬೋಳ

Advertisement

Udayavani is now on Telegram. Click here to join our channel and stay updated with the latest news.

Next