ಉಡುಪಿ: ಈ ವರ್ಷದ ಪ್ರವಾಸೋದ್ಯಮ ದಿನದ ಪ್ರಯುಕ್ತ ಸ್ಥಳೀಯ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಿರುವುದು ವಿಶೇಷ. ಉಡುಪಿ ಜಿಲ್ಲೆಯು ವಿಶೇಷವಾಗಿ ದೇವಾಲಯಗಳಿಗೆ ಹೆಸರುವಾಸಿ. ಅದರಲ್ಲಿ ಒಂದು ನಮ್ಮೂರಿನ 41 ನೇ ಶೀರೂರಿನ ಮೂಲ ಮಠ.
ಇಲ್ಲಿನ ಶ್ರೀ ವೀರ ವಿಠ್ಠಲ ಹಾಗೂ ಉತ್ಸವ ಮೂರ್ತಿ ಮುಖ್ಯಪ್ರಾಣ ದೇವರು ಬಹಳ ವಿಶೇಷ. ಅದರಲ್ಲೂ ಈ ಎರಡು ಮೂರ್ತಿಗಳು ಎದುರು ಬದುರು ನಿಂತಿರುವುದು ನೋಡುವುದೇ ಕಣ್ಣಿಗೆ ಖುಷಿ. ಉಡುಪಿ ಶ್ರೀ ಕೃಷ್ಣ ನ ಅಷ್ಟಮಠಗಳಲ್ಲಿ ಒಂದಾದ ಶೀರೂರು ಮಠ ಉಡುಪಿಯಿಂದ 22 ಕಿಲೋಮೀಟರ್ ದೂರದಲ್ಲಿದೆ. ಉಡುಪಿ ಪಟ್ಟಣದಿಂದ ಮಠಕ್ಕೆ ಸಾರಿಗೆ ಸಂಪರ್ಕ ತುಂಬಾ ವಿರಳ. ತಮ್ಮ ತಮ್ಮ ವಾಹನಗಳಲ್ಲಿ ಭೇಟಿ ನೀಡಬಹುದು.
ಸ್ವರ್ಣಾ ನದಿಯ ತಟದಲ್ಲಿ ನೆಲೆಯಾಗಿರುವ ಈ ಮಠವು ಪಾರಂಪರಿಕವಾಗಿ 32 ಮಠಾಧೀಶರು ಪ್ರಸನ್ನ ಚಿತ್ತರಾಗಿ ಪೂಜಾ ಕೈಂಕರ್ಯಗಳನ್ನು ನಡೆಸಿಕೊಂಡು ಬಂದಿದ್ದಾರೆ. ಸ್ವರ್ಣಾ ನದಿಯು ಮೈದುಂಬಿ ಸದಾ ಕಾಲ ಹರಿಯುತ್ತಾಳೆ. ಈ ನದಿಗೆ ಅಡ್ಡಲಾಗಿ ಸಣ್ಣ ಅಣೆಕಟ್ಟನ್ನು ಕಟ್ಟಲಾಗಿದೆ. ಮಳೆಗಾಲದಲ್ಲಿ ಸ್ವರ್ಣೆಯು 11 ಮೆಟ್ಟಿಲವರೆಗೂ ತಲುಪುತ್ತಾಳೆ. ಮಠದ ವಾಸ್ತುಶಿಲ್ಪದ ಶೈಲಿಯು ಬಹು ಸುಂದರವಾಗಿದೆ. ಕೃಷ್ಣ ಕಾಮಧೇನು ಪ್ರಿಯ. ಅಂತೆಯೇ ಇಲ್ಲಿಯೂ ಸಹ ಗೋವುಗಳನ್ನು ಸಾಕುತ್ತಾರೆ. ಅಂತೆಯೇ ಇಲ್ಲಿ ಮಂಗಗಳು ಅತಿಯಾಗಿ ಕಾಣಸಿಗುತ್ತವೆ.
ಪ್ರವಾಸಿಗರು ಈ ತಾಣಕ್ಕೆ ವರ್ಷದ ಯಾವುದೇ ದಿನದಂದು ಭೇಟಿ ನೀಡಬಹುದು. ವಿಶೇಷವಾಗಿ ಪ್ರತಿ ಶನಿವಾರ ರಂಗ ಪೂಜೆಯನ್ನು ದೇವರಿಗೆ ಸಲ್ಲಿಸಲಾಗುತ್ತದೆ. ಅಂತೆಯೇ ರಾಮ ನವಮಿಯಂದು ಭೇಟಿ ನೀಡುವುದು ತುಂಬಾ ಒಳ್ಳೆಯದು. ಇಲ್ಲಿನ ಮತ್ತೊಂದು ವಿಶೇಷವೆಂದರೆ ಉಡುಪಿ ಶ್ರೀ ಕೃಷ್ಣನಿಗೆ ಕನಕ ಕಿಂಡಿ ಇರುವಂತೆ ಇಲ್ಲಿಯೂ ಸಹ ಪಶ್ಚಿಮಾಭಿಮುಖವಾಗಿ ಇರುವ ಒಂದು ಪುಟ್ಟ ಕಿಂಡಿಯಿಂದ ಶ್ರೀ ವೀರ ವಿಠ್ಠಲನ ದರ್ಶನ ಪಡೆಯುವುದೇ ಸೊಗಸು. 32ನೇ ಶ್ರೀ ಶ್ರಿ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮಿಯವರ ಬೃಂದಾವನವು ಇಲ್ಲಿ ನೋಡಬಹುದು.
ಅಂತೆಯೇ ಈ ಮಠದ ಅಣತಿ ದೂರದಲ್ಲಿ ಹಲವಾರು ದೇವಳಗಳು ಕಾಣಸಿಗುತ್ತವೆ. ಸುತ್ತಲೂ ಹಚ್ಚ ಹಸುರಿನ ಹೊದಿಕೆ, ಬಳಕುತಾ ಶಾಂತ ಚಿತ್ತೆಯಾಗಿ ಹರಿಯುವ ಸ್ವರ್ಣೆ, ಕಾಮಧೇನು, ಕಪಿ ಗುಂಪು, ಶ್ರಿ ವೀರ ವಿಠ್ಠಲ, ಮುಖ್ಯಪ್ರಾಣ ದೇವರು ಎಂತಹ ಚಂಚಲ ಮನಸ್ಸನ್ನು ಶಾಂತವಾಗಿ ಇರಿಸುತ್ತದೆ ಹಾಗೂ ಮನಸ್ಸನ್ನು ಆಧ್ಯಾತ್ಮದ ಕಡೆಗೆ ಒಯ್ಯುತ್ತದೆ. ನೀವು ಆಧ್ಯಾತ್ಮ ಪ್ರಿಯರಾದರೆ, ಪ್ರಕೃತಿಪ್ರಿಯರಾದರೆ ಖಂಡಿತಾಗಿಯೂ ನಮ್ಮ 41ನೇ ಶೀರೂರು ನಿಮಗೆ ಸೂಕ್ತವಾದ ಪ್ರವಾಸಿ ತಾಣವೆಂಬುದರಲ್ಲಿ ಸಂಶಯವಿಲ್ಲ.