ಕೆರೂರ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ನೆರವೇರಿದ ಕುರಿ, ಟಗರು ಹಾಗೂ ಹೋತಗಳ ಸಂತೆಯಲ್ಲಿ ವ್ಯಾಪಾರ, ವಹಿವಾಟು ಜೋರಾಗಿದ್ದು ಕಂಡು ಬಂದಿತು. ಈದ ಉಲ್ ಫೀತ್ರ ಹಬ್ಬದ ಆಚರಣೆ ನಿಮಿತ್ತ ಕೆರೂರ ಸಂತೆಯಲ್ಲಿ ಮುಖ್ಯವಾಗಿ ಜವಾರಿ ತಳಿಗಳಾದ ಟಗರು, ಹೋತಗಳಿಗೆ ಭಾರೀ ಬೇಡಿಕೆ ಕಂಡು ಬಂದಿತು.
ಜವಾರಿ ಹಾಗೂ ಅಷ್ಟೇ ರುಚಿಕರ ಮಾಂಸಕ್ಕೆ ಹೆಸರಾದ ಉತ್ತರ ಕರ್ನಾಟಕ ಭಾಗದ ದಷ್ಟಪುಷ್ಟ ಟಗರು, ಗಂಡು ಮೇಕೆ ಗಾತ್ರ ಮತ್ತು ತೂಕಕ್ಕೆ ತಕ್ಕಂತೆ ಬೆಲೆಗಳಿಗೆ ಮಾರಾಟವಾದವು. ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಮುಂತಾದ ಭಾಗಗಳಿಂದ ಕುರಿ ಸಂತೆಯಲ್ಲಿ ಮಾರಾಟಕ್ಕೆ ಬಂದಿದ್ದ ಟಗರು, ಹೋತಗಳು ಸುಮಾರು 30 ಸಾವಿರದಿಂದ ಹಿಡಿದು 45 ಸಾವಿರ ರೂ. ವರೆಗೆ ಪೈಪೋಟಿ ದರದಲ್ಲಿ ಮಾರಾಟವಾದವು ಎಂದು ಯುವ ವರ್ತಕ ಸಂಜು ಹಳಕಟ್ಟಿ ಸಂತೆಯ ವಹಿವಾಟು ವಿವರಿಸಿದರು.
ಇಲ್ಲಿನ ಜವಾರಿ ತಳಿಗಳನ್ನು ಕೊಂಡೊಯ್ಯಲು ಮಹಾರಾಷ್ಟ್ರದ ಪುಣೆ, ಸತಾರಾ, ಮುಂಬೈ ಮತ್ತು ಕೇರಳದ ಪಾಲಕ್ಕಾಡ, ತಮಿಳುನಾಡು, ಆಂಧ್ರಗಳಿಂದ ನೂರಾರು ಸಗಟು ವ್ಯಾಪಾರಸ್ಥರು, ದೊಡ್ಡ ದೊಡ್ಡ ವಾಹನಗಳೊಂದಿಗೆ ಖರೀದಿಗೆ ಆಗಮಿಸಿದ್ದು ಕಂಡು ಬಂದಿತು.
ಮುಖ್ಯವಾಗಿ ಇಲ್ಲಿನ ಕುರಿ, ಮೇಕೆ ಸಂತೆಯಲ್ಲಿ ಮುಸ್ಲಿಂರ ಪ್ರಮುಖ ಹಬ್ಬಗಳಾದ ಬಕ್ರೀದ್ ಹಾಗೂ ರಂಜಾನ ಹಬ್ಬಗಳಿಗೆ ಮುನ್ನ ಇಲ್ಲಿ ಸಿಗುವ ಜವಾರಿ ತಳಿಯ ರುಚಿಕರ ಟಗರು, ಗಂಡು ಮೇಕೆಗಳನ್ನು ಕೊಂಡೊಯ್ಯಲು ಕಾರು, ಮಿನಿ ಲಾರಿ, ಕ್ರೂಷರ್ ವಾಹನಗಳಲ್ಲಿ ಪರ ರಾಜ್ಯಗಳ ವರ್ತಕರು ತಂಡೋಪ ತಂಡವಾಗಿ ಆಗಮಿಸುವುದು ಸಾಮಾನ್ಯ ಸಂಗತಿಯಾಗಿದೆ ಎನ್ನುತ್ತಾರೆ ಸ್ಥಳೀಯ ವ್ಯಾಪಾರಿ ರಹಿಮಾನ ಸಾಬ್ ಧಾರವಾಡ
.
-ಜೆ.ವಿ. ಕೆರೂರ