ದೊಡ್ಡಬಳ್ಳಾಪುರ: ಮನೆಗೆ ನುಗ್ಗಿ ಕುರಿಗಳನ್ನು ಕದಿಯುವುದು ಸಾಮಾನ್ಯ ವಾಗಿದ್ದು, ಇಲ್ಲೊಂದು ಪ್ರಕರಣದಲ್ಲಿ ಕಳ್ಳರು ತಮ್ಮ ವಿಭಿನ್ನ ತಂತ್ರಗಾರಿಕೆ ರೂಪಿಸಿ ತಮ್ಮ ಕೈಚಳಕ ತೋರಿದ್ದಾರೆ.
ತಮ್ಮ ಕೃತ್ಯ ಎಸಗುವ ಒಂದು ವಾರ ಮುಂಚೆ ಅಲ್ಲಿ ಸಾಕಿದ್ದ ನಾಯಿಯನ್ನು ಕಿಡ್ನಾಪ್ ಮಾಡಿ ಸುಮಾರು 10 ಲಕ್ಷ ರೂ.ಮೌಲ್ಯದ 28 ಕುರಿಗಳನ್ನು ಕದ್ದೊಯ್ದಿದ್ದಾರೆ. ಬಳಿಕ ನಾಯಿಯನ್ನು ಬಿಟ್ಟು ಕಳುಹಿಸಿದ್ದಾರೆ. ಅಲ್ಲದೇ ಕುರಿ ಕದಿಯುವಾಗ ಕುರಿಗಳು ಕೂಗಿಕೊಳ್ಳದಂತೆ ಮಂಪರು ಬರುವ ಔಷಧ ಸಿಂಪಡಿಸಿ ಕೃತ್ಯ ಎಸಗಿದ್ದಾರೆ.
ತಾಲೂಕಿನ ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯ ಶ್ರವಣೂರು ಗ್ರಾಮದ ಆಂಜನಪ್ಪ ಎಂಬುವರ ಕುರಿ ದೊಡ್ಡಿಯಿಂದ ಗುರುವಾರ ತಡರಾತ್ರಿ ಕಳ್ಳತನ ನಡೆದಿದ್ದು, 28 ಕುರಿಗಳನ್ನು ಕಳವು ಮಾಡಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಆಂಜನಪ್ಪ, ದೊಡ್ಡಿ ಸಮೀಪ ಶಬ್ದವಾಗಿದ್ದಿಂದ ಬೆಳಗಿ ಜಾವ 3 ಗಂಟೆ ಸುಮಾರಿನಲ್ಲಿ ಮನೆಯಿಂದ ಹೊರ ಬಂದು ನೋಡುತ್ತಿದ್ದಂತೆ ಕಳ್ಳರು ಟೆಂಪೋದಲ್ಲಿ ಕುರಿಗಳೊಂದಿಗೆ ಪರಾರಿ ಯಾಗಿದ್ದಾರೆ. ಹಿಂಬಾಲಿಸಿ ಹೋದರೂ ಕೈಗೆ ಸಿಗಲಿಲ್ಲ. ದೊಡ್ಡಿಯಲ್ಲಿ ಇನ್ನು 22 ಕುರಿಗಳು ಮಾತ್ರ ಉಳಿದಿವೆ ಎಂದರು.
ಮನೆಯಲ್ಲಿ ಸಾಕಿಕೊಂಡಿದ್ದ ನಾಯಿ ಒಂದು ವಾರದ ಹಿಂದೆಯಷ್ಟೇ ಕಾಣೆಯಾಗಿತ್ತು. ಸಾಕಷ್ಟು ಹುಡುಕಾಟ ನಡೆಸಿದ್ದರು ಪತ್ತೆಯಾಗಿರಲಿಲ್ಲ. ನಾಯಿ ಮನೆಯಲ್ಲಿ ಇರುವಾಗ ಯಾರೂ ಸಹ ನಮ್ಮ ಮನೆ ಸಮೀಪ ಬರಲು ಹಗಲಿನ ವೇಳೆಯಲ್ಲೂ ಭಯಪಡುತ್ತಿದ್ದರು. ಆದರೆ, ನಾಯಿ ಕಾಣೆಯಾದ ನಂತರ ಕುರಿಗಳ ಕಳವು ನೆಡೆದಿದೆ.
ಕುರಿಗಳು ಕಳವವಾದ ನಂತರ ಶುಕ್ರವಾರ ಬೆಳಗ್ಗೆ ನಾಯಿ ಮತ್ತೆ ಮನೆಗೆ ಬಂದಿದೆ. ಕುರಿ ಕಳವು ಮಾಡಿರುವ ಕಳ್ಳರೇ ನಾಯಿ ಯನ್ನು ಅಪರಿಸಿ ನಂತರ ಕುರಿಗಳ ಕಳವು ನಡೆಸಿರಬಹುದು ಎಂದು ಆಂಜನಪ್ಪ ಅನುಮಾನ ವ್ಯಕ್ತಪಡಿಸಿದ್ದಾರೆ.
ರಾತ್ರಿ ಕಳವು ಮಾಡುವ ಸಮಯದಲ್ಲಿ ಕುರಿಗಳು ಕೂಗಿಕೊಳ್ಳದಂತೆ ಕುರಿಗಳ ಮೈ ಹಾಗೂ ಮುಖದ ಮೇಲೆ ಮಂಪರು ಬರುವ ಔಷಧ ಸಿಂಪರಣೆ ಮಾಡಲಾಗಿದೆ. ದೊಡ್ಡಿಯಲ್ಲಿ ಉಳಿದಿರುವ ಇನ್ನು 22 ಕುರಿಗಳು ಸಹ ಬೆಳಗ್ಗೆ 9 ಗಂಟೆ ಸುಮಾರಿನವರೆಗೂ ಕೂಗಿಕೊಳ್ಳದೆ ಮಂಕಾಗಿ ನಿಂತಿದ್ದವು ಎಂದರು.