ಬೆಂಗಳೂರು: ಅಗೋ ಅಲ್ಲಿ… ದಿಲ್ಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ನಗುತ್ತ ನಿಂತಿದ್ದಾರೆ. ಈಗೋ ಇಲ್ಲಿ… ವಿರೋಧಿ ಮಿತ್ರರಿಗೆ ತಿರುಗೇಟು ನೀಡಲು ಮುಂದಾಗಿರುವ ಪ್ರಧಾನಿ ಮೋದಿ, ಇತ್ತ ಬನ್ನಿ ಅಟಲ್ ಜೀ ಏನೋ ಚಿಂತೆಯಲ್ಲಿ ಮುಳುಗಿದ್ದಾರೆ, ಅತ್ತ ನೋಡಿ ಅಡ್ವಾಣಿ ಗಂಭೀರ ವದನ.
ಇವೆರೆಲ್ಲಾ ಹೀಗೇಕೆ ಇದ್ದಾರೆ? ಎಲ್ಲಿದ್ದಾರೆ ಅವರೆಲ್ಲಾ ಎಂದು ಯೋಚಿಸುತ್ತಿದ್ದಿರಾ..?
ಅಂತಾರಾಷ್ಟ್ರೀಯ ವ್ಯಂಗ್ಯಚಿತ್ರಕಾರರ ದಿನದ ಅಂಗವಾಗಿ ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆ ಟ್ರಿನಿಟಿ ವೃತ್ತದಲ್ಲಿನ ಸಂಶಯ ಗ್ಯಾಲರಿಯಲ್ಲಿ ಮೇ 18ರವರೆಗೂ ಹಮ್ಮಿಕೊಂಡಿರುವ ಪರೇಶ್ ನಾಥ್ ರಚನೆಯ ವ್ಯಂಗ್ಯಚಿತ್ರಗಳಲ್ಲಿ ಇವರನ್ನೆಲ್ಲಾ ಕಾಣಬಹುದು.
ಭಾರತದ ಮಾಜಿ ಉಪ ರಾಷ್ಟ್ರಪತಿ ಭೈರೋನ್ ಸಿಂಗ್ ಶೇಖಾವತ್, ನಗುತ್ತಾ ನಿಂತ ಕೆ.ಆರ್.ನಾರಾಯಣನ್, ಲೇಖನಿಯನ್ನೇ ರಾಕೆಟ್ ಮಾಡಿಕೊಂಡು ಹಾರುತ್ತಿರುವ ನೊಬೆಲ್ ಪ್ರಶಸ್ತಿ ಪುರಸ್ಕೃತ ವಿ.ಎಸ್.ನೈಪೌಲ್, ಇಸ್ರೇಲ್‌ನ ಮಾಜಿ ಪ್ರಧಾನಿ ಏರಿಯಲ್ ಶರೋನ್‌ರ ಹದ್ದಿನ ನೋಟ ನೋಡುಗರಲ್ಲಿ ನಗೆ ಉಕ್ಕಿಸುತ್ತವೆ.
ಅಮೆರಿಕ ಸೈನಿಕರು ಉಗ್ರರ ವಿರುದ್ಧ ಜಯ ಗಳಿಸಲು ಹುಡುಕುತ್ತಿರುವ ಮಾರ್ಗ, ಹವಾಮಾನ ಬದಲಾವಣೆ; ತಜ್ಞರ ಕೂಗು- ನೀತಿ ನಿರೂಪಕರು ಮಾಲಿನ್ಯಕ್ಕೆ ಮತ್ತಷ್ಟು ಕೊಡುಗೆ ನೀಡುತ್ತಿರುವ ಚಿತ್ರ, ಭೂಮಿ ಮೇಲೆ ಅಲ್ಲದೆ ಸಮುದ್ರದಲ್ಲೂ ಗಡಿ ರೇಖೆ ವಿಸ್ತರಿಸಲು ಮುಂದಾಗಿರುವ ಚೀನಾದ ಹುಚ್ಚಾಟ,
ಉದ್ಯೋಗ ಸೃಷ್ಟಿಯ ಭರವಸೆ ನೀಡುತ್ತ ನಿರುದ್ಯೋಗಿಗಳಿಗೆ ಮಣ್ಣು ಮುಚ್ಚುತ್ತಿರುವ ಚಿತ್ರಗಳು ವ್ಯವಸ್ಥೆಯನ್ನು ವಿಡಂಬಿಸುತ್ತವೆ. ಭ್ರಷ್ಟಚಾರ ನಿಗ್ರಹಕ್ಕೆ ಇಲಿ ಬೋನು ಹಿಡಿದು ನಿಂತ ಅಧಿಕಾರಿ, ಅವನ ಹಿಂಬದಿಯಲ್ಲಿ ರಾಕ್ಷಸ ಗಾತ್ರದಲ್ಲಿ ಬೆಳದು ನಿಂತ ಭ್ರಷ್ಟಚಾರ, ನೀರಿಲ್ಲದ ಈಜುಕೊಳದಲ್ಲಿ ಕ್ರೀಡಾಪಟು ತರಬೇತಿ ಪಡೆಯುತ್ತಿರುವುದು,
ಸೇರಿ ಹಲವು ಚಿತ್ರಗಳು ಸಮಾಜದ ಓರೆಕೋರೆಗಳನ್ನು ಬಿಂಬಿಸುತ್ತವೆ. ವಿಶ್ವಸಂಸ್ಥೆಯ ರಾನಸ್ ಲೂರೀ ವ್ಯಂಗ್ಯಚಿತ್ರ ಪ್ರಶಸ್ತಿಯನ್ನು ಎರಡು ಬಾರಿ ಪಡೆದ ಮೊದಲ ಭಾರತೀಯ ವ್ಯಂಗ್ಯಚಿತ್ರಕಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಪರೇಶ್ ನಾಥ್‌ರ ರಾಜಕೀಯ, ರಾಜಕಾರನಿಗಳ ವಿಡಂಬನಾತ್ಮಕ ಕಾಟೂನ್‌ಗಳು ನೋಡುಗರನ್ನು ನಗೆಗಡಲಿನಲ್ಲಿ ತೇಲಿಸುತ್ತವೆ.
ವ್ಯಂಗ್ಯಚಿತ್ರಕಾರರು ಮತ್ತೂಬ್ಬರ ಮನಸ್ಸಿಗೆ ನೋವಾಗದಂತೆ ಸಮಾಜದ ಓರೆಕೋರೆಗಳನ್ನು ಚಿತ್ರದಲ್ಲಿ ಸೆರೆ ಹಿಡಿಯಬೇಕು. ತಮ್ಮ ಚಿತ್ರಗಳ ಮೂಲಕ ವ್ಯವಸ್ಥೆ ಮೇಲೆ ಪ್ರಭಾವ ಬೀರುವುದು ಸವಾಲಿನ ಕೆಲಸ.
-ಪರೇಶ್ ನಾಥ್, ವ್ಯಂಗ್ಯಚಿತ್ರಕಾರ