Advertisement

ಕ್ಷೇತ್ರದ ಪ್ರಥಮ ಮಹಿಳಾ ಶಾಸಕಿಯಾಗಿ ವಿಧಾನಸಭೆ ಪ್ರವೇಶಿಸುವೆ

12:48 PM Oct 27, 2021 | Shwetha M |

ಸಿಂದಗಿ: ಸಿಂದಗಿ ಉಪಚುನಾವಣೆ ಕಣ ರಂಗೇರುತ್ತಿದೆ. ಕ್ಷೇತ್ರ ಉಳಿಸಿಕೊಳ್ಳಲೇಬೇಕು ಎಂದು ಜೆಡಿಎಸ್‌ ಮತದಾರರ ಮನವೊಲಿಸುವ ಪ್ರಯತ್ನದೊಂದಿಗೆ ಬಿರುಸಿನ ಪ್ರಚಾರ ನಡೆಸಿದೆ. ಪಕ್ಷದ ಅಭ್ಯರ್ಥಿ ನಾಜಿಯಾ ಅಂಗಡಿ ಅವರನ್ನು ಗೆಲ್ಲಿಸಬೇಕು ಎಂದು ಜೆಡಿಎಸ್‌ ವರಿಷ್ಠರಾದ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಮಾಜಿ ಸಚಿವ ಎಚ್‌.ಡಿ. ರೇವಣ್ಣ, ಸಂಸದ ಪ್ರಜ್ವಲ್‌ ರೇವಣ್ಣ ಕ್ಷೇತ್ರಾದ್ಯಂತ ಬಿರುಸಿನ ಪ್ರಚಾರ ನಡೆಸಿದ್ದಾರೆ.

Advertisement

ಚುನಾವಣಾ ಕಣದಲ್ಲಿ ಬಿಡುವಿಲ್ಲದ ಪ್ರಚಾರದ ನಡುವೆಯೂ ಜೆಡಿಎಸ್‌ ಪಕ್ಷದ ಅಭ್ಯರ್ಥಿ ನಾಜಿಯಾ ಅಂಗಡಿ “ಉದಯವಾಣಿ’ಯೊಂದಿಗೆ ಮಾತನಾಡಿದ್ದಾರೆ. ಜನ ಜೆಡಿಎಸ್‌ ಯಾಕೆ ಬೆಂಬಲಿಸಬೇಕು?: ಈ ಕ್ಷೇತ್ರ ಬರಡಾಗಿತ್ತು. ಬರ ತಾಂಡವವಾಡುತ್ತಿತ್ತು. ಈ ಊರಿಗೆ ಹೆಣ್ಣು ಕೊಡಲೂ ಹಿಂದೆ ಮುಂದೆ ನೋಡುವಂತಹ ಕಾಲವೊಂದಿತ್ತು. ಆದರೆ ಎಚ್‌.ಡಿ. ದೇವೇಗೌಡರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಗೆ ಚಾಲನೆ ನೀಡಿ ನೀರಾವರಿ ಕ್ಷೇತ್ರವನ್ನಾಗಿ ಪರಿವರ್ತಿಸಿದರು.

ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ವೇಳೆ ಆಲಮೇಲ ಪಟ್ಟಣ ತಾಲೂಕು ಕೇಂದ್ರವಾಗಿ ಘೋಷಿಸಿದರು. ಆದರೆ ನಂತರ ಬಂದ ಸರಕಾರ ಅಲ್ಲಿ ಸಂಪೂರ್ಣವಾಗಿ ಸರಕಾರಿ ಕಚೇರಿಗಳನ್ನು ಆರಂಭಿಸಿಲ್ಲ. ಅಲ್ಲದೇ ಯಾವುದೇ ಅಭಿವೃದ್ಧಿ ಮಾಡಿಲ್ಲ. ಆಲಮೇಲ ಪಟ್ಟಣದಲ್ಲಿ ತೋಟಗಾರಿಕೆ ಕಾಲೇಜು ಮಂಜೂರು ಮಾಡಿದ್ದಾರೆ. ನಾನು ಶಾಸಕಿಯಾದರೆ ಆಲಮೇಲ ತಾಲೂಕು ಕೇಂದ್ರ ಅಭಿವೃದ್ಧಿಯೊಂದಿಗೆ ಸಂಪೂರ್ಣ ಆಡಳಿತ ಅಲ್ಲಿಯೇ ನಡೆಯುವಂತೆ ಮಾಡುವೆ. ಅದಕ್ಕಾಗಿ ಜನ ಜೆಡಿಎಸ್‌ ಬೆಂಬಲಿಸಬೇಕು.

ಕ್ಷೇತ್ರದ ಜನತೆಗೆ ನೀಡುವ ಭರವಸೆ ಏನು?

ಶಾಸಕಿಯಾದರೆ ಗ್ರಾಮೀಣ ಭಾಗದ ಸಮಸ್ಯೆಗಳಿಗೆ ಸ್ಪಂದಿಸಿ, ಅಲ್ಲಿನ ಅಭಿವೃದ್ಧಿಗೆ ಶ್ರಮಿಸುವೆ. ಜನರ ಕಷ್ಟಗಳನ್ನು ಅರಿತು ಕೆಲಸ ಮಾಡುವೆ. ಬಡವರು, ಕೃಷಿ ಕೂಲಿ ಕಾರ್ಮಿಕರಿಗೆ ನೆರವು ನೀಡುತ್ತೇನೆ. ರೈತರು ತಮ್ಮ ಹಕ್ಕು ಹಾಗೂ ವಿವಿಧ ಸೌಲಭ್ಯ ಪಡೆಯಲು ತಾಲೂಕು ಕೇಂದ್ರದ ಸುತ್ತ ಅರ್ಜಿ ಹಿಡಿದು ಸುತ್ತಾಡುವ ಪರಿಸ್ಥಿತಿ ಬದಲಾಯಿಸುವೆ. ಸರ್ಕಾರದ ಯೋಜನೆಗಳು ನಿಗದಿತ ಸಮಯದಲ್ಲಿ ಅರ್ಹ ಫಲಾನುಭವಿಗಳಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುವೆ.

Advertisement

ಮಹಿಳೆಯರಿಗೆ ವಿಶೇಷ ಕೊಡುಗೆ ನೀಡುವ ಆಲೋಚನೆ ಇದೆಯೇ?

ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ ಹಲವು ಕಾರ್ಯಗಳನ್ನು ರೂಪಿಸಿ ಮಹಿಳೆಯರ ಮನೆ ಬಾಗಿಲಿಗೆ ಅದನ್ನು ಕೊಂಡೊಯ್ಯುವ ಯೋಜನೆ ಹಾಕಿಕೊಳ್ಳುತ್ತೇನೆ. ಮಹಿಳೆಯರ ಸಮಸ್ಯೆ ಪರಿಹಾರ, ನಿರುದ್ಯೋಗಿ ಯುವಕ ಯುವತಿಯರು ಹತಾಶರಾಗದಂತೆ ಪೂರಕ ಯೋಜನೆಗಳನ್ನು ಸೃಷ್ಟಿಸಿ ಸ್ವಯಂ ಉದ್ಯೋಗ ಕಲ್ಪಿಸಿಕೊಡುವುದು ಸೇರಿದಂತೆ ಹಲವು ಯೋಜನೆ ಜಾರಿಗೆ ತರಲಾಗುವುದು. ಯುವತಿಯರಿಗೆ ಪಿಯುಸಿ ಮತ್ತು ಪದವಿ ನಂತರ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸಹಕಾರಿಯಾಗುವಂತಹ ತರಬೇತಿ ಕೇಂದ್ರ ತಾಲೂಕು ಕೇಂದ್ರದಲ್ಲಿ ಆರಂಭಿಸಲಾಗುವುದು. ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವಂತೆ ಪ್ರೋತ್ಸಾಹ ನೀಡುವ ಇರಾದೆ ಇದೆ. ಗ್ರಾಮೀಣ- ಪಟ್ಟಣ ಭಾಗದ ಮಹಿಳೆಯರ ಸಮಸ್ಯೆಗೆ ಸ್ಪಂದಿಸಿ ಅವರ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವ ಗುರಿ ಹೊಂದಿರುವೆ.

ಇದನ್ನೂ ಓದಿ: ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನೇತೃತ್ವದ ಸಂಪುಟ ರಾಜಿನಾಮೆಗೆ ಪ್ರತಿಪಕ್ಷಗಳ ಆಗ್ರಹ

ಚುನಾವಣಾ ಕಣದಲ್ಲಿ ಟೀಕಿಸುತ್ತಿರುವ ಕಾಂಗ್ರೆಸ್‌ಗೆ ನಿಮ್ಮ ಉತ್ತರ?

ನಾನು ಪದವೀಧರೆ. ನಾವು ನಮ್ಮ ಮನಸ್ಥಿತಿ ಬದಲಾಯಿಸಿಕೊಳ್ಳಬೇಕು. ನಾವು ಜನರ ಹೃದಯಗಳನ್ನು ಬೆಸೆಯಬೇಕೇ ಹೊರತು ಅನಗತ್ಯವಾಗಿ ಟೀಕೆ ಮಾಡುವುದು ಸರಿಯಲ್ಲ. ನಾನು ಈ ಉಪಚುನಾವಣೆಯಲ್ಲಿ ಗೆಲ್ಲಲು ಕಣಕ್ಕೆ ಇಳಿದಿದ್ದೇನೆ. ಯಾವುದೇ ಕಾರಣಕ್ಕೂ ಬೇರೆಯವರನ್ನು ಸೋಲಿಸಲಿಕ್ಕೆ ಅಲ್ಲ. ಜೆಡಿಎಸ್‌ ಮಹಿಳೆಯರಿಗೆ ಟಿಕೆಟ್‌ ನೀಡಿರುವುದು ಕಾಂಗ್ರೆಸ್‌ ಗೆ ಅಸೂಯೆ ಹುಟ್ಟಿಸಿದೆ. ಮಹಿಳಾ ಅಭ್ಯರ್ಥಿಯನ್ನು ಗೆಲ್ಲಿಸಲು ಮಹಿಳೆಯರು ಸ್ವ ಇಚ್ಛೆಯಿಂದ ಎಲ್ಲೆಡೆ ಭರದಿಂದ ಪ್ರಚಾರ ನಡೆಸಿದ್ದಾರೆ. ಹೀಗಾಗಿ ನನ್ನ ಗೆಲುವು ನಿಶ್ಚಿತ. ನಾನು ಸಿಂದಗಿ ಮತಕ್ಷೇತ್ರದ ಮೊದಲ ಮಹಿಳಾ ಶಾಸಕಿಯಾಗಿ ವಿಧಾನಸಭೆಗೆ ಹೋಗುತ್ತೇನೆ. ನಾನು ಎಲ್ಲ ಸಮುದಾಯದ ಮಹಿಳೆಯರ ಧ್ವನಿಯಾಗಿ ಕಾರ್ಯ ನಿರ್ವಹಿಸುತ್ತೇನೆ.

ಕ್ಷೇತ್ರವನ್ನು ಕಾಡುತ್ತಿರುವ ಸಮಸ್ಯೆಗಳಿಗೆ ನಿಮ್ಮ ಸ್ಪಂದನೆ ಹೇಗೆ?

ಸಾಮಾನ್ಯವಾಗಿ ಜನಪ್ರತಿನಿಧಿ ಗಳು ರಾಜಕೀಯ ಚಟುವಟಿಕೆಗಳಲ್ಲಿ ಮಗ್ನರಾದರೆ ಹಳ್ಳಿಗಳ ಅಭಿವೃದ್ಧಿಯಾಗುವುದಿಲ್ಲ. ಜನಪ್ರತಿನಿ ಧಿಗಳು ಹಳ್ಳಿಗಳಿಗೆ ಹೋದರೆ ಅಲ್ಲಿ ರಾಜಕೀಯ ಇರುವುದಿಲ್ಲ. ಅದೊಂದು ಕುಟುಂಬವಿದ್ದಂತೆ. ಊರಿನ ಜನರ ಜೊತೆಗೆ ಚರ್ಚೆ ನಡೆಸಿ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಇಂದು ಇಡೀ ಹಳ್ಳಿಯನ್ನು ಅಭಿವೃದ್ಧಿ ಮಾಡುವ ಜೊತೆಗೆ ಪುನಃ ಒಗ್ಗೂಡಿಸುವ, ಹೊಸ ಚೈತನ್ಯ ತುಂಬುವ ಕಾರ್ಯ ಆಗಬೇಕಿದೆ. ಹಳ್ಳಿಗಳು ಸೇರಿದಂತೆ ಪಟ್ಟಣದಲ್ಲಿ ಮಹಿಳಾ ಶೌಚಾಲಯದ ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಆಗಬೇಕು. ಹಳ್ಳಿಗಳ ಸಂಪರ್ಕ ರಸ್ತೆ, ಬಸ್‌ ಸಂಚಾರ, ಕುಡಿಯವ ನೀರಿನ ವ್ಯವಸ್ಥೆ, ಒಳಚರಂಡಿ ವ್ಯವಸ್ಥೆ, ಸರಕಾರಿ ಶಾಲೆಗಳ ಅಭಿವೃದ್ಧಿ ಹೀಗೆ ಹತ್ತು ಹಲವು ಸಮಸ್ಯೆಗಳಿವೆ. ಮೂಲಸೌಕರ್ಯ ಅಭಿವೃದ್ಧಿ ಜೊತೆಗೆ ಸಾಮಾಜಿಕ ಅಭಿವೃದ್ಧಿಯನ್ನೂ ಸಾ ಧಿಸುವ ಈ ಯೋಜನೆಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸುತ್ತೇನೆ.

-ರಮೇಶ ಪೂಜಾರ

Advertisement

Udayavani is now on Telegram. Click here to join our channel and stay updated with the latest news.

Next