ಬೆಂಗಳೂರು: ಕಿಡ್ನಿ ಸಂಬಂಧಿತ ಕಾಯಿಲೆಗೆ ಚಿಕಿತ್ಸೆ ಪಡೆಯಲು ಬಂದಿದ್ದ ವಿದೇಶಿ ಯುವತಿಯನ್ನು ಕ್ಯಾಬ್‌ಗೆ ಹತ್ತಿಸಿಕೊಂಡಿದ್ದ ಮೂವರು ದುಷ್ಕರ್ಮಿಗಳು ಲೈಂಗಿಕ ದೌರ್ಜನ್ಯ ಎಸಗಿ ಬೆತ್ತಲೆ ಮಾಡಿ ನಡುರಾತ್ರಿಯಲ್ಲಿ ಕಾರಿನಿಂದ ಹೊರದಬ್ಬಿ ಹೋದ ಹೇಯ ಕೃತ್ಯ ಬೆಂಗಳೂರು ಹೊರವಲಯದಲ್ಲಿ ನಡೆದಿದೆ.
ಉಗಾಂಡ ಮೂಲದ 25 ವರ್ಷದ ಸಂತ್ರಸ್ತ ಯುವತಿ ದೆಹಲಿಯಿಂದ ಕಿಡ್ನಿ ಸಂಬಂಧಿತ ಕಾಯಿಲೆಗೆ ನಗರದ ಕಮ್ಮನಹಳ್ಳಿಯಲ್ಲಿರುವ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಆಗಮಿಸಿದ್ದರು. ಜ.16ರಂದು ಚಿಕಿತ್ಸೆ ಪಡೆದ ಬಳಿಕ ಹತ್ತಿರದಲ್ಲಿರುವ ಸ್ನೇಹಿತರ ಮನೆಗೆ ಹೋಗಲು ಓಲಾ ಕ್ಯಾಬ್ ಬುಕ್ ಮಾಡಿದ್ದರು.
ಸ್ಥಳಕ್ಕೆ ಆಗಮಿಸಿದ ಓಲಾ ಕ್ಯಾಬ್ ಚಾಲಕ ಆಕೆಯನ್ನು ಹತ್ತಿಸಿಕೊಂಡಿದ್ದು, ಸಹ ಪ್ರಯಾಣಿಕರಿಬ್ಬರು ಯುವಕರಿದ್ದರು. ಆಕೆಗೆ ಗೊತ್ತಾಗದಂತೆ ಮಾರ್ಗ ಬದಲಿಸಿದ ಕ್ಯಾಬ್ ಚಾಲಕ ನಗರದ ಹೊರವಲಯಕ್ಕೆ ಕರೆದೊಯ್ದು ಸುತ್ತಾಡಿಸಿದ್ದಾನೆ. ಪುನಃ ಮೂವರು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಅಷ್ಟೇ ಅಲ್ಲದೆ ಚಾಕುವಿನಿಂದ ಹೆದರಿಸಿ ಆಕೆಯ ಬಳಿಯಿದ್ದ ಚಿನ್ನಾಭರಣ ಹಾಗೂ ಹಣ ಕಿತ್ತುಕೊಂಡಿದ್ದಾರೆ.
ಮುಂಜಾನೆ 4.30ರ ಸುಮಾರಿಗೆ ದೊಡ್ಡಬಳ್ಳಾಪುರ ಸಮೀಪದ ಆಲಹಳ್ಳಿ ಬಳಿ ನಿರ್ಜನ ಪ್ರದೇಶದಲ್ಲಿ ಆಕೆಯನ್ನು ಬೆತ್ತಲೆ ಮಾಡಿದ್ದು ಕಾರಿನಿಂದ ಕೆಳಗೆ ನೂಕಿ ಪರಾರಿಯಾಗಿದ್ದಾರೆ. ಬಳಿಕ ಯುವತಿ ಸಮೀಪದಲ್ಲಿರುವ ತೋಟದ ಮನೆಯ ಬಳಿ ಹೋಗಿ ಸಹಾಯಕ್ಕೆ ಕಿರುಚಿಕೊಂಡಿದ್ದಾರೆ. ಈ ವೇಳೆ ಮನೆಯ ಸದಸ್ಯರು ಎದ್ದು ಬೆತ್ತಲೆಯಾಗಿದ್ದ ಆಕೆಗೆ ಬಟ್ಟೆ ನೀಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯ ಪೊಲೀಸರು ಸಂತ್ರಸ್ತೆಯನ್ನು ಆಸ್ಪತ್ರೆಗೆ ಚಿಕಿತ್ಸೆ ಕೊಡಿಸಿದ್ದು ಆಕೆಯ ಹೇಳಿಕೆ ಪಡೆದುಕೊಂಡಿದ್ದಾರೆ. ಆರೋಪಿ ಕ್ಯಾಬ್ ಚಾಲಕ ಹಾಗೂ ಇತರ ಇಬ್ಬರು ಆರೋಪಿಗಳ ವಿರುದ್ಧ ಲೈಂಗಿಕ ದೌರ್ಜನ್ಯ, ಸುಲಿಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
* ಮಂಜುನಾಥ ಲಘುಮೇನಹಳ್ಳಿ